ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲ ಕಂತು ಮರುಪಾವತಿ 2 ವರ್ಷಗಳವರೆಗೆ ವಿಸ್ತರಿಸಬಹುದು: ಸುಪ್ರೀಂಗೆ ಕೇಂದ್ರ ಹೇಳಿಕೆ

Last Updated 1 ಸೆಪ್ಟೆಂಬರ್ 2020, 11:34 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌ –19 ಹಿನ್ನೆಲೆಯಲ್ಲಿ ಬ್ಯಾಂಕ್‌ ಸಾಲದ ಕಂತು ಮರುಪಾವತಿಸಲು ಸಾಲಗಾರರಿಗೆ ನೀಡಲಾಗಿದ್ದ ಆರು ತಿಂಗಳ ವಿನಾಯ್ತಿ ಅವಧಿಯನ್ನು (ಮಾರಟೋರಿಯಂ) ಎರಡು ವರ್ಷಗಳವರೆಗೆ ವಿಸ್ತರಿಸಬಹುದು ಎಂದು ಸಾಲಿಸಿಟರ್ ಜನರಲ್ ತುಷಾರ್‌ ಮೆಹ್ತಾ ಮಂಗಳವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದರು.

ಕೇಂದ್ರ ಸರ್ಕಾರ ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಪರವಾಗಿ ನ್ಯಾಯಾಲಯದಲ್ಲಿ ಹಾಜರಾದ ಮೆಹ್ತಾ, ಮಾರಟೋರಿಯಂ ಅವಧಿಯಲ್ಲಿ ಪಾವತಿಸಬೇಕಿದ್ದ ಬಡ್ಡಿಯ ಮೇಲೆ ಬ್ಯಾಂಕ್‌ಗಳು ವಿಧಿಸುವ ಬಡ್ಡಿ (ಚಕ್ರ ಬಡ್ಡಿ) ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ಕಾಲಾವಕಾಶ ಕೋರಿದರು. ಈ ಬಗ್ಗೆ ಹಣಕಾಸು ಸಚಿವಾಲಯವು ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಿದೆ ಎಂದು ತಿಳಿಸಿದರು.

ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಆರ್ ಸುಭಾಷ್ ರೆಡ್ಡಿ ಮತ್ತು ಎಂ.ಆರ್ ಷಾ ಅವರಿದ್ದ ತ್ರಿಸದಸ್ಯ ಪೀಠ, ಮನವಿಯನ್ನು ಬುಧವಾರ ವಿಚಾರಣೆಗೆ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ.

ದೇಶದಲ್ಲಿ ಜಿಡಿಪಿ ಶೇ 23ರಷ್ಟು ಕುಸಿತ ಕಂಡ ಹಿನ್ನೆಲೆಯಲ್ಲಿ ಯಾವೆಲ್ಲ ಕ್ಷೇತ್ರಗಳು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿವೆ ಎಂಬುದನ್ನು ಗುರುತಿಸುವ ಕೆಲಸ ಆರಂಭವಾಗಿದೆ ಎಂದು ಮೆಹ್ತಾ ಅವರು ನ್ಯಾಯಾಲಯಕ್ಕೆ ತಿಳಿಸಿದರು.

‘ಆಗಸ್ಟ್ 6ರಂದು ಆರ್‌ಬಿಐ ಹೊರಡಿಸಿರುವ ಸುತ್ತೋಲೆಯಲ್ಲಿ ಬಡ್ಡಿ ವಿನಾಯ್ತಿ ಜೊತೆಗೆ ಸಾಲದ ಕಂತುಗಳ ಮರುಪಾವತಿ ಅವಧಿಯನ್ನು ಆರು ತಿಂಗಳ ಬದಲಿಗೆ ಎರಡು ವರ್ಷಗಳವರೆಗೆ ವಿಸ್ತರಿಸುವ ಪ್ರಸ್ತಾಪವಿದೆ‘ ಎಂದು ಹಣಕಾಸು ಸಚಿವಾಲಯ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ಹೇಳಿದೆ.

‘ಸಾಲ ಮರುಪಾವತಿ ವಿನಾಯ್ತಿ ಅವಧಿ ವಿಸ್ತರಣೆಯಾದರೆ, ಹಣಕಾಸು ಅಡಚಣೆಯಿಂದ ಬಳಲುತ್ತಿರುವ ಸಾಲಗಾರರಿಗೆ ನೆಮ್ಮದಿ ಸಿಕ್ಕಂತಾಗುತ್ತದೆ. ಆರ್‌ಬಿಐ ರೂಪಿಸಿರುವ ಈ ವಿನಾಯ್ತಿ ನಿಯಮ ಕೇವಲ ಕೊರೊನಾ ಸಾಂಕ್ರಾಮಿಕ ರೋಗದ ಅವಧಿಗಷ್ಟೇ ಸೀಮಿತವಾಗಿದೆ’ ಎಂದು ಪ್ರಮಾಣ ಪತ್ರದಲ್ಲಿ ಹೇಳಲಾಗಿದೆ.

‘ಸಾಲ ಮರುಪಾವತಿ ಅವಧಿ ವಿಸ್ತರಣೆಯಾಗದಿದ್ದರೆ, ಸಾಲಗಾರರು ಸೆಪ್ಟೆಂಬರ್ 1ರೊಳಗೆ ಬ್ಯಾಂಕಿಗೆ ಕಂತು ಪಾವತಿಸಲಾಗದೆ ಸುಸ್ತಿದಾರರಾಗುವ (ಎನ್‌ಪಿಎ) ಸಾಧ್ಯತೆ ಇರುತ್ತದೆ. ಹಾಗಾಗಿ ಸಾಲ ಮರುಪಾವತಿ ವಿನಾಯ್ತಿ ಅವಧಿಯನ್ನು ವಿಸ್ತರಿಸುವುದು ಸೂಕ್ತ’ ಎಂದು ಹಣಕಾಸು ಸಚಿವಾಲಯ ಮನವಿ ಮಾಡಿದೆ.

ಕೊರೊನಾ ಸೋಂಕು ಉಲ್ಬಣಿಸಿದ ಹಿನ್ನೆಲೆಯಲ್ಲಿ ಸಾಲ ಮರುಪಾವತಿ ವಿನಾಯ್ತಿ ಅವಧಿಯನ್ನು ಮೂರು ತಿಂಗಳವರೆಗೆ ವಿಸ್ತರಿಸಿ ಆರ್‌ಬಿಐ, ಮಾರ್ಚ್ 27, ಏಪ್ರಿಲ್ 17 ಮತ್ತು ಮೇ 23 ರಂದು ಸುತ್ತೋಲೆ ಹೊರಡಿಸಿತ್ತು. ನಂತರ ಮರುಪಾವತಿ ವಿನಾಯ್ತಿ ಅವಧಿಯನ್ನು ಆಗಸ್ಟ್ 31ರವರೆಗೆ ವಿಸ್ತರಿಸಲಾಗಿತ್ತು. ಈಗ ಈ ಅವಧಿಯನ್ನು ಎರಡು ವರ್ಷಗಳವರೆಗೆ ವಿಸ್ತರಿಸಬಹುದು ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT