ಶುಕ್ರವಾರ, ನವೆಂಬರ್ 27, 2020
19 °C
ನಿತೀಶ್ ಕುಮಾರ್‌ಗೆ ಕಾಂಗ್ರೆಸ್ ನಾಯಕ ದಿಗ್ವಿಜಯಸಿಂಗ್ ಸಲಹೆ

ಬಿಜೆಪಿ ಬಿಡಿ, ಜಾತ್ಯತೀತ ಶಕ್ತಿಗಳ ಜತೆ ಕೈಜೋಡಿಸಿ: ನಿತೀಶ್‌ಗೆ ಕಾಂಗ್ರೆಸ್ ಸಲಹೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ಬಿಜೆಪಿ ಸಖ್ಯ ಬಿಟ್ಟು ಬನ್ನಿ, ರಾಷ್ಟ್ರಮಟ್ಟದಲ್ಲಿ ಸಮಾಜವಾದಿ ಮತ್ತು ಜಾತ್ಯತೀತ ಶಕ್ತಿಗಳನ್ನು ಒಗ್ಗೂಡಿಸಲು ನಾಯಕತ್ವ ವಹಿಸಿಕೊಳ್ಳಿ‘ ಎಂದು ಬಿಹಾರದ ಮುಖ್ಯಮಂತ್ರಿ, ಜೆಡಿ (ಯು) ನಾಯಕ ನಿತೀಶ್ ಕುಮಾರ್ ಅವರಿಗೆ, ಕಾಂಗ್ರೆಸ್ ನಾಯಕ ದಿಗ್ವಿಜಯಸಿಂಗ್ ಆಹ್ವಾನಿಸಿದ್ದಾರೆ.

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ–ಜೆಡಿ(ಯು) ಮೈತ್ರಿಕೂಟ ಜಯಗಳಿಸಿದ್ದರೂ, ನಿತೀಶ್ ನೇತೃತ್ವದ ಜೆಡಿ(ಯು) ಪಕ್ಷ ಮೊದಲ ಬಾರಿಗೆ ಕಡಿಮೆ ಸ್ಥಾನಗಳನ್ನು ಪಡೆದಿದೆ. ಈ ಬೆಳವಣಿಗೆಗಳ ನಂತರ ದಿಗ್ವಿಜಯಸಿಂಗ್ ಸರಣಿ ಟ್ವೀಟ್ ಮಾಡಿದ್ದಾರೆ. 

‘ಬಿಜೆಪಿ ತಂತ್ರಗಳ ಮೂಲಕ ದಿವಂಗತ ರಾಮ್‌ವಿಲಾಸ್ ಪಾಸ್ವಾನ್ ಅವರ ರಾಜಕೀಯ ಪರಂಪರೆಯನ್ನು ಕೊನೆಗೊಳಿಸಿತು. ಈಗ ನಿತೀಶ್ ಕುಮಾರ್ ಅವರ ರಾಜಕೀಯ ಶಕ್ತಿಯನ್ನೂ ಕುಂದಿಸಿದೆ‘ ಎಂದು ಉಲ್ಲೇಖಿಸಿದ್ದಾರೆ.

‘ನಿತೀಶ್‌ಜಿ, ನಿಮಗೆ ಬಿಹಾರ ಚಿಕ್ಕದಾಯಿತು. ನೀವು ರಾಜ್ಯ ರಾಜಕಾರಣವನ್ನು ಬಿಟ್ಟು, ರಾಷ್ಟ್ರ ರಾಜಕಾರಣವನ್ನು ಪ್ರವೇಶಿಸಬೇಕು. ಸಮಾಜವಾದಿ ಮತ್ತು ಜಾತ್ಯತೀತ ಆದರ್ಶಗಳನ್ನು ಒಪ್ಪುವ ಎಲ್ಲರನ್ನೂ ಒಂದುಗೂಡಿಸಲು ನೆರವಾಗಬೇಕು. ಸಂಘದವರ ಆಳುವ ನೀತಿಗೆ ಅವಕಾಶ ನೀಡಬಾರದು. ದಯವಿಟ್ಟು ಈ ಮನವಿಯನ್ನು ಪರಿಗಣಿಸಿ‘ ಎಂದು ದಿಗ್ವಿಜಯ ಸಿಂಗ್ ಮನವಿ ಮಾಡಿದ್ದಾರೆ.

‘ಜಾತ್ಯತೀತ ಮತ್ತು ಸಮಾಜವಾದಿ ಆದರ್ಶಗಳನ್ನು ಎತ್ತಿ ಹಿಡಿಯುವುದು ನೀವು ಮಹಾತ್ಮಗಾಂಧಿ ಮತ್ತು ಜಯಪ್ರಕಾಶ್ ನಾರಾಯಣ್ ಅವರಿಗೆ ಸಲ್ಲಿಸುವ ನಿಜವಾದ ಗೌರವ. ನೀವು ಅವರ ಪರಂಪರೆಯನ್ನು ಹೆಚ್ಚಿಸುವ ನಾಯಕರಾಗಿದ್ದೀರ. ನೀವು ಯಾವ ನೆಲೆಯಿಂದ ರಾಜಕೀಯ ಪ್ರವೇಶಿಸಿದ್ದೀರೋ, ಅಲ್ಲಿಗೆ  (ಸಮಾಜವಾದ) ಹಿಂದಿರುಗಿ ‘ ಎಂದು ಸಿಂಗ್ ಹೇಳಿದ್ದಾರೆ.

‘ನೀವು ಬಿಜೆಪಿ / ಆರ್‌ಎಸ್‌ಎಸ್‌ ಬಿಡಿ. ದೇಶವನ್ನು ಹಾಳಾಗದಂತೆ ಉಳಿಸಿ. ಆರ್‌ಎಸ್‌ಎಸ್‌ನ ದ್ವಿಮುಖ ನೀತಿಯಿಂದಾಗಿ ಜನತಾಪಕ್ಷ ವಿಭಜನೆಯಾಯಿತು ಎಂಬುದು ನಿಮಗೆ ನೆನಪಿರಲಿ‘ ಎಂದು ದಿಗ್ವಿಜಯಸಿಂಗ್ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು