ಗುರುವಾರ , ಆಗಸ್ಟ್ 18, 2022
25 °C

ಹೆಂಡತಿಗಾಗಿ ತಾಜ್‌ಮಹಲ್‌ನಂತಹ ಐಷಾರಾಮಿ ಮನೆ ಕಟ್ಟಿಸಿದ ಮಧ್ಯಪ್ರದೇಶದ ವ್ಯಕ್ತಿ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಪ್ರೇಮದ ಸಂಕೇತವಾಗಿ ಜನಪ್ರಿಯವಾಗಿರುವ ತಾಜ್‌ಮಹಲ್ ಮೊಘಲ್ ಸಾಮ್ರಾಜ್ಯದ ಪ್ರಮುಖ ಸ್ಮಾರಕಗಳಲ್ಲಿ ಒಂದು. 

ಮೊಘಲ್ ಸಾಮ್ರಾಟ ಶಹಜಹಾನ್, ತನ್ನ ಪ್ರೀತಿಯ ಮಡದಿ ಮುಮ್ತಾಜ್‌ ಮಹಲ್‌ಗಾಗಿ ಇದನ್ನು 1632ರಲ್ಲಿ ಯಮುನಾ ನದಿ ದಂಡೆಯ ಮೇಲೆ ನಿರ್ಮಿಸಿದ್ದಾರೆ. ಶ್ವೇತ ಅಮೃತಶಿಲೆಯಿಂದ ನಿರ್ಮಾಣಗೊಂಡಿರುವ ಈ ಕಟ್ಟಡ, ಜಗತ್ತಿನಾದ್ಯಂತ ಪ್ರಸಿದ್ದಿ ಪಡೆದಿದೆ.

ಪ್ರೇಮಿಗಳು ತಮ್ಮ ಪ್ರೇಮ ನಿವೇದನೆ ಮಾಡಿಕೊಳ್ಳಲು ತಾಜ್‌ಮಹಲ್ ಪ್ರತಿಕೃತಿಗಳನ್ನು ಉಡುಗೊರೆಯಾಗಿ ನೀಡುವುದು ಸಾಮಾನ್ಯ. ಆದರೆ ಮಧ್ಯಪ್ರದೇಶದ ವ್ಯಕ್ತಿಯೊಬ್ಬ ತಾಜ್‌ಮಹಲ್ ಅನ್ನೇ ಹೋಲುವ ಐಷಾರಾಮಿ ಮನೆಯೊಂದನ್ನು ನಿರ್ಮಿಸಿ, ಹೆಂಡತಿಗೆ ಉಡುಗೊರೆಯಾಗಿ ನೀಡಿದ್ದು, ಎಲ್ಲರ ಹುಬ್ಬೇರುವಂತೆ ಮಾಡಿದೆ.

ತಾಜ್‌ಮಹಲ್ ಅನ್ನು ಹೋಲುವ ಮನೆ ನಿರ್ಮಿಸಿದ ವ್ಯಕ್ತಿಯ ಹೆಸರು ಆನಂದ್ ಚೋಕ್ಸೆ. ಮಧ್ಯಪ್ರದೇಶದ ಬುರ್ಹಾನ್‌ಪುರದವರು.

ಶಹಜಹಾನ್ ಪತ್ನಿ ಮುಮ್ತಾಜ್ ಬುರ್ಹಾನ್‌ಪುರಲ್ಲಿ ಕೊನೆಯುಸಿರೆಳೆದಿದ್ದರು. ಹೀಗಿದ್ದರೂ ತಾಜ್‌ಮಹಲ್ ಅನ್ನು ಬುರ್ಹಾನ್‌ಪುರದಲ್ಲಿ ಏಕೆ ನಿರ್ಮಿಸಲಿಲ್ಲ ಎಂಬುದು, ಈ ಸ್ಮಾರಕದ ಬಗ್ಗೆ ಅಪಾರ ಆಸಕ್ತಿ ಹೊಂದಿರುವ ‌ಚೋಕ್ಸೆ ಅವರಲ್ಲಿ ಅಚ್ಚರಿ ಮೂಡಿಸಿತ್ತು. ಆ ಅಚ್ಚರಿಯೇ ಅವರು ತಾಜ್‌ಮಹಲ್‌ನಂತಹ ಮನೆ ನಿರ್ಮಿಸಲು ಪ್ರೇರಣೆಯಾಯಿತು.

ಅದರಂತೆ ಅವರು, 2018ರಲ್ಲಿ ಕಟ್ಟಡ ನಿರ್ಮಾಣ ಆರಂಭಿಸಿದ್ದರು. ಅದೀಗ ಪೂರ್ಣಗೊಂಡಿದೆ.

ಕಾಮಗಾರಿ ಆರಂಭಿಸುವುದಕ್ಕೂ ಮುನ್ನ ತಾಜ್‌ಮಹಲ್‌ ಸ್ಮಾರಕದ ರಚನೆ ಬಗ್ಗೆ ಅಧ್ಯಯನ ನಡೆಸಿರುವ ಎಂಜಿನಿಯರ್, ಮನೆಯ ಒಳಾಂಗಣ ವಿನ್ಯಾಸಕ್ಕಾಗಿ ಬಂಗಾಳ ಮತ್ತು ಇಂಧೋರ್ ಮೂಲದ ಕುಶಲಕರ್ಮಿಗಳ ನೆರವು ಪಡೆದುಕೊಂಡಿದ್ದಾರೆ.

ಕಟ್ಟಡವು ತಾಜ್‌ನಲ್ಲಿರುವಂತೆಯೇ 29 ಅಡಿ ಎತ್ತರದ ಗುಮ್ಮಟವನ್ನು ಹೊಂದಿದೆ. ನೆಲಹಾಸಿಗೆ ರಾಜಸ್ಥಾನದ 'ಮಕ್ರಾನ‍' ಅಮೃತಶಿಲೆ ಬಳಸಲಾಗಿದೆ. ಪೀಠೋಪಕರಣಗಳನ್ನು ಮುಂಬೈ ಮೂಲದ ಕುಶಲಕರ್ಮಿಗಳು ವಿಶೇಷವಾಗಿ ವಿನ್ಯಾಸಗೊಳಿಸಿದ್ದಾರೆ.

ಮನೆಯಲ್ಲಿ ನಾಲ್ಕು ಕೋಣೆಗಳು, ಗ್ರಂಥಾಲಯ ಮತ್ತು ಧ್ಯಾನಕ್ಕಾಗಿ ದೊಡ್ಡ ಹಜಾರವಿದೆ. ತಾಜ್‌ಮಹಲ್‌ ಮಾದರಿಯಲ್ಲಿಯೇ ಕತ್ತಲಿನ ವೇಳೆ ಹೊಳೆಯುವಂತೆ ಬೆಳಕಿನ ವಿನ್ಯಾಸ ಮಾಡಲಾಗಿದೆ.

ಇತ್ತೀಚೆಗೆ, ಬೋಸ್ನಿಯಾದ ವೊಜಿನ್ ಕುಸಿಕ್ (72) ಎನ್ನುವವರು ಹೆಂಡತಿ ಜುಬಿಕಾ ಅವರಿಗಾಗಿ ತಿರುಗುವ ಮನೆಯೊಂದನ್ನು ನಿರ್ಮಿಸಿ ಸುದ್ದಿಯಾಗಿದ್ದರು.

ಮನೆಯ ಹೊರಭಾಗ ಹಸಿರು, ಮೇಲ್ಛಾವಣಿ ಕೆಂಪು ಬಣ್ಣದಲ್ಲಿದ್ದು, ಸುತ್ತಲಿನ ದೃಶ್ಯಗಳನ್ನು ಇದ್ದಲ್ಲಿಯೇ ವೀಕ್ಷಿಸಲು ಅನುಕೂಲವಾಗಲು ತಿರುಗುವಂತೆ ನಿರ್ಮಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು