ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಕಲಿಕೆ ನಾಲ್ಕೇ ತಾಸು – ಯುನಿಸೆಫ್ ಸಮೀಕ್ಷಾ ವರದಿ

Last Updated 13 ಜುಲೈ 2021, 19:31 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್–19 ಸಾಂಕ್ರಾಮಿಕದ ಸಂದರ್ಭದಲ್ಲಿ ವಿದ್ಯಾರ್ಥಿಗಳ ಕಲಿಕೆಯ ಅವಧಿ ದಿನಕ್ಕೆ ನಾಲ್ಕು ಗಂಟೆಗಿಂತ ಕಡಿಮೆಯಾಗಿದೆ. ಶೇ 10ರಷ್ಟು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಮೊಬೈಲ್, ಟಿ.ವಿ. ಮೊದಲಾದ ಸಾಧನಗಳು ಇಲ್ಲ.ಕೋವಿಡ್ ಅವಧಿಯಲ್ಲಿ ಶೇ 50ರಷ್ಟು ಶಿಕ್ಷಕರು ಬೋಧನಾ ಸಾಧನಗಳಿಗಾಗಿ ಹೆಚ್ಚು ಹಣವನ್ನು ಖರ್ಚು ಮಾಡಿದ್ದಾರೆ ಎಂದು ಯುನಿಸೆಫ್ ನಡೆಸಿದ ಸಮೀಕ್ಷೆ ತಿಳಿಸಿದೆ.

ಶೇ 97ರಷ್ಟು ವಿದ್ಯಾರ್ಥಿಗಳು ಪ್ರತಿದಿನ ಮೂರರಿಂದ ನಾಲ್ಕು ಗಂಟೆ ಸಮಯವನ್ನು ಅಧ್ಯಯನಕ್ಕಾಗಿ ಮೀಸಲಿಡುತ್ತಾರೆ ಎಂದು ಸಮೀಕ್ಷೆ ತಿಳಿಸಿದೆ. ಗ್ರಾಮೀಣ ಭಾರತದ ವಿದ್ಯಾರ್ಥಿಗಳು ನಗರ ಪ್ರದೇಶಗಳಿಗಿಂತ ಸ್ವಲ್ಪ ಹಿಂದಿದ್ದಾರೆ.

ವಲಸೆ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಮೇಲೆ ಕೋವಿಡ್ ಹೆಚ್ಚು ಪರಿಣಾಮ ಉಂಟು ಮಾಡಿದೆ. ಈ ಅವಧಿಯಲ್ಲಿ ಕಲಿಕೆ ಮತ್ತು ಒಟ್ಟಾರೆ ಪ್ರಗತಿಯಲ್ಲಿ ತಾವು ಹಿಂದುಳಿದಿದ್ದೇವೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳ ಮೌಲ್ಯಮಾಪನಕ್ಕೆ ಸರ್ಕಾರಗಳು ಮುಂದಾಗಬೇಕು ಎಂದು ಯುನಿಸೆಫ್ ಸಲಹೆ ನೀಡಿದೆ. ‘ಇದರಿಂದ, ಹೆಚ್ಚುವರಿ ಗಮನ ಅಗತ್ಯವಿರುವ ಮಕ್ಕಳಿಗೆ ಪರಿಹಾರ ಬೋಧನೆಯಂತಹ ತರಗತಿ ನಡೆಸಲು ಅನುಕೂಲವಾಗುತ್ತದೆ’ ಎಂದು ಅಭಿಪ್ರಾಯಪಟ್ಟಿದೆ.

ಶಿಕ್ಷಣ ಹಕ್ಕು ಕಾಯ್ದೆ 2010ರ ಪ್ರಕಾರ, 1-5 ತರಗತಿಯ ವಿದ್ಯಾರ್ಥಿಗಳಿಗೆ ವರ್ಷಕ್ಕೆ 200 ದಿನಗಳಲ್ಲಿ ನಾಲ್ಕು ಗಂಟೆಗಳ ಸರಾಸರಿ ಶಾಲಾ ದಿನ ಇರಬೇಕು, 6-8 ತರಗತಿಯ ವಿದ್ಯಾರ್ಥಿಗಳಿಗೆ ವರ್ಷಕ್ಕೆ 220 ದಿನಗಳಲ್ಲಿ, ದಿನಕ್ಕೆ 4–5 ಗಂಟೆ ಶಾಲಾವಧಿ ಇರಬೇಕು.

ಎಲ್ಲೆಲ್ಲಿ ಅಧ್ಯಯನ?

ಅಸ್ಸಾಂ, ಗುಜರಾತ್, ಬಿಹಾರ, ಕೇರಳ, ಮಧ್ಯಪ್ರದೇಶ,ಉತ್ತರ ಪ್ರದೇಶ

6,435 –ಸಮೀಕ್ಷೆಗೆ ಒಳಪಟ್ಟವರು

ಅಧ್ಯಯನಕ್ಕೆ ವಾಟ್ಸ್‌ಆ್ಯಪ್

‘ವಾಟ್ಸ್‌ಆ್ಯಪ್’ ಸಾಮಾಜಿಕ ಜಾಲತಾಣವು ಮಕ್ಕಳ ದೂರಶಿಕ್ಷಣಕ್ಕೆ ಬಳಕೆಯಾಗುತ್ತಿದೆ. 5–13 ವಯಸ್ಸಿನ ಶೇ 47ರಷ್ಟು ಮಕ್ಕಳು, 14–18 ವರ್ಷದ ಶೇ 55ರಷ್ಟು ಮಕ್ಕಳು ವಾಟ್ಸ್‌ಆ್ಯಪ್ ಬಳಸುತ್ತಾರೆ. ಬಾಲಕಿಯರಿಗೆ (ಶೇ 51) ಹೋಲಿಸಿದರೆ ಶೇ 59ರಷ್ಟು ಬಾಲಕರು ಅಧ್ಯಯನಕ್ಕಾಗಿ ವಾಟ್ಸ್‌ಆ್ಯಪ್ ಬಳಸುತ್ತಾರೆ ಎಂದು ವರದಿ ತಿಳಿಸಿದೆ.

5-13 ವರ್ಷ ವಯಸ್ಸಿನ ವಿದ್ಯಾರ್ಥಿಗಳ ಪೈಕಿ, ಖಾಸಗಿ ಶಾಲಾ ವಿದ್ಯಾರ್ಥಿಗಳು ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗಿಂತ ಹೆಚ್ಚಾಗಿ ವಾಟ್ಸ್‌ಆ್ಯಪ್ ಬಳಸುತ್ತಾರೆ. ಸರ್ಕಾರಿ ಶಾಲಾ ವಿದ್ಯಾರ್ಥಿಗಳು (5-13 ವರ್ಷ ವಯೋಮಿತಿ) ಮುಖ್ಯವಾಗಿ ಪಠ್ಯಪುಸ್ತಕಗಳ ಮೇಲೆ ಅವಲಂಬಿತರಾಗಿದ್ದಾರೆ. ಜೊತೆಗೆ ಶಿಕ್ಷಕರ ಮನೆಗೆ ಭೇಟಿ ನೀಡುತ್ತಾರೆ ಮತ್ತು ಯೂಟ್ಯೂಬ್ ನೋಡಿ ಕಲಿಯುತ್ತಾರೆ.

5-13 ವರ್ಷ ವಯಸ್ಸಿನ ನಗರ ಮತ್ತು ಗ್ರಾಮೀಣ ವಿದ್ಯಾರ್ಥಿಗಳ ನಡುವೆ ವಾಟ್ಸ್‌ಆ್ಯಪ್‌ ಬಳಕೆಯಲ್ಲಿ ಶೇ 24ರಷ್ಟು ಅಂತರವಿದೆ. 14 -18 ವರ್ಷ ವಯಸ್ಸಿನ ವಿದ್ಯಾರ್ಥಿಗಳಲ್ಲಿ ಶೇ 15ರಷ್ಟು ಅಂತರವಿದೆ.

* 75% – ಶಾಲೆಗಳು ತೆರೆದಿದ್ದ ದಿನಗಳಿಗೆ ಹೋಲಿಸಿದರೆ ತಮ್ಮ ಮಗುವಿನ (5-13 ವರ್ಷ) ಕಲಿಕಾ ಮಟ್ಟ ಕುಸಿದಿದೆ ಎಂದು ಹೇಳಿದ ಪೋಷಕರ ಪ್ರಮಾಣ

* 67% –ಶಾಲೆಗಳು ತೆರೆದಿದ್ದ ದಿನಗಳಿಗೆ ಹೋಲಿಸಿದರೆ ತಮ್ಮ ಮಗುವಿನ ಒಟ್ಟಾರೆ ಪ್ರಗತಿಯು ಹಿಂದಿದೆ ಎಂದ ಪೋಷಕರ ಪ್ರಮಾಣ

* 80% – ತಮ್ಮ ಮಕ್ಕಳ ಕಲಿಕೆಗೆ ತೊಂದರೆಯಾಗಿದೆ ಎಂದ ವಲಸೆ ಮತ್ತು ಪರಿಶಿಷ್ಟ ಪಂಗಡದ ಪೋಷಕರ ಪ್ರಮಾಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT