ಮಂಗಳವಾರ, ಆಗಸ್ಟ್ 16, 2022
21 °C

ಅಂತರಧರ್ಮೀಯ ವಿವಾಹಕ್ಕೆ ಲಖನೌ ಪೊಲೀಸರಿಂದ ತಡೆ

ಪಿಟಿಐ Updated:

ಅಕ್ಷರ ಗಾತ್ರ : | |

ಲಖನೌ: ಮತಾಂತರ ನಿಷೇಧ ಕಾನೂನನ್ನು ಉತ್ತರ ಪ್ರದೇಶ ಸರ್ಕಾರವು ಘೋಷಿಸಿದ ಬೆನ್ನಲ್ಲೇ, ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿಲ್ಲ ಎನ್ನುವ ಕಾರಣವನ್ನು ನೀಡಿ ಇಲ್ಲಿನ ಪೊಲೀಸರು ಅಂತರಧರ್ಮೀಯ ಜೋಡಿಯೊಂದರ ವಿವಾಹವನ್ನು ತಡೆದಿದ್ದಾರೆ.

ವಧು ಮತ್ತು ವರನ ಕುಟುಂಬದವರನ್ನು ಪೊಲೀಸ್‌ ಠಾಣೆಗೆ ಕರೆದೊಯ್ದ ಅಧಿಕಾರಿಗಳು ಅವರಿಗೆ ಹೊಸ ಕಾನೂನಿನ ಕುರಿತು ಮಾಹಿತಿ ನೀಡಿದ್ದಾರೆ. ‘ಕುಟುಂಬದವರು ಮದುವೆಯನ್ನು ಮುಂದೂಡಲು ನಿರ್ಧರಿಸಿದ್ದು, ವಿಶೇಷ ಮದುವೆ ಕಾಯ್ದೆಯಡಿ ಅಂತರಧರ್ಮೀಯ ವಿವಾಹಕ್ಕೆ ಇರುವ ನಿಯಮಗಳನ್ನು ಪಾಲಿಸಲು ಅವರು ನಿರ್ಧರಿಸಿದ್ದಾರೆ’ ಎಂದು ಪೊಲೀಸರು ತಿಳಿಸಿದರು.

ಕಾಯ್ದೆಯ ನಿಯಮದ ಅನ್ವಯ, ಕಾಯ್ದೆಯಡಿ ನೋಂದಣೆ ಆಗುವ ಮುಖಾಂತರ ತಮ್ಮ ಧರ್ಮವನ್ನು ಬದಲಿಸದೇ ಜೋಡಿಯು ಅಂತರಧರ್ಮೀಯ ವಿವಾಹ ಆಗಬಹುದಾಗಿದೆ. ಆದರೆ ಇತ್ತೀಚೆಗೆ ಉತ್ತರ ಪ್ರದೇಶ ಸರ್ಕಾರವು ಜಾರಿಗೆ ತಂದಿರುವ ಅಕ್ರಮ ಧಾರ್ಮಿಕ ಮತಾಂತರ ತಡೆ ಸುಗ್ರೀವಾಜ್ಞೆ 2020ರ ಅನ್ವಯ, ಇಬ್ಬರಲ್ಲಿ ಯಾರಾದರೂ ಧರ್ಮವನ್ನು ಬದಲಿಸಬೇಕು ಎಂದು ಇಚ್ಛಿಸಿದರೆ, 60 ದಿನ ಮುಂಚಿತವಾಗಿ ಘೋಷಣಾ ಪತ್ರವನ್ನು ಸಂಬಂಧಿಸಿದ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಅಥವಾ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಅವರಿಗೆ ಸಲ್ಲಿಸಬೇಕು.

ಬುಧವಾರ ಮದುವೆಯ ಮಾಹಿತಿ ದೊರೆಯುತ್ತಿದ್ದಂತೆಯೇ ಸ್ಥಳಕ್ಕೆ ಪೊಲೀಸರು ಧಾವಿಸಿದ್ದರು. ಕುಟುಂಬದ ಒಪ್ಪಿಗೆಯಂತೆಯೇ ರೈನಾ ಗುಪ್ತಾ ಹಾಗೂ ಮೊಹಮ್ಮದ್‌ ಆಸಿಫ್‌ ಎಂಬ ಜೋಡಿಯ ವಿವಾಹಕ್ಕೆ ಅಲ್ಲಿ ಸಿದ್ಧತೆ ನಡೆದಿತ್ತು. ಕುಟುಂಬ ಸದಸ್ಯರನ್ನು ಠಾಣೆಗೆ ಕರೆಸಿ ಹೊಸ ಸುಗ್ರೀವಾಜ್ಞೆಯ ಮಾಹಿತಿ ನೀಡಲಾಯಿತು.  ಅಂತರಧರ್ಮೀಯ ವಿವಾಹಕ್ಕೆ ಇರುವ ಪ್ರಕ್ರಿಯೆಗಳನ್ನು ಪಾಲಿಸಲು ಕುಟುಂಬವು ನಿರ್ಧರಿಸಿದೆ’ ಎಂದು ದಕ್ಷಿಣ ವಿಭಾಗದ ಹೆಚ್ಚುವರಿ ಉಪ ಪೊಲೀಸ್‌ ಆಯುಕ್ತ ಸುರೇಶ್‌ ಚಂದ್ರ ರಾವತ್‌ ತಿಳಿಸಿದರು.

‘ಸುಗ್ರೀವಾಜ್ಞೆ ಅನ್ವಯ, ಮತಾಂತರಗೊಳ್ಳಲು ಇಚ್ಛಿಸುವ ವ್ಯಕ್ತಿ ಘೋಷಣಾ ಪತ್ರ ಸಲ್ಲಿಸಿದ ಬಳಿಕ, ಮತಾಂತರಗೊಳ್ಳುವ ಹಿಂದಿನ ಉದ್ದೇಶದ ಕುರಿತು ತನಿಖೆಯನ್ನು ನಡೆಸಲಾಗುತ್ತದೆ. ಮತಾಂತರಗೊಂಡ ಬಳಿಕ ಆ ವ್ಯಕ್ತಿಯು ಆರು ತಿಂಗಳೊಳಗಾಗಿ ನಿಗದಿತ ನಮೂನೆಯಲ್ಲಿ ಮತ್ತೊಂದು ಘೋಷಣಾ ಪತ್ರ ಸಲ್ಲಿಸಬೇಕು. ಇದನ್ನು ಉಲ್ಲಂಘಿಸಿದರೆ ಮೂರು ವರ್ಷದವರೆಗೆ ಜೈಲು ಅಥವಾ ₹10 ಸಾವಿರ ದಂಡ ವಿಧಿಸುವ ಅವಕಾಶವಿದೆ’ ಎಂದು ಹಿರಿಯ ವಕೀಲ ಹೇಮಂತ್‌ ಕುಮಾರ್‌ ಉಪಾಧ್ಯಾಯ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು