ಶನಿವಾರ, ಡಿಸೆಂಬರ್ 3, 2022
20 °C

ತೆಲಂಗಾಣದ ಜನರಿಗೆ ದ್ರೋಹ ಬಗೆದ ಟಿಆರ್‌ಎಸ್: ಪ್ರಧಾನಿ ನರೇಂದ್ರ ಮೋದಿ

ಪಿಟಿಐ Updated:

ಅಕ್ಷರ ಗಾತ್ರ : | |

ಹೈದರಾಬಾದ್: ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌) ಸರ್ಕಾರವು ತೆಲಂಗಾಣದ ಜನರಿಗೆ ದ್ರೋಹ ಬಗೆದಿದೆ ಎಂದು ಟೀಕಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ರಾಜ್ಯದ ಎಲ್ಲ ಕಡೆ ಕಮಲ ಅರಳಲಿದೆ (ಬಿಜೆಪಿ ಅಧಿಕಾರಕ್ಕೆ ಬರಲಿದೆ) ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತೆಲಂಗಾಣದಲ್ಲಿ 2023ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯನ್ನುದ್ದೇಶಿಸಿ ಮೋದಿ ಹೇಳಿಕೆ ನೀಡಿದ್ದಾರೆ. ತೆಲಂಗಾಣದ ರಾಮಗುಂಡಮ್‌ನಲ್ಲಿ ರಾಷ್ಟ್ರೀಯ ರಸಗೊಬ್ಬರ ಘಟಕದ ಉದ್ಘಾಟನೆ ಮತ್ತು ವಿವಿಧ ಯೋಜನೆಗಳಿಗೆ ಚಾಲನೆ ನೀಡುವ ಸಲುವಾಗಿ ಮೋದಿ ಅವರು ಇಲ್ಲಿಗೆ ಆಗಮಿಸಿದ್ದಾರೆ.

ಈ ವೇಳೆ ಮಾತನಾಡಿರುವ ಮೋದಿ, 'ಇತ್ತೀಚಿನ ದಿನಗಳಲ್ಲಿ ನಡೆದಿರುವ ಉಪ ಚುನಾವಣೆಗಳು ಜೋರಾಗಿ ಸಂದೇಶ ಸಾರಿವೆ. ಸೂರ್ಯ ಉದಯಿಸುವುದು ಸ್ಪಷ್ಟವಾಗಿದೆ. ಕತ್ತಲು ಕಳೆಯಲಿದೆ. ತೆಲಂಗಾಣದಲ್ಲಿ ಎಲ್ಲೆಡೆ ಕಮಲ ಅರಳಲಿದೆ' ಎಂದು ಹೇಳಿದ್ದಾರೆ.

'ಯಾವ ಪಕ್ಷದ ಮೇಲೆ ತೆಲಂಗಾಣದ ಜನರು ಅಪಾರ ನಂಬಿಕೆ ಇಟ್ಟಿದ್ದರೋ ಅದೇ ಪಕ್ಷ (ಟಿಆರ್‌ಎಸ್‌) ತೆಲಂಗಾಣಕ್ಕೆ ದ್ರೋಹ ಬಗೆದಿದೆ. ಆದರೆ ಸ್ನೇಹಿತರೆ, ಯಾವಾಗ ಕತ್ತಲು ಸುತ್ತಲೂ ಆವರಿಸುವುದೋ ಆಗ ಕಮಲ ಅರಳಲು ಪ್ರಾರಂಭಿಸುತ್ತದೆ' ಎಂದು ಬಿಜೆಪಿ ಚಿಹ್ನೆಯನ್ನುದ್ದೇಶಿಸಿ ಹೇಳಿದ್ದಾರೆ.

'ಇದೀಗ ತೆಲಂಗಾಣದ ಜನರು ಒಂದು ಕುಟುಂಬದ ಬದಲಾಗಿ ಎಲ್ಲರ ಕುಟುಂಬಗಳಿಗಾಗಿ ಕೆಲಸ ಮಾಡುವ ಸರ್ಕಾರವನ್ನು ಎದುರು ನೋಡುತ್ತಿದ್ದಾರೆ. ಜನರು ಬಿಜೆಪಿ ಸರ್ಕಾರವನ್ನು ಬಯಸುತ್ತಿದ್ದಾರೆ' ಎನ್ನುವ ಮೂಲಕ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್ ಅವರಿಗೆ ಪರೋಕ್ಷವಾಗಿ ಟಾಂಗ್‌ ಕೊಟ್ಟಿದ್ದಾರೆ.

ಇದನ್ನೂ ಓದಿ: 7 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಪೂರ್ಣ ಫಲಿತಾಂಶ ಇಲ್ಲಿದೆ

ದೇಶದಾದ್ಯಂತ ಇತ್ತೀಚೆಗೆ ನಡೆದ ವಿಧಾನಸಭೆ ಉಪ ಚುನಾವಣೆಗಳಲ್ಲಿ ಬಿಜೆಪಿ ಉತ್ತಮ ಪ್ರದರ್ಶನ ತೋರಿದೆ ಎಂದೂ ಮೋದಿ ಹೇಳಿಕೊಂಡಿದ್ದಾರೆ.

ಬಿಹಾರದ ಎರಡು, ಉತ್ತರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಹರಿಯಾಣ ಹಾಗೂ ಒಡಿಶಾದ ತಲಾ ಒಂದು ವಿಧಾನಸಭೆಗಳಿಗೆ ನವೆಂಬರ್‌ 3 ರಂದು ಉಪಚುನಾವಣೆ ನಡೆದಿತ್ತು. ಈ ಪೈಕಿ ಬಿಜೆಪಿ ನಾಲ್ಕು ಮತ್ತು ಟಿಆರ್‌ಎಸ್‌, ಆರ್‌ಜೆಡಿ ಹಾಗೂ ಶಿವಸೇನಾ (ಉದ್ಧವ್‌ ಠಾಕ್ರೆ ಬಣ) ತಲಾ ಒಂದೊಂದು ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದವು.

ತೆಲಂಗಾಣದ ಮುನುಗೋಡು ಉಪ ಚುನಾವಣೆಯನ್ನು ಉಲ್ಲೇಖಿಸಿ, ಕೇವಲ ಒಂದು ಸ್ಥಾನವನ್ನು ಗೆಲ್ಲಲು ಟಿಆರ್‌ಎಸ್‌ ಸರ್ಕಾರವೇ ಹೋರಾಟ ನಡೆಸಿತ್ತು. ಆದಾಗ್ಯೂ ಕೇವಲ 10 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಲಷ್ಟೇ ಅದಕ್ಕೆ ಸಾಧ್ಯವಾಯಿತು. ಬಿಜೆಪಿ ಕಾರ್ಯಕರ್ತರು ಸರ್ಕಾರದ ವಿರುದ್ಧ ಸಂಘಟಿತರಾಗಿ ಪ್ರಯತ್ನ ನಡೆಸಿದ್ದರು ಎಂದು ಮೋದಿ ಹೇಳಿದ್ದಾರೆ.

ಮುನುಗೋಡು ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಟಿಆರ್‌ಎಸ್‌ ಅಭ್ಯರ್ಥಿ ಕೂಸುಕುಂಟ್ಲ ಪ್ರಭಾಕರ ರೆಡ್ಡಿ ಅವರು 97,006 ಮತ ಪಡೆದರೆ, ಬಿಜೆಪಿ ಅಭ್ಯರ್ಥಿ ಕೋಮಟಿ ರೆಡ್ಡಿ ರಾಜಗೋಪಾಲ ರೆಡ್ಡಿ ಅವರು 86,697 ಮತಗಳನ್ನು ಗಳಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು