ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಲು ಬಿಡುಗಡೆ: ಎನ್‌ಡಿಎಗೆ ತಳಮಳ

Last Updated 18 ಏಪ್ರಿಲ್ 2021, 20:54 IST
ಅಕ್ಷರ ಗಾತ್ರ

ಪಟ್ನಾ:ಮೇವು ಹಗರಣದಲ್ಲಿ‌ ಶಿಕ್ಷೆ ಅನುಭವಿಸುತ್ತಿರುವ ಆರ್‌ಜೆಡಿ ನಾಯಕ ಲಾಲು ಪ್ರಸಾದ್‌ ಅವರಿಗೆ ಜಾರ್ಖಂಡ್‌ ಹೈಕೋರ್ಟ್ ಜಾಮೀನು ನೀಡಿದೆ. ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (ಏಮ್ಸ್) ಲಾಲು ಚಿಕಿತ್ಸೆ ಪಡೆಯುತ್ತಿದ್ದರೂ, ಅವರು ಬಿಡುಗಡೆ ಆಗುವ ಸುದ್ದಿಯು ಆರ್‌ಜೆಡಿ ಕಾರ್ಯಕರ್ತರಲ್ಲಿ ಹುರುಪು ಮೂಡಿಸಿದೆ. ಹಲವು ರೋಗಗಳಿಂದ ಬಳಲುತ್ತಿರುವ ಲಾಲು ಅವರನ್ನು ಪಟ್ನಾಕ್ಕೆ ಕರೆದೊಯ್ಯಲು ಇನ್ನೂ ಕೆಲವು ದಿನಗಳು ಬೇಕಾಗಬಹುದು. ಪಟ್ನಾಕ್ಕೆ ಹೋಗುವ ಮುನ್ನ ಅವರು ಹಲವು ಕಾನೂನು ಪ್ರಕ್ರಿಯೆಗಳನ್ನು ಪೂರೈಸಬೇಕಿದೆ. ವೈದ್ಯಕೀಯ ಅನುಮತಿಯನ್ನೂ ಪಡೆದುಕೊಳ್ಳಬೇಕಿದೆ.

ಕಾರ್ಯಕರ್ತರಲ್ಲಿ ಭಾರಿ ಉತ್ಸಾಹ ಇದ್ದರೂ ಅವರು ಅದನ್ನು ಬಹಿರಂಗವಾಗಿ ತೋರಿಸುತ್ತಿಲ್ಲ. ಕೋವಿಡ್‌ ಸಂದರ್ಭದಲ್ಲಿ ಯಾವುದೇ ರೀತಿಯ ಸಂಭ್ರಮ ಆಚರಣೆ ಮಾಡಬಾರದು ಎಂದು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ನೀಡಿದ ಕಟ್ಟುನಿಟ್ಟು ಸೂಚನೆ ಇದಕ್ಕೆ ಕಾರಣ.

2017ರ ಡಿಸೆಂಬರ್‌ನಿಂದಲೇ ಜೈಲಿನಲ್ಲಿರುವ ಲಾಲು ಅವರ ಬಿಡುಗಡೆ ಬಗ್ಗೆ ಬಿಹಾರದ ಅಧಿಕಾರರೂಢ ಎನ್‌ಡಿಎ ಮೌನವಾಗಿಯೇ ಇದೆ. ಆದರೆ, ಈ ಮೈತ್ರಿಕೂಟದಲ್ಲಿ ಕಳವಳವಂತೂ ಇದ್ದೇ ಇದೆ. 2020ರ ನವೆಂಬರ್‌ನಲ್ಲಿ ನಡೆದ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಹಣಾಹಣಿ ತೀವ್ರವಾಗಿತ್ತು. ಈ ತೀವ್ರ ಹಣಾಹಣಿಯಲ್ಲಿ ಎನ್‌ಡಿಎ ಗೆದ್ದರೂ, ಮೈತ್ರಿಕೂಟಕ್ಕೆ ಸರಳ ಬಹುಮತವಷ್ಟೇ ಇದೆ.

ಬಿಜೆಪಿ 74, ಜೆಡಿಯು 43 ಮತ್ತು ಮೈತ್ರಿಕೂಟದಲ್ಲಿ ಇರುವ ಎಚ್‌ಎಎಂ ಮತ್ತು ವಿಐಪಿ ಪಕ್ಷಗಳು ತಲಾ ನಾಲ್ಕು ಕ್ಷೇತ್ರಗಳಲ್ಲಿ ಗೆದ್ದಿವ. 243 ಸದಸ್ಯ ಬಲದ ವಿಧಾನಸಭೆಯಲ್ಲಿ ಎನ್‌ಡಿಎ ಮೈತ್ರಿಕೂಟದ ಬಲ 125 ಮಾತ್ರ. ಇದು ಸರಳ ಬಹುಮತಕ್ಕಿಂತ ಮೂರು ಸ್ಥಾನ ಹೆಚ್ಚು.

ಬಿಎಸ್‌ಪಿಯ ಒಬ್ಬ ಮತ್ತು ಎಲ್‌ಜೆಪಿಯ ಒಬ್ಬ ಶಾಸಕರನ್ನು ಜೆಡಿಯು ಸೇರುವಂತೆ ಮಾಡುವಲ್ಲಿ ಜೆಡಿಯು ಮುಖ್ಯಸ್ಥ, ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ಯಶಸ್ವಿಯಾಗಿದ್ದಾರೆ ಎಂಬುದು ಬೇರೆ ವಿಚಾರ. ಆದರೆ, ಪರಿಸ್ಥಿತಿ ಹೇಗಿದೆ ಎಂದರೆ ಎಂಟರಿಂದ ಹತ್ತು ಶಾಸಕರು ನಿಷ್ಠೆ ಬದಲಿಸಿದರೆ ಸರ್ಕಾರ ಉರುಳುತ್ತದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಲಾಲು ಅವರ ಅನುಪಸ್ಥಿತಿ ಎದ್ದು ಕಾಣಿಸಿತ್ತು. ಬಿಹಾರದ ಅತ್ಯಂತ ಜನಪ್ರಿಯ ನಾಯಕ ಎಂದು ಹೇಳಲಾಗುವ ಲಾಲು ಅವರು ಆರ್‌ಜೆಡಿ ನೇತೃತ್ವದ ಮೈತ್ರಿಕೂಟದ ಪರವಾಗಿ ಪ್ರಚಾರ ಮಾಡಲು ಆಗಿರಲಿಲ್ಲ. ಹಾಗಿದ್ದರೂ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಅವರು ಪ್ರಚಾರದ ಹೊಣೆಯನ್ನು ಒಬ್ಬರೇ ವಹಿಸಿಕೊಂಡಿದ್ದರು. 75 ಕ್ಷೇತ್ರಗಳಲ್ಲಿ ಗೆದ್ದ ಆರ್‌ಜೆಡಿ ಅತಿ ದೊಡ್ಡ ಪಕ್ಷವಾಗಿ ಮೂಡಿ ಬಂದದ್ದರಲ್ಲಿ ಅವರ ಶ್ರಮವೇ ಹೆಚ್ಚು.

‘ಜನಾದೇಶ ಸಿಕ್ಕಿದ್ದು ನಮ್ಮ ಪಕ್ಷಕ್ಕೆ. ಆದರೆ, ನಿತೀಶ್‌ ಕುಮಾರ್‌ ಅವರು ಹಿಂಬಾಗಿಲ ಮೂಲಕ ಅಧಿಕಾರಕ್ಕೆ ಬಂದಿದ್ದಾರೆ’ ಎಂದು ತೇಜಸ್ವಿ ಹಲವು ಬಾರಿ ಹೇಳಿದ್ದಾರೆ. ಅಧಿಕಾರಿಗಳನ್ನು ಬಳಸಿಕೊಂಡು ಸುಮಾರು 10 ಕ್ಷೇತ್ರಗಳ ಚುನಾವಣಾ ಫಲಿತಾಂಶವನ್ನು ತಿರುಚಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಈ ಕ್ಷೇತ್ರಗಳಲ್ಲಿ ಕೆಲವೇ ನೂರು ಮತಗಳ ಅಂತರದಲ್ಲಿ ಜೆಡಿಯು ಅಥವಾ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದಾರೆ.

ಎನ್‌ಡಿಎ ಸರ್ಕಾರ ಉರುಳಲು ದಿನಗಣನೆ ಆರಂಭವಾಗಿದೆ ಎಂದು ಲಾಲು ಅವರ ಹಿರಿಯ ಮಗ ತೇಜ್‌ ಪ್ರತಾಪ್‌ ಹೇಳಿದ್ದಾರೆ.

ಒಂದು ವಾರದಲ್ಲಿ ಲಾಲು ಅವರು ಬಿಹಾರಕ್ಕೆ ಮರಳಲಿದ್ದಾರೆ. ಯಾವುದೇ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಬಲ್ಲ ಚತುರ ರಾಜಕಾರಣಿ ಲಾಲು. ಹಾಗಾಗಿ, ರಾಜಕೀಯ ಚಟುವಟಿಕೆಗಳ ಬಗ್ಗೆ ಕುತೂಹಲ ಮೂಡಿದೆ. 2020ರಲ್ಲಿ ಅಧಿಕಾರಕ್ಕೆ ಏರಲು ತೇಜಸ್ವಿಗೆ ಸಾಧ್ಯವಾಗಲಿಲ್ಲ. ಅದನ್ನು ಲಾಲು ಸಾಧ್ಯ ಮಾಡಿ ಕೊಡಬಹುದೇ ಎಂಬ ಪ್ರಶ್ನೆ ಈಗ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT