ಮಂಗಳವಾರ, ಅಕ್ಟೋಬರ್ 19, 2021
22 °C
ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್‌ ಮಾಂಡವೀಯ ಹೇಳಿಕೆ

ಮಕ್ಕಳ ಮಾನಸಿಕ ಆರೋಗ್ಯ ಸಮಸ್ಯೆಗಳ ಅರಿವಿನ ತರಬೇತಿ ಶಿಕ್ಷಕರಿಗೆ ಬೇಕಿದೆ: ಮನ್‌ಸುಖ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಮಕ್ಕಳಲ್ಲಿನ ಮಾನಸಿಕ ಆರೋಗ್ಯ ಸಮಸ್ಯೆಗಳ ಬಗ್ಗೆ ಗಮನಹರಿಸಲು ಶಿಕ್ಷಕರಿಗೆ ಸೂಕ್ತ ತರಬೇತಿ ನೀಡಬೇಕಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್‌ ಮಾಂಡವೀಯ ಮಂಗಳವಾರ ತಿಳಿಸಿದರು.

ಯುನಿಸೆಫ್‌ನ ‘ದಿ ಸ್ಟೇಟ್ ಆಫ್ ದಿ ವರ್ಲ್ಡ್ಸ್ ಚಿಲ್ಡ್ರನ್ 2021 - ಆನ್ ಮೈ ಮೈಂಡ್: ಮಕ್ಕಳ ಮಾನಸಿಕ ಆರೋಗ್ಯ ಉತ್ತೇಜಿಸುವುದು, ರಕ್ಷಿಸುವುದು ಮತ್ತು ಕಾಳಜಿ ವಹಿಸುವುದು’ ಜಾಗತಿಕ ಪ್ರಮುಖ ಪ್ರಕಟಣೆ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ವಿಶ್ವದ ಶೇ 14ರಷ್ಟು ಮಕ್ಕಳು ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದು ಗಂಭೀರ ಸಮಸ್ಯೆ. ನಾವು ಅದನ್ನು ಸಮಯಕ್ಕೆ ಸರಿಯಾಗಿ ಪರಿಹರಿಸದಿದ್ದರೆ, ಅದು ಸಮಾಜದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ’ ಎಂದು ಸಚಿವರು ಕಳವಳ ವ್ಯಕ್ತಪಡಿಸಿದರು.

ಓದಿ: 

ಶಿಕ್ಷಕರಿಗೆ ಸರಿಯಾದ ತರಬೇತಿ ಇದ್ದರೆ ಮಕ್ಕಳಲ್ಲಿನ ಮಾನಸಿಕ ಸಮಸ್ಯೆಗಳನ್ನು ಮೊದಲೇ ಗುರುತಿಸಿ ಚಿಕಿತ್ಸೆ ಅಥವಾ ಸಮಾಲೋಚನೆಗೆ ಶಿಫಾರಸು ಮಾಡಲು ಸಾಧ್ಯವಾಗುತ್ತದೆ. ಮಕ್ಕಳಲ್ಲಿನ ಮಾನಸಿಕ ಆರೋಗ್ಯದ ತಿಳಿವಳಿಕೆಯನ್ನು ಶಿಕ್ಷಕರ ತರಬೇತಿ ಪಠ್ಯಕ್ರಮದಲ್ಲಿ ಸೇರಿಸುವ ಅಗತ್ಯವಿದೆ ಎಂದು ಸಚಿವರು ಒತ್ತಿ ಹೇಳಿದರು.

ಶಿಕ್ಷಣ ಸಂಸ್ಥೆ ಅತಿದೊಡ್ಡ ಕುಟುಂಬವಿದ್ದಂತೆ. ಕುಟುಂಬಗಳು ತಮ್ಮ ಮಕ್ಕಳನ್ನು ಮುಕ್ತವಾಗಿ ಮಾತನಾಡಲು ಪ್ರೋತ್ಸಾಹಿಸಬೇಕು. ಯಾವುದೇ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಮುಂಚಿತವಾಗಿ ಪರಿಹರಿಸಲು ಅವರೊಂದಿಗೆ ಸಂವಾದ ನಡೆಸಬೇಕು ಎಂದು ಸಚಿವರು ಹೇಳಿದರು.

‘ಪ್ರಸ್ತುತ ದಿನಗಳಲ್ಲಿ ಮಕ್ಕಳು ಮತ್ತು ಕುಟುಂಬದ ಹಿರಿಯರ ನಡುವೆ ಯಾವುದೇ ಸಂಭಾಷಣೆಯೇ ಇಲ್ಲದಂತಾಗಿದೆ. ಕುಟುಂಬಗಳಲ್ಲಿ ಎಲ್ಲಾ ಸದಸ್ಯರು ಒಟ್ಟಿಗೆ ಕುಳಿತುಕೊಳ್ಳುವುದು ಮುಖ್ಯ. ಪೋಷಕರು ತಮ್ಮ ಮಕ್ಕಳನ್ನು ಸ್ನೇಹಿತರಂತೆ ಕಾಣಬೇಕು. ಮಕ್ಕಳು ಮುಕ್ತವಾಗಿ ಸಂಭಾಷಣೆ ನಡೆಸುವ ವಾತಾವರಣವಿರಬೇಕು. ಮಕ್ಕಳ ನಡವಳಿಕೆಯಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು’ ಎಂದು ಮಾಂಡವೀಯ ಸಲಹೆ ನೀಡಿದರು.

ಯುನಿಸೆಫ್ ಇಂಡಿಯಾ ಪ್ರತಿನಿಧಿ ಯಾಸ್ಮಿನ್ ಅಲಿ ಹಕ್ ಮಾತನಾಡಿ, ಭಾರತದಲ್ಲಿ ಕೋವಿಡ್‌ –19 ಎರಡನೇ ಅಲೆಯ ಆಕ್ರಮಣ ಎದುರಿಸಲು ಮಕ್ಕಳನ್ನು ಸರಿಯಾಗಿ ಸನ್ನದ್ಧಗೊಳಿಸಲಿಲ್ಲ. ಸಾಂಕ್ರಾಮಿಕ ರೋಗದಿಂದ ಉಂಟಾಗುವ ಅಪಾಯಗಳು ಮತ್ತು ನಿರ್ಬಂಧಗಳಿಂದ ದೇಶದಲ್ಲಿ ಮಕ್ಕಳು ಸವಾಲಿನ ಸಮಯ ಎದುರಿಸುತ್ತಿದ್ದಾರೆ. ಯಾವುದೇ ಮಗು ನೋವು ಮತ್ತು ಅನಿಶ್ಚಿತತೆ ನೋಡಬಾರದೆಂದುಕೊಂಡಿದ್ದೇವೊ ಆದರೆ ಆ ಮಕ್ಕಳೆಲ್ಲರೂ ಅದಕ್ಕೆ ಸಾಕ್ಷಿಯಾಗಿಬಿಟ್ಟರು’ ಎಂದರು.

ಕುಟುಂಬ, ಸ್ನೇಹಿತರು, ತರಗತಿ ಕೊಠಡಿಗಳು ಮತ್ತು ಆಟದಿಂದ ದೂರವಿರುವುದು ಮಕ್ಕಳಿಗೆ ಪ್ರತ್ಯೇಕತೆಯ ಭಾವ ಮತ್ತು ಆತಂಕವನ್ನೂ ಉಂಟುಮಾಡಿದೆ. ಮಕ್ಕಳು ಕೇವಲ ಭಾವನಾತ್ಮಕ ದುರಂತ ಅನುಭವಿಸುತ್ತಿಲ್ಲ, ಅನೇಕರು ನಿರ್ಲಕ್ಷ್ಯ ಮತ್ತು ನಿಂದನೆಯ ಅಪಾಯದಲ್ಲಿದ್ದಾರೆ ಎಂದು ಹಕ್ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು