ಶನಿವಾರ, ಮೇ 15, 2021
29 °C
ಗೃಹಸಚಿವರಿಂದ ಭ್ರಷ್ಟಾಚಾರ: ಸಿಎಂ ರಾಜೀನಾಮೆಗೆ ಬಿಜೆಪಿ ಸದಸ್ಯರ ಒತ್ತಾಯ

ಸಂಸತ್ತಿನಲ್ಲಿ ಪ್ರತಿಧ್ವನಿಸಿದ ಮಹಾರಾಷ್ಟ್ರ ಪ್ರಕರಣ: ಸಿಬಿಐ ತನಿಖೆಗೆ ಆಗ್ರಹ

ಪಿಟಿಐ Updated:

ಅಕ್ಷರ ಗಾತ್ರ : | |

Parliment

ನವದೆಹಲಿ: ಮಹಾರಾಷ್ಟ್ರದ ಗೃಹ ಸಚಿವ ಅನಿಲ್‌ ದೇಶಮುಖ್‌ ವಿರುದ್ಧ ಮುಂಬೈನ ಮಾಜಿ ಪೊಲೀಸ್‌ ಕಮಿಷನರ್‌ ಪರಮ್ ಬಿರ್ ಸಿಂಗ್ ಮಾಡಿರುವ ₹ 100 ಕೋಟಿ ಭ್ರಷ್ಟಾಚಾರ ಆರೋಪವು ಸೋಮವಾರ ಸಂಸತ್ತಿನ ಉಭಯ ಸದನದಲ್ಲೂ ಪ್ರತಿಧ್ವನಿಸಿದ್ದು, ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ರಾಜೀನಾಮೆಗೆ ಬಿಜೆಪಿ ಆಗ್ರಹಪಡಿಸಿತು.

ಶಿವಸೇನೆ ಮತ್ತು ಎನ್‌ಸಿಪಿ ಸದಸ್ಯರ ತೀವ್ರ ಪ್ರತಿಭಟನೆಯ ನಡುವೆಯೂ ಶೂನ್ಯವೇಳೆಯಲ್ಲಿ ಬಿಜೆಪಿಯ ಮನೋಜ್‌ ಕೊಟಕ್‌ ವಿಷಯ ಪ್ರಸ್ತಾಪಿಸಿದರು. ‘ಇದು ಗಂಭೀರವಾದ ವಿಷಯ. ಗೃಹ ಸಚಿವರು, ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು. ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು. ರಾಜ್ಯದ ಮೈತ್ರಿ ಸರ್ಕಾರದ ಪ್ರಮುಖರೇ ಕಾನೂನುಬಾಹಿರವಾಗಿ ಭಾರಿ ಮೊತ್ತ ಸಂಗ್ರಹಿಸುವುದರಲ್ಲಿ ಭಾಗಿಯಾಗಿರುವುದು ಈ ಆರೋಪದಿಂದ ತಿಳಿಯಲಿದೆ’ ಎಂದು ಕೊಟಕ್‌ ಹೇಳಿದರು.

ಓದಿ: 

ಮಹಾರಾಷ್ಟ್ರ ಸರ್ಕಾರ ಕೂಡಲೇ ರಾಜೀನಾಮೆ ನೀಡಬೇಕು. ಪ್ರಕರಣದ ಬಗ್ಗೆ ನಿಷ್ಪಕ್ಷಪಾತ ತನಿಖೆ ಆಗಬೇಕು ಎಂದು ಆಗ್ರಹಪಡಿಸಿದರು. ಬಿಜೆಪಿಯ ಮತ್ತೊಬ್ಬ ಸದಸ್ಯ ಕಪಿಲ್‌ ಪಾಟೀಲ್‌ ಅವರು, ಡಿಜಿಪಿ ದರ್ಜೆಯ ಅಧಿಕಾರಿಯೊಬ್ಬರೂ ಇಂಥದೇ ಸ್ವರೂಪದ ಪತ್ರವನ್ನು ಈ ಹಿಂದೆ ಬರೆದಿದ್ದರು ಎಂದು ಇದೇ ವೇಳೆ ಗಮನ ಸೆಳೆದರು.

ಆದರೆ, ರಾಜ್ಯ ಸರ್ಕಾರವನ್ನು ಬಲವಾಗಿ ಸಮರ್ಥಿಸಿಕೊಂಡ ಶಿವಸೇನೆ ಸದಸ್ಯ ವಿನಾಯಕ್‌ ರಾವುತ್, ರಾಜ್ಯ ಸರ್ಕಾರವನ್ನು ಪದಚ್ಯತಿಗೊಳಿಸಿ ಬಿಜೆಪಿ ನೇತೃತ್ವದ ಸರ್ಕಾರ ಸ್ಥಾಪಿಸುವ ಸಂಚು ಕಳೆದ 14 ತಿಂಗಳಿನಿಂದಲೂ ನಡೆಯುತ್ತಿದೆ. ಈಗಿನ ಆರೋಪವು ಆ ಸಂಚಿನ ಭಾಗವೇ ಆಗಿದೆ ಎಂದು ಆರೋಪಿಸಿದರು.

ಪತ್ರ ಬರೆದಿರುವ ಐಪಿಎಸ್‌ ಅಧಿಕಾರಿಯು ಅತ್ಯಂತ ಭ್ರಷ್ಟ ಅಧಿಕಾರಿ. ರಾಜ್ಯ ಸರ್ಕಾರ ಅವರನ್ನು ಕಮಿಷನರ್‌ ಸ್ಥಾನದಿಂದ ವರ್ಗಾವಣೆ ಮಾಡಿದೆ. ವರ್ಗಾವಣೆ ಹಿಂದೆಯೇ ಅವರು ಪತ್ರ ಬರೆದಿದ್ದಾರೆ ಎಂದು ಹೇಳಿದರು.

ಓದಿ: 

ಕಾಂಗ್ರೆಸ್‌ ಸದನದ ಮುಖಂಡ ರವನೀತ್‌ ಸಿಂಗ್ ಬಿಟ್ಟೂ ಅವರು, ಬಿಜೆಪಿಯೇತರ ಪಕ್ಷಗಳ ಆಡಳಿತವಿರುವ ರಾಜ್ಯಗಳಲ್ಲಿ ಕೇಂದ್ರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.

ರಾಜ್ಯಸಭೆಯಲ್ಲಿಯೂ ಈ ವಿಷಯ ಕೋಲಾಹಲ ಸ್ಥಿತಿಗೆ ಕಾರಣವಾಯಿತು. ಮಧ್ಯಾಹ್ನದವರೆಗೂ ಕಲಾಪವನ್ನೇ ಮುಂದೂಡಲಾಯಿತು. ಪ್ರಶ್ನೋತ್ತರ ಅವಧಿ ಆರಂಭವಾದಂತೆ ಆಡಳಿತ ಪಕ್ಷದ ಸದಸ್ಯರು ವಿಷಯ ಪ್ರಸ್ತಾಪಿಸಿ ಚರ್ಚೆಗೆ ಅವಕಾಶ ಕೋರಿದರು.

ಉಪಾಧ್ಯಕ್ಷ ಹರಿವಂಶ್ ಅವರು ಎದ್ದುನಿಂತು ನಿಗದಿತ ಕಲಾಪ ನಡೆಸಲು ಅವಕಾಶ ಕಲ್ಪಿಸುವಂತೆ ಸದಸ್ಯರಿಗೆ ಮನವಿ ಮಾಡಿದರು.

ಒಂದು ಹಂತದಲ್ಲಿ ಸದಸ್ಯರ ಪ್ರಶ್ನೆಗಳೇ ಕೇಳುತ್ತಿಲ್ಲ ಎಂದು ಸಚಿವ ಪ್ರಕಾಶ್‌ ಜಾವಡೇಕರ್‌ ಪೀಠದ ಗಮನಕ್ಕೆ ತಂದರು. ಕೋಲಾಹಲ ಸ್ಥಿತಿ ಮುಂದುವರಿದಂತೆ ಕಲಾಪವನ್ನು ಮುಂದೂಡಲಾಯಿತು.

‘ರಾಷ್ಟ್ರಪತಿಗೆ ವಸ್ತುಸ್ಥಿತಿ ವರದಿ ಸಲ್ಲಿಸಲಿ’

ಗೃಹಸಚಿವರ ವಿರುದ್ಧದ ಭ್ರಷ್ಟಾಚಾರ ಆರೋಪ, ರಾಜಕೀಯ ಪರಿಸ್ಥಿತಿ ಕುರಿತು ರಾಷ್ಟ್ರಪತಿಗೆ ವಸ್ತುಸ್ಥಿತಿ ವರದಿಯನ್ನು ಸಲ್ಲಿಸಬೇಕು ಎಂದು ರಾಜ್ಯ ಬಿಜೆಪಿ ಮುಖಂಡ ಸುಧೀರ್‌ ಮುಂಗಂತೀವರ್‌ ರಾಜ್ಯಪಾಲ ಬಿ.ಎಸ್‌.ಕೊಶಿಯಾರಿ ಅವರಿಗೆ ಆಗ್ರಹಪಡಿಸಿದ್ದಾರೆ. 

‘ಸದ್ಯ ಮಹಾರಾಷ್ಟ್ರದಲ್ಲಿ 1980ರಲ್ಲಿ ಮೂಡಿದ್ದ ಸ್ಥಿತಿ ಮರುಕಳಿಸಿದೆ. ಆಗ ಶರದ್‌ ಪವಾರ್ ನೇತೃತ್ವದ ಸರ್ಕಾರ ವಜಾಗೊಂಡಿದ್ದು, ರಾಷ್ಟ್ರಪತಿ ಆಡಳಿತ ಹೇರಲಾಗಿತ್ತು. ಎರಡೂ ಸಂದರ್ಭಗಳಿಗೆ ಹೋಲಿಕೆ ಇದ್ದರೂ ನಾನು ರಾಷ್ಟ್ರಪತಿ ಆಡಳಿತಕ್ಕೆ ಒತ್ತಾಯಿಸುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ಇದೊಂದು ಗಂಭೀರ ಆರೋಪ. ಹಗುರವಾಗಿ ಪರಿಗಣಿಸಬಾರದು. ರಾಜ್ಯದಲ್ಲಿ ಸಂವಿಧಾನದ ಮುಖ್ಯಸ್ಥರಾಗಿ ರಾಜ್ಯಪಾಲರು, ರಾಷ್ಟ್ರಪತಿ ಗಮನಕ್ಕೆ ವಸ್ತುಸ್ಥಿತಿ ತರಬೇಕು ಎಂದೂ ಪ್ರತಿಪಾದಿಸಿದರು. ಆದರೆ, ಆರೋಪವನ್ನು ಆಧಾರರಹಿತವಾದುದು ಎಂದು ಗೃಹ ಸಚಿವರು ತಳ್ಳಿಹಾಕಿದ್ದಾರೆ.

ಓದಿ: 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು