ಭಾನುವಾರ, ಅಕ್ಟೋಬರ್ 25, 2020
26 °C

ಎಲ್‌ಜೆಪಿಯಿಂದ ಮತದಾರರಲ್ಲಿ ಗೊಂದಲ: ಬಿಜೆಪಿ ಆಕ್ಷೇಪ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಪಕ್ಷದ ನಾಯಕರ ಜತೆಗಿನ ಸಂಬಂಧವನ್ನು ಪ್ರಸ್ತಾಪಿಸುವ ಮೂಲಕ ಮತದಾರರಲ್ಲಿ ಗೊಂದಲ ಮೂಡಿಸಲು ಎಲ್‌ಜೆಪಿ ಅಧ್ಯಕ್ಷ ಚಿರಾಗ್‌ ಪಾಸ್ವಾನ್‌ ಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ನೇರ ವಾಗ್ದಾಳಿ ನಡೆಸಿದೆ. 

ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಚಿರಾಗ್‌ ಅವರು ಹೊಗಳುತ್ತಿದ್ದಾರೆ. ಅದೇ ಹೊತ್ತಿಗೆ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರನ್ನು ಟೀಕಿಸುತ್ತಿದ್ದಾರೆ. ಎಲ್‌ಜೆಪಿ ಮತ್ತು ಬಿಜೆಪಿ ನಡುವೆ ಒಳ ಒಪ್ಪಂದವಾಗಿದೆ ಎಂಬ ಭಾವನೆಯನ್ನು ಇದು ಮೂಡಿಸಿದೆ ಎಂಬ ಕಾರಣಕ್ಕೆ ಬಿಜೆಪಿಯಿಂದ ಸ್ಪಷ್ಟೀಕರಣ ಹೊರಬಿದ್ದಿದೆ.

ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಭೂಪೆಂದರ್‌ ಯಾದವ್‌ ಸೇರಿದಂತೆ ಹಲವು ಹಿರಿಯ ಮುಖಂಡರು ಕೂಡ ಚಿರಾಗ್‌ ವಿರುದ್ಧ ಹರಿಹಾಯ್ದಿದ್ದಾರೆ. ಬಿಹಾರದಲ್ಲಿ ಎನ್‌ಡಿಎಯಿಂದ ಹೊರಗೆ ಬಂದಿರುವ ಎಲ್‌ಜೆಪಿ, ವಿಧಾನಸಭೆ ಚುನಾವಣೆಯಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸುತ್ತಿದೆ. 

ಚಿರಾಗ್‌ ಅವರದ್ದು ‘ಸುಳ್ಳಿನ ರಾಜಕಾರಣ’ ಎಂದು ಯಾದವ್‌ ಟೀಕಿಸಿದ್ದಾರೆ. ‘ಚಿರಾಗ್‌ ಅವರು ಭ್ರಮೆಯಲ್ಲಿ ಬದುಕಬಾರದು, ಭ್ರಮೆ ಬೆಳೆಸಿಕೊಳ್ಳಬಾರದು ಅಥವಾ ಭ್ರಮೆಯನ್ನು ಹರಡಬಾರದು’ ಎಂದು ಯಾದವ್‌ ಟ್ವೀಟ್‌ ಮಾಡಿದ್ದಾರೆ.

ಎನ್‌ಡಿಎ ಮೈತ್ರಿಕೂಟವು ನಾಲ್ಕನೇ ಮೂರರಷ್ಟು ಬಹುಮತ ಪಡೆಯಲಿದೆ. ಎಲ್‌ಜೆಪಿ ಇತರರ ಮತ ಕಸಿಯುವುದನ್ನು ಬಿಟ್ಟರೆ ದೊಡ್ಡ ಪರಿಣಾಮ ಉಂಟು ಮಾಡದು ಎಂದು ಅವರು ಹೇಳಿದ್ದಾರೆ.

***

ಎಲ್‌ಜೆಪಿ ಜತೆಗೆ ಯಾವುದೇ ಸಂಬಂಧ ಇಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತೇವೆ. ಗೊಂದಲ ಮೂಡಿಸುವಂಥ ರಾಜಕಾರಣವನ್ನು ನಾವು ಇಷ್ಟಪಡುವುದಿಲ್ಲ.

- ಪ್ರಕಾಶ್‌ ಜಾವಡೇಕರ್, ಬಿಜೆಪಿ ಮುಖಂಡ

***

ಬಿಜೆಪಿ ಜತೆ ಸೇರಿ ಸರ್ಕಾರ: ಚಿರಾಗ್‌

ಪಟ್ನಾ: ಬಿಜೆಪಿಯೊಂದಿಗೆ ತಮ್ಮ ಸಂಬಂಧಕ್ಕೆ ಯಾವುದೇ ಹಾನಿ ಆಗಿಲ್ಲ. ವಿಧಾನಸಭಾ ಚುನಾವಣೆಯಲ್ಲಿ ನಿತೀಶ್‌ ಕುಮಾರ್‌ ಅವರನ್ನು ಸೋಲಿಸುವುದಾಗಿ ಎಲ್‌ಜೆಪಿ ಅಧ್ಯಕ್ಷ ಚಿರಾಗ್‌ ಪಾಸ್ವಾನ್‌ ಹೇಳಿದ್ದಾರೆ. 

‘ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮತ್ತು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ನನ್ನ ಅಭಿಪ್ರಾಯವನ್ನು ತಿಳಿಸಿದ್ದೇನೆ. ಶಾ ಅವರು ನನ್ನ ಮಾತನ್ನು ಆಲಿಸಿದ್ದಾರೆ. ಇಂತಹ ನಿರ್ಧಾರ (ನಿತೀಶ್‌ ಅವರಿಂದ ದೂರ ಸರಿಯುವುದು) ತೆಗೆದುಕೊಳ್ಳುವುದು ಬೇಡ ಎಂದು ಅವರು ಹೇಳಿಲ್ಲ. ಅವರು ಮೌನವಾಗಿಯೇ ಇದ್ದರು’ ಎಂದು ಚಿರಾಗ್‌ ಹೇಳಿದ್ದಾರೆ. 

ನಿತೀಶ್‌ ಅವರ ಉಚ್ಚಾಟನೆ ಮತ್ತು ಬಿಹಾರದಲ್ಲಿ ಬಿಜೆಪಿ–ಎಲ್‌ಜೆಪಿ ಸರ್ಕಾರ ರಚನೆ ತಮ್ಮ ಗುರಿ ಎಂದು 2019ರ ನವೆಂಬರ್‌ನಲ್ಲಿ ಎಲ್‌ಜೆಪಿ ಅಧ್ಯಕ್ಷ ಸ್ಥಾನ ವಹಿಸಿಕೊಂಡ ಚಿರಾಗ್‌ ಹೇಳಿದ್ದಾರೆ. 

ಎಲ್‌ಜೆಪಿ ಮತ್ತು ಬಿಜೆಪಿ ನಡುವೆ ಒಳ ಒಪ್ಪಂದ ಆಗಿದೆಯೇ ಎಂಬ ಪ್ರಶ್ನೆಗೆ, ‘ಈ ಬಗ್ಗೆ ಯಾವುದೇ ಅಭಿ‍ಪ್ರಾಯ ಹೊಂದಲು ನೀವು ಸ್ವತಂತ್ರರು. ನಾನು ಬಿಜೆಪಿ ಜತೆಗಿದ್ದೇನೆ ಎಂಬುದು ಸತ್ಯ’ ಎಂದು ಚಿರಾಗ್‌ ಉತ್ತರಿಸಿದ್ದಾರೆ. 

ಇತ್ತೀಚೆಗೆ ನಿಧನರಾದ ತಮ್ಮ ತಂದೆ ರಾಮ್‌ವಿಲಾಸ್‌ ಪಾಸ್ವಾನ್‌ ಅವರ 10ನೇ ದಿನದ ಕರ್ಮಗಳು ಮುಗಿದ ಬಳಿಕ, ಅ. 21ರಂದು ಚಿರಾಗ್‌ ಅವರು ಚುನಾವಣಾ ಪ್ರಚಾರ ಆರಂಭಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. 

***

ಬಿಜೆಪಿ ನಮ್ಮ ಜತೆ ಇತ್ತು ಮತ್ತು ಮುಂದೆಯೂ ಇರಲಿದೆ. ಬಿಜೆಪಿ ಮುಖಂಡರು ನೀಡುತ್ತಿರುವ ಹೇಳಿಕೆ ಆ ಪಕ್ಷದ್ದಲ್ಲ. ನಿತೀಶ್‌ ಕುಮ್ಮಕ್ಕಿನಿಂದ ಇಂತಹ ಹೇಳಿಕೆ ನೀಡಲಾಗುತ್ತಿದೆ.

- ಚಿರಾಗ್‌ ಪಾಸ್ವಾನ್‌, ಎಲ್‌ಜೆಪಿ ಅಧ್ಯಕ್ಷ

***

ಮೋದಿಯಿಂದ 12 ರ್‍ಯಾಲಿ

ಮೂರು ಹಂತಗಳಲ್ಲಿ ನಡೆಯಲಿರುವ ಬಿಹಾರ ವಿಧಾನಸಭೆ ಚುನಾವಣಾ ಪ್ರಚಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು 12 ರ್‍ಯಾಲಿಗಳನ್ನು ನಡೆಸಲಿದ್ದಾರೆ. ಇದೇ 23ರಂದು ಮೊದಲ ರ್‍ಯಾಲಿ ನಡೆಯಲಿದೆ.

ಸಸಾರಾಂ, ಗಯಾ ಮತ್ತು ಬಾಗಲಪುರದಲ್ಲಿ ಮೊದಲ ಸಮಾವೇಶಗಳು ನಡೆಯಲಿವೆ. ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಮತ್ತು ಎನ್‌ಡಿಎಯ ಇತರ ನಾಯಕರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಬಿಜೆಪಿಯ ಬಿಹಾರ ಚುನಾವಣೆ ಉಸ್ತುವಾರಿ ಹೊತ್ತಿರುವ ದೇವೇಂದ್ರ ಫಡಣವೀಸ್‌ ತಿಳಿಸಿದ್ದಾರೆ. 

ಅ. 28, ನವೆಂಬರ್‌ 1 ಮತ್ತು 3ರಂದ ಇತರ ರ್‍ಯಾಲಿಗಳು ನಡೆಯಲಿವೆ. 

ಮೋದಿ ಅವರ ಸಮಾವೇಶ ನಡೆಯಲಿರುವ ಸ್ಥಳದ ಸಮೀಪದ ಮೈದಾನಗಳು ಮತ್ತು ವಿಧಾನಸಭಾ ಕ್ಷೇತ್ರಗಳಲ್ಲಿ ಬೃಹತ್‌ ಪರದೆಗಳನ್ನು ಅಳವಡಿಸಿ ನೇರ ಪ್ರಸಾರದ ವ್ಯವಸ್ಥೆ ಮಾಡಲಾಗುವುದು ಎಂದು ಫಡಣವೀಸ್‌ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು