ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರೀನಾ ಪ್ರೆಗ್ನೆನ್ಸಿ ಬೈಬಲ್‌ಗೆ ವಿರೋಧ: ಸರ್ಕಾರದ ಮೂಲಕ ದೂರು ದಾಖಲಿಸಿ- ಹೈಕೋರ್ಟ್

Last Updated 5 ಆಗಸ್ಟ್ 2022, 10:32 IST
ಅಕ್ಷರ ಗಾತ್ರ

ಜಬಲ್‌ಪುರ: ಗರ್ಭಧಾರಣೆ ಕುರಿತು ಬಾಲಿವುಡ್‌ ನಟಿ ಕರೀನಾ ಕಪೂರ್‌ ಅವರ ಪುಸ್ತಕದ ಶಿರೋನಾಮೆಯಲ್ಲಿ 'ಬೈಬಲ್‌' ಪದ ಬಳಕೆಯಾಗಿರುವುದಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರದ ಮೂಲಕ ಪ್ರಕರಣ ದಾಖಲಿಸಬೇಕೆಂದು ಎಂದು ಮಧ್ಯ ಪ್ರದೇಶ ಹೈಕೋರ್ಟ್‌ ಆದೇಶಿಸಿದೆ.

'ಕರೀನಾ ಕಪೂರ್‌ ಖಾನ್ಸ್‌ ಪ್ರೆಗ್ನೆನ್ಸಿ ಬೈಬಲ್‌' ಎಂಬ ಕೃತಿಯಲ್ಲಿ ಬೈಬಲ್‌ ಪದ ಬಳಕೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸೆಷನ್ಸ್‌ ಕೋರ್ಟ್‌ ಫೆಬ್ರುವರಿ 26ರಂದು ವಜಾ ಮಾಡಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ ಮೊರೆ ಹೋಗಲಾಗಿತ್ತು.

ಕೃತಿಯಲ್ಲಿ ಬೈಬಲ್‌ ಪದ ಬಳಸುವ ಮೂಲಕ ಕ್ರಿಶ್ಚಿಯನ್‌ ಸಮುದಾಯದ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ. ನಟಿ ಕರೀನಾ ಕಪೂರ್‌ ವಿರುದ್ಧ ಎಫ್‌ಐಆರ್‌ ದಾಖಲಿಸಬೇಕು ಎಂದು ಕೋರಿ ವಕೀಲ ಕ್ರಿಸ್ಟೋಫರ್‌ ಆಂಥೋಣಿ ಅರ್ಜಿ ಸಲ್ಲಿಸಿದ್ದರು.

ಈ ಕೃತಿಯನ್ನು ನಟಿ ಕರೀನಾ ಅವರು ಲೇಖಕಿ ಅದಿತಿ ಶಾ ಭೀಮ್‌ಜ್ಞಾನಿ ಅವರೊಂದಿಗೆ ಸೇರಿ ರಚಿಸಿದ್ದಾರೆ.

ದೂರುದಾರ ರಾಜ್ಯ ಸರ್ಕಾರವನ್ನು ಕಕ್ಷಿಗಾರನನ್ನಾಗಿ ಸೇರಿಸಿಲ್ಲ. ಹಾಗಾಗಿ ರಾಜ್ಯ ಸರ್ಕಾರದ ಮೂಲಕ ಪ್ರಕರಣ ದಾಖಲಿಸಬೇಕು ಎಂದು ಆಂಥೋಣಿ ಅವರಿಗೆ ಕೋರ್ಟ್‌ ನಿರ್ದೇಶಿಸಿದೆ. ನ್ಯಾ. ಡಿ.ಕೆ. ಪಲಿವಾಲ್‌ ಅವರಿದ್ದ ಏಕಸದಸ್ಯ ಪೀಠವು ಈ ಆದೇಶ ನೀಡಿದೆ.

ಪೊಲೀಸ್‌ ಠಾಣೆಯಿಂದ ಹೈಕೋರ್ಟ್‌ ವರೆಗೆ...

ಆಂಥೋಣಿ ಅವರು 2011ರ ಸೆಪ್ಟಂಬರ್‌ನಲ್ಲಿ ಓಮತಿ ಪೊಲೀಸ್‌ ಠಾಣೆಯಲ್ಲಿ ನಟಿ ವಿರುದ್ಧ ದೂರು ದಾಖಲಿಸಿದ್ದರು. ಆದರೆ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆ ಜಬಲ್‌ಪುರದ ಮ್ಯಾಜಿಸ್ಟ್ರೇಟ್‌ ಕೋರ್ಟ್‌ಗೆ ದೂರು ನೀಡಿದ್ದರು.

ಮೇಲ್ನೋಟಕ್ಕೆ ಆಕ್ಷೇಪಾರ್ಹ ಸಂಗತಿಯು ಪುಸ್ತಕದ ಹೆಸರಿನಲ್ಲಿ ಕಂಡುಬಂದಿಲ್ಲ. ಬೈಬಲ್‌ ಪದ ಬಳಕೆಯಿಂದ ಕ್ರಿಶ್ಚಿಯನ್‌ ಸಮುದಾಯಕ್ಕೆ ಯಾವ ರೀತಿಯಲ್ಲಿ ನೋವುಂಟು ಮಾಡುತ್ತದೆ ಎಂಬುದನ್ನು ದೂರುದಾರರು ವಿವರಿಸಿಲ್ಲ ಎಂದು ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಅರ್ಜಿಯನ್ನು ತಿರಸ್ಕರಿಸಿತ್ತು.

ನಂತರ ಆಂಥೋಣಿ ಅವರು ಸೆಷನ್ಸ್‌ ಕೋರ್ಟ್‌ ಮೆಟ್ಟಿಲೇರಿದ್ದರು. ಅಲ್ಲಿಯೂ ಅರ್ಜಿ ವಜಾಗೊಂಡ ಬಳಿಕ ಇದೀಗ ಹೈಕೋರ್ಟ್‌ ಮೊರೆ ಹೋಗಿದ್ದಾರೆ.

ಪವಿತ್ರ ಪುಸ್ತಕ ಬೈಬಲ್‌ಅನ್ನು ಗರ್ಭಧಾರಣೆ ಜೊತೆಗೆ ಹೋಲಿಸಲು ಸಾಧ್ಯವಿಲ್ಲ. ಇದರಿಂದ ಕ್ರಿಶ್ಚಿಯನ್‌ ಸಮುದಾಯಕ್ಕೆ ನೋವಾಗಿದೆ ಎಂದು ಆಂಥೋಣಿ ಅವರು ಅರ್ಜಿಯಲ್ಲಿ ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT