ಬುಧವಾರ, 31 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂದಿಗೂ ತಲೆ ಬಾಗಲ್ಲ, ಬೇಕಿದ್ದರೆ ನನ್ನನ್ನೂ ಬಂಧಿಸಿ: ಪ್ರಿಯಾಂಕಾ ಗಾಂಧಿ ಸವಾಲು

Last Updated 26 ಮಾರ್ಚ್ 2023, 12:32 IST
ಅಕ್ಷರ ಗಾತ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಒಬ್ಬ ವ್ಯಕ್ತಿಯನ್ನು ರಕ್ಷಿಸುವ ಸಲುವಾಗಿ ಅಧಿಕಾರದ ಹಿಂದೆ ಬಚ್ಚಿಕೊಟ್ಟಿಕೊಂಡಿದ್ದಾರೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ವಾಗ್ದಾಳಿ ನಡೆಸಿದ್ದಾರೆ. 'ಬೇಕಿದ್ದರೆ ನನ್ನನ್ನೂ ಬಂಧಿಸಿ. ಆದರೆ, ಎಂದಿಗೂ ತಲೆ ಬಾಗುವುದಿಲ್ಲ' ಎಂದು ಕೇಂದ್ರ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.

ಕ್ರಿಮಿನಲ್‌ ಮಾನಹಾನಿ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ರಾಹುಲ್‌ ಗಾಂಧಿಯವರನ್ನು ಲೋಕಸಭೆ ಸದಸ್ಯತ್ವದಿಂದ ಅನರ್ಹಗೊಳಿಸಿರುವುದನ್ನು ಖಂಡಿಸಿ ಕಾಂಗ್ರೆಸ್‌ ಪಕ್ಷವು ರಾಜ್‌ಘಾಟ್‌ನಲ್ಲಿ 'ಸಂಕಲ್ಪ ಸತ್ಯಾಗ್ರಹ' ನಡೆಸುತ್ತಿದೆ.

ಈ ವೇಳೆ ಮಾತನಾಡಿದ ಪ್ರಿಯಾಂಕಾ, 'ಸಾರ್ವಜನಿಕ ವಲಯದ ಉದ್ಯಮಗಳನ್ನು (ಪಿಎಸ್‌ಯು) ಮಾರಾಟ ಮಾಡುತ್ತಿರುವ ತಮ್ಮ ವಿರುದ್ಧ ಮಾತನಾಡುವವರ ಬಾಯಿ ಮುಚ್ಚಿಸಲು ಯತ್ನಿಸುವ ಭ್ರಷ್ಟ ಹಾಗೂ ಪ್ರಜಾಪ್ರಭುತ್ವ ವಿರೋಧಿ ಸರ್ಕಾರದ ವಿರುದ್ಧ ಎಚ್ಚೆತ್ತುಕೊಳ್ಳಬೇಕಾದ ಮತ್ತು ಕೈಜೋಡಿಸಬೇಕಾದ ಸಮಯ ಇದಾಗಿದೆ. ಪಿಎಸ್‌ಯುಗಳು ರಾಹುಲ್‌ ಗಾಂಧಿ ಅವರ ಸ್ವತ್ತಲ್ಲ. ದೇಶದ ಸಂಪತ್ತು' ಎಂದು ಹೇಳಿದ್ದಾರೆ.

'ದೇಶದ ಎಲ್ಲ ಸಂಪನ್ಮೂಲಗಳನ್ನು ಒಬ್ಬ ವ್ಯಕ್ತಿಗೆ ಮಾರಾಟ ಮಾಡಲಾಗುತ್ತಿದೆ. ಜನರು ನಿರುದ್ಯೋಗಿಗಳಾಗುತ್ತಿದ್ದಾರೆ. ಹಣದುಬ್ಬರ ಏರಿಕೆಯಾಗುತ್ತಿದೆ. ಆದರೆ, ಸರ್ಕಾರ ಪ್ರತಿಯೊಬ್ಬರ ಧ್ವನಿಯನ್ನೂ ಅಡಗಿಸಲು ಪ್ರಯತ್ನಿಸುತ್ತಿದೆ' ಎಂದು ಕಿಡಿಕಾರಿದ್ದಾರೆ.

ತಮ್ಮ ಸಹೋದರ ರಾಹುಲ್‌ ಗಾಂಧಿಯನ್ನು ಸಮರ್ಥಿಸಿಕೊಂಡಿರುವ ಪ್ರಿಯಾಂಕಾ, 'ಭಾರತ್‌ ಜೋಡೊ ಯಾತ್ರೆಯ ವೇಳೆ ಸಾಮರಸ್ಯ, ಏಕತೆಗೆ ಕರೆ ನೀಡಿದ ವ್ಯಕ್ತಿಯು ದೇಶದ ಹಿತಾಸಕ್ತಿಗೆ ವಿರುದ್ಧವಾದ ಮಾತುಗಳನ್ನು ಆಡುವುದಿಲ್ಲ' ಎಂದಿದ್ದಾರೆ.

ಬಿಜೆಪಿ ನಾಯಕರು ರಾಹುಲ್‌ ಅವರ ವಿರುದ್ಧ ನೀಡಿದ್ದ ಹೇಳಿಕೆಗಳನ್ನು ಉಲ್ಲೇಖಿಸಿದ ಕಾಂಗ್ರೆಸ್‌ ನಾಯಕಿ, 'ಮೊದಲು ಅವರು ಪಪ್ಪು ಎಂದರು. ಆದರೆ, ಪಪ್ಪು ಜಗತ್ತಿನ ಶ್ರೇಷ್ಠ ವಿಶ್ವವಿದ್ಯಾಲಯಗಳಾದ ಕೇಂಬ್ರಿಡ್ಜ್‌ ಮತ್ತು ಹಾರ್ವರ್ಡ್‌ ವಿವಿಗಳಲ್ಲಿ ಕಲಿತಿದ್ದಾನೆ ಎಂಬುದು ಅವರಿಗೆ ಗೊತ್ತಿರಲಿಲ್ಲ. ಒಂದು ದಿನ ಪಪ್ಪು ಹಿಮ ಮತ್ತು ಮಳೆ ಸುರಿಯುತ್ತಿದ್ದರೂ ಲಕ್ಷಾಂತರ ಜನರೊಂದಿಗೆ ನಡೆಯಲಾರಂಭಿಸಿದ. ಹೀಗಾಗಿ ಅವರು (ಬಿಜೆಪಿಯವರು) ಪಪ್ಪು ಪ್ರಶ್ನೆಗಳನ್ನು ಕೇಳದಂತೆ ಮಾಡಲು ಆತನನ್ನು ಸಂಸತ್ತಿನಿಂದಲೇ ಹೊರಗಿಡಲು ನಿರ್ಧರಿಸಿದರು' ಎಂದು ಟೀಕಿಸಿದ್ದಾರೆ.

'ಏಳುಬೀಳು ಇಂದಿನಿಂದ ಆರಂಭವಾಗಿದೆ... ಜನರು ನಿರಂಕುಶ ಪ್ರಭುತ್ವವನ್ನು ಕಿತ್ತೊಗೆದಿರುವಂತೆಯೇ ಸದ್ಯದ ಸರ್ಕಾರವನ್ನು ಕೊನೆಗೊಳಿಸಲು ಇಡೀ ರಾಷ್ಟ್ರ ಒಂದಾಗಲಿದೆ' ಎಂದು ಹೇಳಿದ್ದಾರೆ.

'ಸಂಸತ್ತಿನಲ್ಲಿ ನನ್ನ ತಂದೆಯವರನ್ನು ಅವಮಾನಿಸಲಾಗಿದೆ. ನನ್ನ ಸಹೋದರನಿಗೆ ಮೀರ್‌ ಜಾಫರ್‌ ಎಂಬಿತ್ಯಾದಿ ಹೆಸರುಗಳನ್ನು ನೀಡಲಾಗಿದೆ. ಬಿಜೆಪಿ ಸಚಿವರು ನನ್ನ ತಾಯಿಯನ್ನೂ ಅವಮಾನಿಸಿದ್ದಾರೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

2019ರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕದ ಕೋಲಾರದಲ್ಲಿ ಹಮ್ಮಿಕೊಂಡಿದ್ದ ರ‍್ಯಾಲಿಯಲ್ಲಿ ಭಾಗವಹಿಸಿದ್ದ ರಾಹುಲ್‌ ಗಾಂಧಿ, 'ಕಳ್ಳರೆಲ್ಲರಿಗೂ ಸಾಮಾನ್ಯವಾಗಿ ಮೋದಿ ಎಂಬ ಉಪನಾಮವೇ ಏಕಿರುತ್ತದೆ' ಎಂದು ಪ್ರಶ್ನಿಸಿದ್ದರು. ಈ ಹೇಳಿಕೆ ಮೂಲಕ ರಾಹುಲ್‌ ಅವರು 'ಮೋದಿ' ಉಪನಾಮ ಹೊಂದಿರುವವರನ್ನೆಲ್ಲಾ ಹೀಯಾಳಿಸಿದ್ದಾರೆ ಎಂದು ಆರೋಪಿಸಿ ಗುಜರಾತ್‌ನ ಬಿಜೆಪಿ ಶಾಸಕ ಪೂರ್ಣೇಶ್‌ ಮೋದಿ ಅವರು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಸೂರತ್‌ ನ್ಯಾಯಾಲಯವು ಕಾಂಗ್ರೆಸ್‌ ಸಂಸದ ರಾಹುಲ್‌ ಅವರು ತಪ್ಪಿತಸ್ಥರು ಎಂದು ತೀರ್ಪು ನೀಡಿದೆ. ಹೀಗಾಗಿ ಅವರನ್ನು ಅನರ್ಹಗೊಳಿಸಿ ಲೋಕಸಭೆ ಸಚಿವಾಲಯ ಶುಕ್ರವಾರ (ಮಾರ್ಚ್‌ 24 ರಂದು) ಅಧಿಸೂಚನೆ ಹೊರಡಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT