ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮೂಹಿಕ ಅತ್ಯಾಚಾರಕ್ಕೆ ‘ಪ್ರೇಮ ಪ್ರಕರಣ’ದ ತಿರುವು ಕೊಟ್ಟ ಮಮತಾ

Last Updated 12 ಏಪ್ರಿಲ್ 2022, 4:04 IST
ಅಕ್ಷರ ಗಾತ್ರ

ಕೋಲ್ಕತ್ತ: ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಹಂಸಖಾಲಿ ಎಂಬಲ್ಲಿ ಕಳೆದ ವಾರ ಬಾಲಕಿಯೊಬ್ಬಳು ಸಾಮೂಹಿಕ ಅತ್ಯಾಚಾರಕ್ಕೀಡಾಗಿ ಮೃತಪಟ್ಟ ಘಟನೆಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ‘ಪ್ರೇಮ ಪ್ರಕರಣ’ದ ಆಯಾಮ ನೀಡಿದ್ದಾರೆ.

ಸೋಮವಾರ ಮಧ್ಯಾಹ್ನ ಕೋಲ್ಕತ್ತದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ‘ಈಗ ಏನು ನಡೆದುಹೋಗಿದೆಯೋ ಅದು ನಿಜಕ್ಕೂ ಸರಿಯಲ್ಲ. ಘಟನೆಯನ್ನು ನಾನು ಖಂಡಿಸುತ್ತೇನೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆದರೆ ವಿರೋಧ ಪಕ್ಷಗಳು ಮತ್ತು ಕೆಲ ಮಾಧ್ಯಮಗಳು ಇಡೀ ಘಟನೆಗೆ ರಾಜಕೀಯ ಬಣ್ಣ ಹಚ್ಚುತ್ತಿವೆ. ಆರೋಪಿ ಮತ್ತು ಸಂತ್ರಸ್ತೆ ಇಬ್ಬರೂ ಪ್ರೀತಿಸುತ್ತಿದ್ದರು ಎಂಬ ಬಗ್ಗೆ ನನಗೆ ಮಾಹಿತಿ ಸಿಕ್ಕಿದೆ. ತನಿಖೆ ಪೂರ್ಣಗೊಳ್ಳುವ ಮುನ್ನವೇ ನಾವು ತೀರ್ಮಾನಗಳನ್ನು ಯಾಕೆ ಮಾಡಬೇಕು? ಎಂದು ಮುಖ್ಯಮಂತ್ರಿ ಮಮತಾ ಪ್ರಶ್ನಿಸಿದರು.

‘ಪ್ರಕರಣದ ಬಗ್ಗೆ ನಾನು ಪೊಲೀಸರನ್ನು ವಿಚಾರಿಸಿದೆ.ಸಾವಿಗೆ ಕಾರಣ ಏನು ಎಂದು ಪೊಲೀಸರಿಗೂ ಇನ್ನೂ ಅರ್ಥವಾಗುತ್ತಿಲ್ಲ. ನೀವು ಇದನ್ನು ಅತ್ಯಾಚಾರ ಎಂದು ಕರೆಯುತ್ತೀರಾ? ಆಕೆ ಗರ್ಭಿಣಿಯಾಗಿದ್ದಳೇ? ಇದು ಪ್ರೇಮ ಪ್ರಕರಣವೇ? ನೀವು ಈ ಬಗ್ಗೆ ವಿಚಾರಿಸಿದ್ದೀರಾ ಎಂದು ನಾನು ಪೊಲೀಸರನ್ನು ಕೇಳಿದ್ದೇನೆ. ಆದರೂ ಈ ಘಟನೆ ದುರದೃಷ್ಟಕರ ’ ಎಂದು ಮಮತಾ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.

‘ಆರೋಪಿ ಮತ್ತು ಸಂತ್ರಸ್ತೆಯ ನಡುವೆ ಪ್ರೇಮ ಇತ್ತು ಎಂಬುದು ಆಕೆಯ ಪೋಷಕರು ಮತ್ತು ಗ್ರಾಮಸ್ಥರಿಗೆ ಗೊತ್ತಿತ್ತು’ ಎಂದೂ ಮಮತಾ ಹೇಳಿದ್ದಾರೆ.

‘ನೀವು (ಹುಡುಗಿಯ ಕುಟುಂಬದವರು) ಬಾಲಕಿಯ ಸಂಸ್ಕಾರ ನೆರವೇರಿಸಿದ್ದೀರಿ. ನಾನು ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ಮಾತನಾಡುತ್ತಿದ್ದೇನೆ. ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆಯೇ, ಆಕೆ ಗರ್ಭಿಣಿಯಾಗಿದ್ದಾಳೆ ಅಥವಾ ಆಕೆ ಸಾವಿಗೆ ಬೇರೆ ಯಾವುದೇ ಕಾರಣವಿತ್ತೇ ಎಂಬುದಕ್ಕೆ ಪುರಾವೆಗಳನ್ನು ಪೊಲೀಸರು ಈಗ ಎಲ್ಲಿಂದ ಪಡೆಯಬೇಕು? ಆಥವಾ ಆಕೆ ಕಪಾಳಕ್ಕೆ ಹೊಡೆತ ಬಿದ್ದು ಸತ್ತಿದ್ದರೆ?’ ಎಂದೂ ಮಮತಾ ಪ್ರಶ್ನೆ ಮಾಡಿರುವುದಾಗಿ ಪಿಟಿಐ ಸುದ್ದಿ ಪ್ರಕಟಿಸಿದೆ.

ಮಮತಾ ಅವರ ಹೇಳಿಕೆಗೆ ವಿರೋಧ ಪಕ್ಷಗಳು ದಿಗ್ಭ್ರಾಂತಿ ವ್ಯಕ್ತಪಡಿಸಿವೆ. ಬಿಜೆಪಿ ತೀವ್ರವಾಗ್ದಾಳಿ ನಡೆಸಿದೆ.

ಮಾಧ್ಯಮಗಳ ವಿರುದ್ಧ ಮಮತಾ ವಾಗ್ದಾಳಿ

ಬ್ಯಾನರ್ಜಿ ಅವರು ಮಾಧ್ಯಮಗಳ ಮೇಲೂ ತೀವ್ರ ವಾಗ್ದಾಳಿ ನಡೆಸಿದ್ದಾರೆ. ‘ಮಾಧ್ಯಮ ರಂಗದ ಬಹುದೊಡ್ಡ ವರ್ಗವೊಂದು ರಾಜ್ಯವನ್ನು ನಕಾರಾತ್ಮಕವಾಗಿ ಬಿಂಬಿಸಲು ಪ್ರಯತ್ನಿಸುತ್ತಿದೆ’ ಎಂದು ಅವರು ಆರೋಪಿಸಿದರು.

‘ಸಣ್ಣ ಘಟನೆಗಳನ್ನೂ ರಾಷ್ಟ್ರಮಟ್ಟದಲ್ಲಿ ದೊಡ್ಡ ಸುದ್ದಿ ಎಂಬಂತೆ ಬಿಂಬಿಸುವ ಮಾಧ್ಯಮಗಳು ಸರ್ಕಾರವನ್ನು ಅದಕ್ಕೆ ಹೊಣೆಯಾಗಿಸುತ್ತಿವೆ. ಆದರೆ, ಮಧ್ಯಪ್ರದೇಶದಲ್ಲಿ ಪತ್ರಕರ್ತರರ ಬಟ್ಟೆ ಬಿಚ್ಚಿಸಿದ್ದರ ಬಗ್ಗೆ ಇದೇ ಮಾಧ್ಯಮಗಳು ಮೌನವಾಗಿರುತ್ತವೆ’ ಎಂದು ಅವರು ಗೇಲಿ ಮಾಡಿದರು.

ಘಟನೆಯ ಸಿಬಿಐ ತನಿಖೆಗೆ ಆಗ್ರಹಿಸಿ ಸೋಮವಾರ ಕೋಲ್ಕತ್ತ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. ಮಂಗಳವಾರ ವಿಚಾರಣೆ ನಡೆಯುವ ಸಾಧ್ಯತೆ ಇದೆ.

ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯ ಪೋಷಕರು,ಸ್ಥಳೀಯ ಪಂಚಾಯ್ತಿ ಸದಸ್ಯನ ಮಗ ಬ್ರಜಗೋಪಾಲ್ ಗೋಯಲ್ ವಿರುದ್ಧ ಹಂಸಖಾಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

‘ಹುಟ್ಟುಹಬ್ಬ ಆಚರಣೆಗಾಗಿ ಏಪ್ರಿಲ್‌ 4ರಂದು ಆರೋಪಿ ಗೋಯಲ್‌ ನಮ್ಮ ಮಗಳನ್ನು ತನ್ನ ನಿವಾಸಕ್ಕೆ ಕರಸಿಕೊಂಡಿದ್ದ. ಅಲ್ಲಿ, ಆಕೆಗೆ ಬಲವಂತವಾಗಿ ಮದ್ಯ ಕುಡಿಸಿ ನಂತರ ಅತ್ಯಾಚಾರವೆಸಗಲಾಗಿದೆ. ನಂತರ ಮನೆಗೆ ಬಂದ ಬಾಲಕಿಗೆ ಹೊಟ್ಟೆಯ ಕೆಳಭಾಗದಲ್ಲಿ ತೀವ್ರ ನೋವು ಕಾಣಿಸಿಕೊಂಡು ತಡರಾತ್ರಿ ಸಾವನ್ನಪ್ಪಿದ್ದಾಳೆ’ ಎಂದು ಪೋಷಕರು ಹೇಳಿದ್ದಾರೆ.

ಸಂತ್ರಸ್ತೆಯ ಕುಟುಂಬವು ‘ಚೈಲ್ಡ್ ಲೈನ್‌’ನ ನೆರವು ಪಡೆದುಕೊಂಡಿದೆ. ಶನಿವಾರ ಹಂಸಖಾಲಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದೆ. ಪೊಲೀಸರು ಭಾನುವಾರ ಆರೋಪಿಯನ್ನು ಬಂಧಿಸಿದ್ದಾರೆ.

ಅಪ್ರಾಪ್ತೆಯೊಂದಿಗಿನ ಸಮ್ಮತಿಯ ಲೈಂಗಿಕತೆಯೂ ಅತ್ಯಾಚಾರವೇ

ಸಂತ್ರಸ್ತೆ ಅಪ್ರಾಪ್ತ ವಯಸ್ಸಿನವಳಾಗಿರುವುದರಿಂದ ಈ ಪ್ರಕರಣದಲ್ಲಿ ಪ್ರೇಮ ಸಂಬಂಧ ಮತ್ತು ಒಪ್ಪಿಗೆಯ ಲೈಂಗಿಕತೆಯ ವಾದಗಳನ್ನುಕಾನೂನು ತಜ್ಞರು ತಳ್ಳಿಹಾಕಿದ್ದಾರೆ.

‘ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯಿದೆ–2012ರ ಅಡಿಯಲ್ಲಿ, ಅಪ್ರಾಪ್ತ ಬಾಲಕಿಯೊಂದಿಗೆ ಒಪ್ಪಿತ ಲೈಂಗಿಕ ಕ್ರಿಯೆ ನಡೆಸುವುದೂ ಸಹ ಅತ್ಯಾಚಾರ ಎಂದು ಪರಿಗಣಿಸಲಾಗುತ್ತದೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗಿ ಅಪ್ರಾಪ್ತೆಯಾಗುತ್ತಾಳೆ. ಲೈಂಗಿಕತೆಗೆ ಒಪ್ಪಿಗೆ ನೀಡುವುದು ಅಪ್ರಾಪ್ತೆಯ ಹಕ್ಕು ಎನಿಸಿಕೊಳ್ಳುವುದಿಲ್ಲ. ಕಾನೂನಿನ ಪ್ರಕಾರ ಅಪ್ರಾಪ್ತರೊಂದಿಗಿನ ಸಮ್ಮತಿಯ ಲೈಂಗಿಕತೆಯೂ ದೌರ್ಜನ್ಯ ಎನಿಸಿಕೊಳ್ಳುತ್ತದೆ’ ಎಂದು ಕಲ್ಕತ್ತಾ ಹೈಕೋರ್ಟ್‌ನ ಹಿರಿಯ ವಕೀಲ ಕೌಶಿಕ್ ಗುಪ್ತಾ ಅವರು ಅಭಿಪ್ರಾಯಪಟ್ಟಿದ್ದಾರೆ ಎಂದು ಸುದ್ದಿ ಸಂಸ್ಥೆ ಐಎಎನ್‌ಎಸ್‌ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT