ಸೋಮವಾರ, ಆಗಸ್ಟ್ 8, 2022
22 °C

ನಮ್ಮ ಬಳಿ ಬಹುಮತವಿದೆ, ಹೀಗಾಗಿ ಗೆಲುವು ನಮ್ಮದೇ: ಏಕನಾಥ ಶಿಂಧೆ

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ಮುಂಬೈ: ‘ಪ್ರಜಾಪ್ರಭುತ್ವದಲ್ಲಿ ಬಹುಮತ ಮುಖ್ಯವಾದದ್ದು. ನಮ್ಮ ಬಳಿ ಬಹುಮತವಿದ್ದು, ಗೆಲುವು ನಮ್ಮದೇ’ ಎಂದು ಶಿವಸೇನಾ ಬಂಡಾಯ ನಾಯಕ ಏಕನಾಥ ಶಿಂಧೆ ಹೇಳಿದ್ದಾರೆ.

ಗುವಾಹಟಿಯ ಐಷಾರಾಮಿ ಹೋಟೆಲ್‌ನಲ್ಲಿ ಬೀಡುಬಿಟ್ಟಿರುವ ಅವರು ಬುಧವಾರ ಐತಿಹಾಸಿಕ ಕಾಮಾಕ್ಯ ದೇಗುಲಕ್ಕೆ ಭೇಟಿ ನೀಡಿದರು.

ಬಳಿಕ ಪತ್ರಕರ್ತರ ಜತೆ ಮಾತನಾಡಿ, ‘ಈ ದೇಶದಲ್ಲಿ ಕಾನೂನು ಇದೆ. ಸಂವಿಧಾನ ಇದೆ. ನಿಯಮಗಳೂ ಇವೆ. ನಿಯಮಗಳಿಗೆ ಯಾರೂ ಹೊರತಲ್ಲ’ ಎಂದು ಹೇಳಿದ್ದಾರೆ.

ತಮ್ಮ ಜತೆ 49 ಶಾಸಕರಿದ್ದಾರೆ ಎಂದಿರುವ ಅವರು, ಎಲ್ಲರೂ ಗುರುವಾರ ಮುಂಬೈಗೆ ತೆರಳಿ ವಿಶ್ವಾಸಮತ ಪ್ರಕ್ರಿಯೆಯಲ್ಲಿ ಭಾಗಿಯಾಗುವುದಾಗಿ ಅವರು ತಿಳಿಸಿದ್ದಾರೆ.

‘ಔಪಚಾರಿಕತೆಗಳ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ. ನಾವೆಲ್ಲರೂ ಅದರಲ್ಲಿ ಭಾಗವಹಿಸುತ್ತೇವೆ’ ಎಂದು ಅವರು ಹೇಳಿದ್ದಾರೆ.

ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರಿಗೆ ಸೂಚಿಸುವಂತೆ ಮಹಾರಾಷ್ಟ್ರ ವಿರೋಧ ಪಕ್ಷದ ನಾಯಕ, ಬಿಜೆಪಿಯ ದೇವೇಂದ್ರ ಫಡಣವೀಸ್ ಅವರು ರಾಜ್ಯಪಾಲ ಭಗತ್‌ಸಿಂಗ್‌ ಕೋಶಿಯಾರಿ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದ್ದರು. ಅದರ ಬೆನ್ನಲ್ಲೇ, ಬಹುಮತ ಸಾಬೀತುಪಡಿಸುವ ಏಕೈಕ ಕಾರ್ಯಸೂಚಿಯೊಂದಿಗೆ ಜೂನ್ 30 ರಂದು ಬೆಳಿಗ್ಗೆ 11 ಗಂಟೆಗೆ ವಿಧಾನಸಭೆಯ ವಿಶೇಷ ಅಧಿವೇಶನವನ್ನು ಕರೆಯುವಂತೆ ರಾಜ್ಯಪಾಲರು ವಿಧಾನಸಭೆಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು.

ಅದರಂತೆ, ಮಹಾ ವಿಕಾಸ್ ಆಘಾಡಿ (ಎಂವಿಎ) ಸರ್ಕಾರವು ಗುರುವಾರ ಬಹುಮತ ಸಾಬೀತು ಪಡಿಸಬೇಕಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು