ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷ ಸಂಘಟನೆ: ಕಾಂಗ್ರೆಸ್‌ ಯುವ ಬ್ರಿಗೇಡ್‌ ರಚಿಸಲು ಸಲಹೆ

ಲೋಕಸಭಾ ಚುನಾವಣೆಗೆ ಮುಂದಿನ ವರ್ಷವೇ ಅಭ್ಯರ್ಥಿಗಳ ಅಯ್ಕೆ ಸಾಧ್ಯತೆ
Last Updated 10 ಮೇ 2022, 15:58 IST
ಅಕ್ಷರ ಗಾತ್ರ

ನವದೆಹಲಿ: ಯುವ ನಾಯಕರಿಗೆ ಹೆಚ್ಚಿನ ಜವಾಬ್ದಾರಿಗಳನ್ನು ನೀಡಲು ಮತ್ತು ಯುವ ಬ್ರಿಗೇಡ್‌ ರಚಿಸಲು ಕಾಂಗ್ರೆಸ್‌ ಪಕ್ಷ ಮುಂದಾಗಿದ್ದು, ಈ ಸಂಬಂಧ ಕರಡು ಸಿದ್ಧಪಡಿಸಲಾಗಿದೆ.

ಉದಯಪುರದಲ್ಲಿ ಶುಕ್ರವಾರದಿಂದ ಮೂರು ದಿನಗಳ ಕಾಲ ನಡೆಯಲಿರುವ ಕಾಂಗ್ರೆಸ್‌ನ ಚಿಂತನ ಶಿಬಿರದಲ್ಲಿ ಪಕ್ಷ ಸಂಘಟನೆ ಬಲಪಡಿಸುವ ನಿಟ್ಟಿನಲ್ಲಿ ನಿರ್ಣಯ ತೆಗೆದುಕೊಳ್ಳಲು ಪಕ್ಷದ 9 ಸದಸ್ಯರ ಸಮಿತಿ ಕರುಡು ಸಿದ್ಧಪಡಿಸಿದೆ.

ಮುಂಬರುವ ಲೋಕಸಭಾ ಚುನಾವಣೆಗೆ ಮುಂದಿನ ವರ್ಷವೇ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು, ನಿಧಿ ಸಂಗ್ರಹಕ್ಕೆ ವಿಶೇಷ ವ್ಯವಸ್ಥೆ, ಚುನಾವಣೆ ಮತ್ತು ಮೈತ್ರಿಗೆ ಸಮನ್ವಯ ಸಮಿತಿ ರಚನೆ ಸೇರಿದಂತೆ ಹಲವು ಶಿಫಾರಸುಗಳು ಕರಡಿನಲ್ಲಿವೆ. ಯುವಕರು, ಮಹಿಳೆಯರು, ದಲಿತರು, ಇತರೆ ಹಿಂದುಳಿದ ವರ್ಗದವರು (ಒಬಿಸಿ) ಮತ್ತು ಅಲ್ಪಸಂಖ್ಯಾತರಿಗೆ ಪಕ್ಷದಲ್ಲಿ ಸಾಕಷ್ಟು ಪ್ರಾತಿನಿಧ್ಯ ನೀಡುವ ಸಾಧ್ಯತೆ ಇದೆ.

ಮುಕುಲ್ ವಾಸ್ನಿಕ್ ನೇತೃತ್ವದ ಸಮಿತಿ ಕರುಡು ಸಿದ್ಧಪಡಿಸಿದ್ದು, ಚುನಾವಣಾ ಸಿದ್ಧತೆಗಳ ಮೇಲ್ವಿಚಾರಣೆಗಾಗಿ ಹೊಸ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ಸೃಷ್ಟಿಸಬೇಕು. ಪಕ್ಷದಲ್ಲಿ ಒಬ್ಬ ವ್ಯಕ್ತಿಗೆ ಒಂದು ಹುದ್ದೆ ಮಾತ್ರ ನೀಡಬೇಕು, ಒಂದು ಕುಟುಂಬದಲ್ಲಿ ಒಬ್ಬರಿಗಷ್ಟೇ ಟಿಕೆಟ್‌ ನೀಡಬೇಕು ಎಂಬ ಸಲಹೆಯನ್ನೂ ನೀಡಲಾಗಿದೆ.

ಜಿ-23 ನಾಯಕರ ಬೇಡಿಕೆಯಂತೆ ಸಂಸದೀಯ ಮಂಡಳಿಯನ್ನು ಪುನರ್‌ರಚಿಸಬೇಕು. ಪಕ್ಷವು ಪ್ರಬಲವಾಗಿರುವ ಮತ್ತು ದುರ್ಬಲವಾಗಿರುವ ರಾಜ್ಯಗಳಲ್ಲಿ ಪಕ್ಷದ ಸಂಘಟನೆಗಳಿಗೆ ವಿಭಿನ್ನ ಕ್ರಮಗಳನ್ನು ತೆಗೆದುಕೊಳ್ಳಬೇಕು. ಪಕ್ಷದ ಸಂಘಟನೆ ದುರ್ಬಲವಾಗಿರುವ ರಾಜ್ಯಗಳಲ್ಲಿ, ಪಂಚಾಯತ್ ಮಟ್ಟದಲ್ಲಿ ನಾಯಕರನ್ನು ಗುರುತಿಸಲು ಕೆಳಮಟ್ಟದಲ್ಲಿ ಸಂಘಟನಾ ಕಾರ್ಯದರ್ಶಿಗಳನ್ನು ನೇಮಿಸುವಂತೆ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ವರ್ಷಕ್ಕೆ ಎರಡು ಬಾರಿಯಾದರೂ ಎಐಸಿಸಿ ಮತ್ತು ರಾಜ್ಯ ಸಮಿತಿಗಳ ಸಭೆ ಕರೆಯಬೇಕು. ಪಕ್ಷದ ಸಿದ್ಧಾಂತದ ಕುರಿತು ನಿರಂತರ ತರಬೇತಿ ಶಿಬಿರಗಳು ನಡೆಯಬೇಕು. ಪಕ್ಷದ ನಿಲುವಿಗೆ ವಿರುದ್ಧವಾಗಿ ಅಭಿಪ್ರಾಯ ವ್ಯಕ್ತಪಡಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಶಿಫಾರಸು ಮಾಡಲಾಗಿದೆ.

ಅಮರಿಂದರ್ ಸಿಂಗ್ ವಾರಿಂಗ್ ನೇತೃತ್ವದ ಯುವಕರ ಸಮಿತಿಯು 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಶೇ 50ರಷ್ಟು ಸೀಟುಗಳನ್ನು ನೀಡುವಂತೆ ಸೂಚಿಸಿದೆ. ಸಲ್ಮಾನ್ ಖುರ್ಷಿದ್ ನೇತೃತ್ವದ ಸಾಮಾಜಿಕ ನ್ಯಾಯ ಸಮಿತಿಯು ದಲಿತರು, ಬುಡಕಟ್ಟು ಜನಾಂಗ, ಒಬಿಸಿ ಮತ್ತು ಅಲ್ಪಸಂಖ್ಯಾತರಿಗೆ ಶೇ 50ರಷ್ಟು ಸ್ಥಾನಗಳನ್ನು ಮೀಸಲಿಡಬೇಕೆಂದು ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT