ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಖಿಂಪುರ ಹಿಂಸಾಚಾರ: ಆಶಿಶ್‌ ಮಿಶ್ರಾಗೆ 14 ದಿನ ನ್ಯಾಯಾಂಗ ಬಂಧನ

Last Updated 10 ಅಕ್ಟೋಬರ್ 2021, 21:03 IST
ಅಕ್ಷರ ಗಾತ್ರ

ಲಖಿಂಪುರ–ಖೇರಿ: ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಅಜಯ್‌ ಮಿಶ್ರಾ ಅವರ ಮಗ, ಲಖಿಂಪುರ–ಖೇರಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ರಾತ್ರಿ ಬಂಧಿಸಲಾಗಿರುವ ಆಶಿಶ್‌ ಮಿಶ್ರಾ ಅವರನ್ನು ಭಾನುವಾರ 14 ದಿನಗಳ ನ್ಯಾಯಾಂಗ ವಶಕ್ಕೆ ನೀಡಲಾಗಿದೆ.

ಲಖಿಂಪುರ–ಖೇರಿಯಲ್ಲಿ ಅ.3ರಂದು ಪ್ರತಿಭಟನನಿರತ ರೈತರ ಮೇಲೆ ವಾಹನ ಹರಿಸಿದ್ದರಿಂದ ನಾಲ್ವರು ಮೃತಪಟ್ಟಿದ್ದರು. ನಂತರದ, ಹಿಂಸಾಚಾರದಲ್ಲಿ ನಾಲ್ವರು ಮೃತಪಟ್ಟಿದ್ದರು. ರೈತರ ಮೇಲೆ ಹರಿದ ವಾಹನವನ್ನು ಆಶಿಶ್‌ ಅವರೇ ಚಲಾಯಿಸುತ್ತಿದ್ದರು ಎಂದು ರೈತರು ಆರೋಪಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಶಿಶ್‌ ಅವರನ್ನು ಶನಿವಾರ ಸುಮಾರು 12 ಗಂಟೆಗಳ ಕಾಲ ವಿಚಾರಣೆ ನಡೆಸಿದ ಪೊಲೀಸರು, ಬಳಿಕ ಬಂಧಿಸಿ ಮ್ಯಾಜಿಸ್ಟ್ರೇಟ್ ಎದುರು ಹಾಜರುಪಡಿಸಿದರು.

ಆರೋಪಿಯನ್ನು ತನಿಖೆಗಾಗಿ ಪೊಲೀಸ್‌ ವಶಕ್ಕೆ ಒಪ್ಪಿಸುವಂತೆ ಮ್ಯಾಜಿಸ್ಟ್ರೇಟ್‌ ಅವರಿಗೆ ಮನವಿ ಸಲ್ಲಿಸಲಾಗಿದ್ದು, ಈ ಅರ್ಜಿಯ ವಿಚಾರಣೆ ಸೋಮವಾರ ನಿಗದಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಶಿಶ್ ಮಿಶ್ರಾ ಬಂಧನಕ್ಕೆ ರೈತ ನಾಯಕರು ಹಾಗೂ ವಿರೋಧ ಪಕ್ಷಗಳ ಮುಖಂಡರು ಆಗ್ರಹಿಸಿದ್ದರು. ಆದರೆ, ಸಚಿವ ಅಜಯ್ ಮಿಶ್ರಾ ಹಾಗೂ ಆಶಿಶ್‌ ಆರೋಪಗಳನ್ನು ಅಲ್ಲಗಳೆದಿದ್ದರು.

ಘಟನೆಯ ನಂತರ, ಉದ್ರಿಕ್ತ ಪ್ರತಿಭಟನಕಾರರು, ಬಿಜೆಪಿಯ ಇಬ್ಬರು ಕಾರ್ಯಕರ್ತರು ಹಾಗೂ ಅವರ ವಾಹನ ಚಾಲಕನನ್ನು ಹತ್ಯೆ ಮಾಡಿದ್ದಾಗಿ ಆರೋಪಿಸಲಾಗಿದೆ. ಹಿಂಸಾಚಾರದಲ್ಲಿ ಸ್ಥಳೀಯ ಪತ್ರಕರ್ತ ರಾಮನ್‌ ಕಶ್ಯಪ್‌ ಕೂಡ ಮೃತಪಟ್ಟಿದ್ದರು.

ಸ್ಥಳೀಯವಾಗಿ ‘ಮೋನು ಭಯ್ಯಾ’ ಎಂದು ಕರೆಸಿಕೊಳ್ಳುವ ಆಶಿಶ್‌ ಮಿಶ್ರಾ, ತಮ್ಮ ತಂದೆ ಪ್ರತಿನಿಧಿಸುವ ಖೇರಿ ಲೋಕಸಭಾ ಕ್ಷೇತ್ರದ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಎರಡು ಸಮನ್ಸ್‌ಗಳ ಬಳಿಕ ಶನಿ
ವಾರ ಬೆಳಿಗ್ಗೆ ಹತ್ತೂವರೆ ವೇಳೆಗೆ ಎಸ್‌ಐಟಿ ಮುಂದೆ ಹಾಜರಾಗಿದ್ದ ಆರೋಪಿಯನ್ನು ಸತತ ವಿಚಾರಣೆಯ ನಂತರ, ರಾತ್ರಿ 11 ಗಂಟೆ ಹೊತ್ತಿಗೆ ಬಂಧಿಸಲಾಯಿತು. ಆರೋ‍ಪಿಯನ್ನು ರಾತ್ರಿ ಜಿಲ್ಲಾ ಕಾರಾಗೃಹದಲ್ಲಿ ಇರಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ಆರೋಪಿಗಳನ್ನು ಬಂಧಿಸದೇ ಇರುವ ಬಗ್ಗೆ ಸುಪ್ರೀಂ ಕೋರ್ಟ್‌ ಶುಕ್ರವಾರ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಸಾಕ್ಷ್ಯಗಳನ್ನು ಸಂರಕ್ಷಿಸಿ ಇಡಲು ನಿರ್ದೇಶಿಸಿದ್ದ ನ್ಯಾಯಾಲಯ, ತನಿಖೆಯನ್ನು ಬೇರೊಂದು ಸಂಸ್ಥೆಗೆ ವರ್ಗಾಯಿಸುವ ಚಿಂತನೆ ಇದೆ ಎಂದೂ ಹೇಳಿತ್ತು.

ತಮ್ಮ ಬೇಡಿಕೆಗಳಿಗೆ ಅ.11ರ ಒಳಗಾಗಿ ಸ್ಪಂದಿಸದಿದ್ದರೆ, ಲಖಿಂಪುರ–ಖೇರಿಯಲ್ಲಿ ಮೃತಪಟ್ಟ ರೈತರ ಅಸ್ಥಿಯೊಂದಿಗೆ ‘ಶಹೀದ್‌ ಕಿಸಾನ್‌ ಯಾತ್ರಾ’ ನಡೆಸುವುದಾಗಿ ರೈತ ಸಂಘಟನೆಗಳು ಹೇಳಿವೆ.

ಅ.18ರಂದು ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ರೈಲು ತಡೆ ಹಾಗೂ ಅ.26ರಂದು ಲಖನೌದಲ್ಲಿ ಮಹಾ ಪಂಚಾಯತ್‌ ನಡೆಸಲು ಸಂಯುಕ್ತ ಕಿಸಾನ್‌ ಮೋರ್ಚಾ ಕರೆ ನೀಡಿದೆ.

ಅಜಯ್‌ ಮಿಶ್ರಾ ಅವರನ್ನು ಸಂಪುಟದಿಂದ ವಜಾ ಮಾಡುವಂತೆ ಹಾಗೂ ಸೌಹಾರ್ದ ಕದಡಿದ, ಹತ್ಯೆ ಸಂಚು ರೂಪಿಸಿದ ಆರೋಪದಲ್ಲಿ ಬಂಧಿಸಬೇಕು ಎಂದು ಸಂಯುಕ್ತ ಕಿಸಾನ್‌ ಮೋರ್ಚಾ ನಾಯಕ ಯೋಗೇಂದ್ರ ಯಾದವ್‌ ಆಗ್ರಹಿಸಿದ್ದಾರೆ. ಈ ಪ್ರಕರಣದಲ್ಲಿ, ಅವರು ಆರೋಪಿಗಳ ರಕ್ಷಣೆಗೆ ನಿಂತಿದ್ದಾರೆ ಎಂದೂ ಯಾದವ್‌ ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಐಜಿ ಉಪೇಂದ್ರ ಅಗರ್ವಾಲ್‌ ನೇತೃತ್ವದ ಒಂಬತ್ತು ಸದಸ್ಯರ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ಗುರುವಾರ ಇಬ್ಬರನ್ನು ಬಂಧಿಸಿದ್ದ ಪೊಲೀಸರು, ವಿಚಾರಣೆಗೆ ಹಾಜರಾಗುವಂತೆ ಆಶಿಶ್‌ ಮಿಶ್ರಾ ಮನೆ ಮುಂದೆ ನೋಟಿಸ್‌ ಅಂಟಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT