ಪಿಎಫ್‌ಐ ಪ್ರಹಾರ ಪಡೆಗೆ ಸಮರ ಕಲೆ ಹೇಳಿಕೊಡುತ್ತಿದ್ದ ಕೇರಳ ವಕೀಲನ ಬಂಧಿಸಿದ ಎನ್‌ಐಎ

ನವದೆಹಲಿ: ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆಯ ಕಾನೂನುಬಾಹಿರ ಮತ್ತು ಹಿಂಸಾತ್ಮಕ ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಕೇರಳದ ವಕೀಲರೊಬ್ಬರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಂಧಿಸಿದೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
ಎರ್ನಾಕುಳಂ ಜಿಲ್ಲೆಯ ಇಡವನಕ್ಕಾಡ್ ನಿವಾಸಿ ಮೊಹಮ್ಮದ್ ಮುಬಾರಕ್ ಎ. ಐ. ಬಂಧಿತ ವಕೀಲ. ಈ ಪ್ರಕರಣದಲ್ಲಿ ಬಂಧಿಸಲ್ಪಟ್ಟ 14ನೇ ಆರೋಪಿ.
‘ಕೇರಳ ಹೈಕೋರ್ಟ್‌ನಲ್ಲಿ ವಕೀಲಿ ವೃತ್ತಿ ನಡೆಸುವ ಮುಬಾರಕ್ ಪಿಎಫ್‌ಐನ ಸದಸ್ಯರಾಗಿದ್ದು, ಸಂಘಟನೆಯ ಹಿಟ್ ಸ್ಕ್ವಾಡ್ (ಪ್ರಹಾರ ಪಡೆ) ಸದಸ್ಯರಿಗೆ ಸಮರ ಕಲೆ ಮತ್ತು ಪ್ರಹಾರ ತರಬೇತಿ ನೀಡುತ್ತಿದ್ದರು’ ಎಂದು ಅಧಿಕಾರಿಗಳು ಹೇಳಿದ್ದಾರೆ.
ಶೋಧ ಕಾರ್ಯಾಚರಣೆ ವೇಳೆ ಮುಬಾರಕ್ ಮನೆಯಲ್ಲಿ ಕೊಡಲಿ, ಕತ್ತಿಗಳು ಮತ್ತು ಕುಡುಗೋಲುಗಳು ಒಳಗೊಂಡಂತೆ ಶಸ್ತಾಸ್ತ್ರಗಳನ್ನು ಸಂಗ್ರಹಿಸಿಟ್ಟಿದ್ದ ಬ್ಯಾಡ್ಮಿಂಟನ್ ರಾಕೆಟ್ ಬ್ಯಾಗ್ ಪತ್ತೆಯಾಗಿದೆ. ಶಸ್ತ್ರಾಸ್ತ್ರಗಳ ಬ್ಯಾಗ್ ವಶಪಡಿಸಿಕೊಳ್ಳಲಾಗಿದೆ’ ಎಂದು ವಕ್ತಾರರು ತಿಳಿಸಿದ್ದಾರೆ.
‘ಬೇರೆ ಸಮುದಾಯಗಳ ನಾಯಕರು ಮತ್ತು ಪ್ರಮುಖರನ್ನು ಗುರಿಯಾಗಿಸಿ ಪಿಎಫ್‌ಐ ವಿವಿಧ ರಾಜ್ಯಗಳು ಮತ್ತು ಜಿಲ್ಲೆಗಳಲ್ಲಿ ಪ್ರಹಾರ ಪಡೆಗಳನ್ನು ಹೆಚ್ಚಿಸಿಕೊಳ್ಳುತ್ತಿದೆ. ಪ್ರಹಾರ ಪಡೆಗಳಿಗೆ ತರಬೇತಿ ನೀಡಿ, ಈ ಪಡೆಗಳನ್ನು ನಿರ್ವಹಣೆ ಮಾಡುತ್ತಿರುವುದು ತನಿಖೆ ವೇಳೆ ದೃಢಪಟ್ಟಿದೆ’ ಎಂದು ವಕ್ತಾರರು ತಿಳಿಸಿದ್ದಾರೆ.
ಪಿಎಫ್‌ಐ ಸಂಘಟನೆ ರಾಜ್ಯ ಕಾರ್ಯಕಾರಿ ಸಮಿತಿಯ ಏಳು ಸದಸ್ಯರ ನಿವಾಸಗಳು ಮತ್ತು ಪಿಎಫ್ಐನ ಹಲವು ಮಂದಿ ವಲಯ ಮುಖ್ಯಸ್ಥರ ನಿವಾಸಗಳನ್ನು ಗುರಿಯಾಗಿಸಿಕೊಂಡು, ಕೇರಳದ 12 ಜಿಲ್ಲೆಗಳ 56 ಸ್ಥಳಗಳಲ್ಲಿ ಗುರುವಾರ ತನಿಖಾ ತಂಡ ಶೋಧ ನಡೆಸಿತು.
ಕೊಲೆ, ಹಿಂಸಾತ್ಮಕ ಕೃತ್ಯಗಳನ್ನು ನಡೆಸಲು ಚಾಕುಗಳು, ಕಠಾರಿಗಳು, ಕತ್ತಿಗಳು ಮತ್ತು ಇನ್ನಿತರ ಮಾರಕಾಸ್ತ್ರಗಳನ್ನು ಬಳಸುವ ತರಬೇತಿ ಪಡೆದ 15 ಮಂದಿ ತರಬೇತುದಾರರು ಮತ್ತು ಏಳು ಸದಸ್ಯರ ನಿವಾಸಗಳಲ್ಲೂ ಶೋಧ ನಡೆಸಲಾಗಿದೆ ಎಂದು ಅವರು ಹೇಳಿದ್ದಾರೆ.
ಪಿಎಫ್‌ಐ ಪಿತೂರಿ: 11 ಮಂದಿ ವಿರುದ್ಧ ಚಾರ್ಜ್‌ಶೀಟ್
ನವದೆಹಲಿ (ಪಿಟಿಐ): ನಿಷೇಧಿತ ಪಿಎಫ್‌ಐ ಸಂಘಟನೆಗೆ ತೆಲಂಗಾಣದಲ್ಲಿ ಯುವಕರ ನೇಮಕಾತಿ ಮತ್ತು ಭಯೋತ್ಪಾದಕ ತರಬೇತಿ ಶಿಬಿರಗಳ ಆಯೋಜನೆಯಲ್ಲಿ ಭಾಗಿಯಾದ 11 ಆರೋಪಿಗಳ ವಿರುದ್ಧ ಎನ್‌ಐಎ ಚಾರ್ಜ್ ಶೀಟ್ ಸಲ್ಲಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ತೆಲಂಗಾಣದ 10 ಮಂದಿ ಮತ್ತು ಆಂಧ್ರಪ್ರದೇಶದ ಒಬ್ಬ ಆರೋಪಿ ವಿರುದ್ಧ ಯುಎಪಿ ಕಾಯ್ದೆಯ ವಿವಿಧ ಸೆಕ್ಷನ್‌ಗಳಡಿ ದೋಷಾರೋಪ ಪಟ್ಟಿಯನ್ನು ಗುರುವಾರ ಹೈದರಾಬಾದ್‌ನ ಎನ್‌ಐಎ ವಿಶೇಷ ನ್ಯಾಯಾಲಯದಲ್ಲಿ ಸಲ್ಲಿಸಲಾಗಿದೆ ಎಂದು ಎನ್‌ಐಎ ವಕ್ತಾರರು ಹೇಳಿದ್ದಾರೆ.
‘ಆರೋಪಿಗಳು ಕೇಂದ್ರ ಸರ್ಕಾರ ಮತ್ತು ಇತರ ಸಂಸ್ಥೆಗಳ ವಿರುದ್ಧ ದ್ವೇಷ ಮತ್ತು ವಿಷಪೂರಿತ ಭಾಷಣಗಳ ಮೂಲಕ ಮುಸ್ಲಿಂ ಯುವಕರನ್ನು ಸೆಳೆದು, ಪಿಎಫ್‌ಐ ಸಂಘಟನೆಗೆ ಸೇರಿಸುತ್ತಿದ್ದರು ಮತ್ತು ಅವರನ್ನು ತರಬೇತಿ ಶಿಬಿರಗಳಿಗೆ ಕಳುಹಿಸುತ್ತಿದ್ದುದು ತನಿಖೆಯಲ್ಲಿ ಕಂಡುಬಂದಿದೆ’ ಎಂದು ವಕ್ತಾರರು ಹೇಳಿದ್ದಾರೆ.
ಜುಲೈ 4ರಂದು ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ 6ನೇ ಟೌನ್ ಪೊಲೀಸ್ ಠಾಣೆಯಲ್ಲಿ ಮೊದಲು ಪ್ರಕರಣ ದಾಖಲಾಗಿತ್ತು. ನಂತರ ಇದು ಎನ್‌ಐಎಗೆ ವರ್ಗಾವಣೆಯಾದ ಮೇಲೆ ಆಗಸ್ಟ್ 26ರಂದು ಪ್ರಕರಣ ಮರು ದಾಖಲಿಸಿ ಎನ್‌ಐಎ ತನಿಖೆ ಆರಂಭಿಸಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.