ಬುಧವಾರ, ಜುಲೈ 6, 2022
22 °C

ಸಿಎಂ ನಿತೀಶ್ ಕುಮಾರ್ ಮೇಲೆ ಹಲ್ಲೆ ಮಾಡಿದ್ದ ವ್ಯಕ್ತಿಗೆ ಮನೋರೋಗ ಚಿಕಿತ್ಸೆ

ಪಿಟಿಐ Updated:

ಅಕ್ಷರ ಗಾತ್ರ : | |

ಪಟ್ನಾ: ಎರಡು ದಿನಗಳ ಹಿಂದೆ ಕಾರ್ಯಕ್ರಮವೊಂದರಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಮೇಲೆ ದಾಳಿ ನಡೆಸಿದ್ದ ವ್ಯಕ್ತಿಯನ್ನು ಮನೋರೋಗ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಮುಖ್ಯಮಂತ್ರಿ ಮೇಲೆ ದಾಳಿ ನಡೆಸಿದ್ದ ವ್ಯಕ್ತಿಯನ್ನು ಪಟ್ನಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪಟ್ನಾದ ಹಿರಿಯ ಪೊಲೀಸ್ ಅಧಿಕಾರಿ ಮನವ್‌ಜೀತ್ ಸಿಂಗ್ ಧಿಲ್ಲಾನ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ನಾವು ಕೂಲಂಕಷವಾಗಿ ವಿಚಾರಣೆ ನಡೆಸಿದ್ದೇವೆ. ದಾಳಿಕೋರ ಅಥವಾ ಅವರ ಕುಟುಂಬದ ಯಾವುದೇ ಸದಸ್ಯರು ಯಾವುದೇ ಕ್ರಿಮಿನಲ್ ಇತಿಹಾಸವನ್ನು ಹೊಂದಿಲ್ಲ. ಸೂಚನೆಗಳ ಪ್ರಕಾರ, ಅವರನ್ನು ಮೊದಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪರೀಕ್ಷಿಸಲಾಯಿತು. ನಂತರ ಪಿಎಂಸಿಎಚ್‌ನಲ್ಲಿ ತಜ್ಞರಿಂದ ಮನೋವೈದ್ಯಕೀಯ ಚಿಕಿತ್ಸೆಗೆ ಒಳಗಾಗುತ್ತಿದ್ದಾರೆ' ಎಂದಿದ್ದಾರೆ.

32 ವರ್ಷದ ವ್ಯಕ್ತಿ ಭಾನುವಾರ ನಗರದ ಹೊರವಲಯದಲ್ಲಿರುವ ಭಕ್ತಿಯಾರ್‌ಪುರದಲ್ಲಿ ಮುಖ್ಯಮಂತ್ರಿ ಮೇಲೆ ಹಲ್ಲೆ ನಡೆಸಿದ್ದ. ತಕ್ಷಣವೇ ಕರ್ತವ್ಯದಲ್ಲಿದ್ದ ಭದ್ರತಾ ಸಿಬ್ಬಂದಿ ಆತನನ್ನು ತಡೆದಿದೆ. ದಾಳಿಕೋರನಿಗೆ ಥಳಿಸಬೇಡಿ ಮತ್ತು ಆತನಿಗೆ ಏನಾಗಿದೆ ಎಂಬುದನ್ನು ತಿಳಿದುಕೊಳ್ಳಲು ಪ್ರಯತ್ನಿಸಿ ಎಂದು ಸಿಎಂ ತಕ್ಷಣವೇ ಭದ್ರತಾ ಸಿಬ್ಬಂದಿಗೆ ಸೂಚಿಸಿದ್ದರು.

ದಾಳಿ ಮಾಡಿದ್ದವ ಸ್ಥಳೀಯ ನಿವಾಸಿಯಾಗಿದ್ದು, ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದ. ಆ ವ್ಯಕ್ತಿಯ ಮಾನಸಿಕ ಸ್ಥಿತಿ ಸರಿಯಿರಲಿಲ್ಲ. ಪತ್ನಿ ಮತ್ತು ಮಕ್ಕಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದ. ಆತನ ವಿರುದ್ಧ 'ಯಾವುದೇ ಶಿಕ್ಷಾರ್ಹ ಕ್ರಮ' ತೆಗೆದುಕೊಳ್ಳದಂತೆ ಮತ್ತು ಮನೋರೋಗಕ್ಕೆ ಚಿಕಿತ್ಸೆ ಕೊಡಿಸುವಂತೆ ಸಿಎಂ ಆದೇಶಿಸಿದ್ದಾರೆ ಎಂದು ಜಿಲ್ಲಾಡಳಿತ ನಂತರ ಹೇಳಿಕೆ ಬಿಡುಗಡೆ ಮಾಡಿತು.

ಈಮಧ್ಯೆ, ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್, ಮುಖ್ಯಮಂತ್ರಿ ಕಾರ್ಯಕ್ರಮದಲ್ಲೇ 'ಭದ್ರತಾ ಲೋಪ' ಉಂಟಾಗಿರುವುದು ರಾಜ್ಯದಲ್ಲಿನ ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಯನ್ನು ಸೂಚಿಸುತ್ತದೆ. ಇದು ಶೋಚನೀಯ ಪ್ರಸಂಗ. ಮುಖ್ಯಮಂತ್ರಿಯೇ ಸುರಕ್ಷಿತವಾಗಿಲ್ಲದಿದ್ದಾಗ ಒಬ್ಬ ಸಾಮಾನ್ಯ ವ್ಯಕ್ತಿ ಎಷ್ಟು ಸುರಕ್ಷಿತವಾಗಿರುತ್ತಾನೆ ಎಂಬುದನ್ನು ಊಹಿಸಬಹುದು ಎಂದಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು