ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್‌, ಮಧ್ಯ ಪ್ರದೇಶದಲ್ಲಿ ರಾಜ್ಯ ಪಠ್ಯಕ್ರಮದ 12ನೇ ತರಗತಿ ಪರೀಕ್ಷೆಗಳು ರದ್ದು

Last Updated 2 ಜೂನ್ 2021, 10:51 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಸರ್ಕಾರವು ಸಿಬಿಎಸ್‌ಇ 12ನೇ ತರಗತಿ ಪರೀಕ್ಷೆಗಳನ್ನು ರದ್ದುಪಡಿಸುವ ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ ರಾಜ್ಯಗಳು ಪರೀಕ್ಷೆಯ ಕುರಿತು ತೀರ್ಮಾನ ಸ್ಪಷ್ಟಪಡಿಸಿಕೊಂಡಿವೆ. ಗುಜರಾತ್‌ ಮತ್ತು ಮಧ್ಯ ಪ್ರದೇಶದಲ್ಲಿ ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಹೈಯರ್‌ ಸೆಕೆಂಡರಿ(12ನೇ ತರಗತಿ ) ಪರೀಕ್ಷೆಗಳನ್ನು ನಡೆಸದಿರಲು ಬುಧವಾರ ನಿರ್ಧರಿಸಿವೆ.

ಮಧ್ಯ ಪ್ರದೇಶ ಬೋರ್ಡ್‌ನ 12ನೇ ತರಗತಿ ಪರೀಕ್ಷೆಗಳನ್ನು ರದ್ದು ಪಡಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಹೇಳಿದ್ದಾರೆ.

ಹೈಯರ್‌ ಸೆಕೆಂಡರಿ ಪರೀಕ್ಷೆಗಳನ್ನು ಗುಜರಾತ್‌ ಶಿಕ್ಷಣ ಮಂಡಳಿಯು ರದ್ದು ಪಡಿಸಿದೆ ಎಂದು ಗುಜರಾತ್‌ನ ಶಿಕ್ಷಣ ಸಚಿವ ಭೂಪೇಂದ್ರ ಸಿನ್ಹ ಚುಡಾಸಮಾ ತಿಳಿಸಿದ್ದಾರೆ. 12ನೇ ತರಗತಿ ಪರೀಕ್ಷೆಗಳನ್ನು ಜುಲೈ 1ರಿಂದ ನಡೆಸಲು ಈ ಹಿಂದೆ ತೀರ್ಮಾನಿಸಲಾಗಿತ್ತು. ಕಳೆದ ವರ್ಷ ಗುಜರಾತ್‌ನಲ್ಲಿ ಮಾರ್ಚ್‌ 5ರಿಂದ 17ರವರೆಗೂ ಬೋರ್ಡ್‌ ಪರೀಕ್ಷೆಗಳನ್ನು ನಡೆಸಲಾಗಿತ್ತು.

‘ಒತ್ತಡದಿಂದ ಕೂಡಿದ ಈಗಿನ ಸನ್ನಿವೇಶದಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವಂತೆ ಬಲವಂತ ಮಾಡುವುದು ಸರಿಯಲ್ಲ’ ಎಂದು ಮಂಗಳವಾರ ನಡೆದಸಭೆಯಲ್ಲಿ ಪ‍್ರಧಾನಿ ಹೇಳಿದ್ದರು.

ಕಳೆದ ವರ್ಷ ಕೋವಿಡ್‌ ಹರಡುವಿಕೆ ತಡೆಗೆ ದೇಶದಾದ್ಯಂತ ಲಾಕ್‌ಡೌನ್ ಘೋಷಣೆ ಆದಾಗ ಸಿಬಿಎಸ್‌ಇ 12ನೇ ತರಗತಿಯ ಹಲವು ಪರೀಕ್ಷೆಗಳು ಆಗಿದ್ದವು. ಉಳಿದ ಪರೀಕ್ಷೆಗಳನ್ನು ರದ್ದು ಮಾಡಲಾಗಿತ್ತು.

ಪರೀಕ್ಷೆ ರದ್ದತಿ ಕುರಿತು ಮಂಗಳವಾರ ಹೇಳಿಕೆ ಬಿಡುಗಡೆ ಮಾಡಿರುವ ಸಚಿವ ಸುರೇಶ್ ಕುಮಾರ್, 'ಕೇಂದ್ರೀಯ ಮಂಡಳಿಯು ಪರೀಕ್ಷೆ ರದ್ದು‌ ಮಾಡಿರುವ ಹಿನ್ನೆಲೆ, ರಾಜ್ಯ ಪಠ್ಯಕ್ರಮ ಅನುಸರಿಸಿ‌ ಓದುತ್ತಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಸ್ಥಿತಿಗತಿಗಳು, ಮೌಲ್ಯಮಾಪನದ ಅವಶ್ಯಕತೆ‌ ಕುರಿತಂತೆ ಈಗಾಗಲೇ ರೂಪಿತವಾಗಿರುವ ಅಭಿಪ್ರಾಯಗಳ ವಿಸ್ತೃತ ಚರ್ಚೆ‌ ನಡೆಸಿ ವಿದ್ಯಾರ್ಥಿಗಳ ಆರೋಗ್ಯ ಹಾಗೂ ಭವಿಷ್ಯದ ಹಿತದೃಷ್ಟಿಯಿಂದ ಶೀಘ್ರದಲ್ಲಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುತ್ತದೆʼ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT