ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿಗೆ ಹಾನಿ ಮಾಡಲಿದೆ ಲಖಿಂಪುರ ಘಟನೆ: ಸಮೀಕ್ಷೆ

ನವದೆಹಲಿ: ಅಕ್ಟೋಬರ್ 3 ರಂದು ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ನಡೆದಿದ್ದ ಹಿಂಸಾಚಾರ ಪ್ರಕರಣವು ಮುಂದಿನ ವರ್ಷ ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹಾನಿಯುಂಟು ಮಾಡಬಹುದು ಎಂದು ‘ಎಬಿಪಿ–ಸಿವೋಟರ್ ಮತ್ತು ಐಎಎನ್‌ಸ್’ ಸಮೀಕ್ಷೆ ಹೇಳಿದೆ.
ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಈ ವಿಷಯವು ಹಾನಿ ಉಂಟುಮಾಡುತ್ತದೆ ಎಂದು ಶೇ 62 ರಷ್ಟು ಮತದಾರರು ಭಾವಿಸಿದರೆ, ಶೇ 21.5 ರಷ್ಟು ಜನರು ಬಿಜೆಪಿಗೆ ಇದು ನೆರವಾಗುತ್ತದೆ ಎಂದು ಭಾವಿಸಿದ್ದಾರೆ. ಶೇ 16 ರಷ್ಟು ಜನರು ಚುನಾವಣೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ಉದ್ಘಾಟನೆಗೊಂಡ 9 ವೈದ್ಯಕೀಯ ಕಾಲೇಜುಗಳು ಯೋಗಿ ಸರ್ಕಾರಕ್ಕೆ ಚುನಾವಣೆಯಲ್ಲಿ ಲಾಭ ತಂದುಕೊಡಲಿವೆ ಎಂದು ಸಮೀಕ್ಷೆಯು ಹೇಳುತ್ತಿದೆ. ಏಕೆಂದರೆ, ಶೇ 58.8 ಮತದಾರರು ಇದನ್ನು ಒಪ್ಪಿಕೊಂಡಿದ್ದಾರೆ. ಆದರೆ, ಶೇ 48.2 ಜನರು ಇದರಿಂದ ಸರ್ಕಾರಕ್ಕೆ ಯಾವುದೇ ಪ್ರಯೋಜನವಿಲ್ಲ ಎಂದಿದ್ದಾರೆ.
ಆದರೆ, ರಾಜ್ಯದಲ್ಲಿ ನಡೆದಿರುವ ದಾಖಲೆಯ ಮಟ್ಟದ ಲಸಿಕೀಕರಣ ಅಭಿಯಾನವು ಶೇ 56 ಜನರಿಗೆ ವಿಶೇಷವೆಂಬಂತೆ ಕಂಡಿಲ್ಲ. 44.3 ರಷ್ಟು ಜನರು ಇದು ಮತದಾರರ ಮೇಲೆ ಪರಿಣಾಮ ಬೀರುತ್ತದೆ ಎಂದು ಭಾವಿಸಿದ್ದಾರೆ.
ಉತ್ತರ ಪ್ರದೇಶ ಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧಿಯವರ ಸಕ್ರಿಯ ಪಾತ್ರದಿಂದ ಕಾಂಗ್ರೆಸ್‌ಗೆ ಲಾಭವಾಗಲಿದೆಯೇ ಎಂಬ ಪ್ರಶ್ನೆಗೆ, ಇಲ್ಲ ಎಂದು ಶೇ 52.8ರಷ್ಟು ಮತದಾರರು ಹೇಳಿದ್ದಾರೆ. ಶೇಕಡಾ 47.2 ರಷ್ಟು ಜನರು ಸಕಾರಾತ್ಮಕ ಪರಿಣಾಮ ಬೀರಲಿದೆ ಎಂದು ತಿಳಿಸಿದ್ದಾರೆ.
ರಾಜ್ಯದ ಎಲ್ಲಾ 403 ವಿಧಾನಸಭಾ ಕ್ಷೇತ್ರಗಳ 3,571 ಜನರನ್ನು ಸಮೀಕ್ಷೆಗಾಗಿ ಸಂಪರ್ಕಿಸಲಾಗಿತ್ತು ಎಂದು ಸಮೀಕ್ಷಾ ಸಂಸ್ಥೆಗಳು ಹೇಳಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.