ಶುಕ್ರವಾರ, ಜನವರಿ 27, 2023
17 °C
‘ಯೋಜನೆ ಯಶಸ್ವಿಯಾದರೆ ದೇಶದಾದ್ಯಂತ ವಿಸ್ತರಣೆ’

ತೆಲಂಗಾಣದ 16 ಹಸಿರು ವಲಯಗಳಲ್ಲಿ ಡ್ರೋನ್‌ ಮೂಲಕ ಔಷಧಿ, ಲಸಿಕೆ ವಿತರಣೆ

ಪಿಟಿಐ Updated:

ಅಕ್ಷರ ಗಾತ್ರ : | |

prajavani

ವಿಕರಾಬಾದ್ (ತೆಲಂಗಾಣ): ಡ್ರೋನ್ ಮೂಲಕ ಔಷಧಗಳು ಮತ್ತು ಲಸಿಕೆಗಳನ್ನು ವಿತರಣೆ ಮಾಡುವ ‘ಆಕಾಶದಿಂದ ಔಷಧಗಳು’ ಯೋಜನೆಯನ್ನು 16 ಹಸಿರು ವಲಯಗಳಲ್ಲಿ ಪ್ರಾಯೋಗಿಕವಾಗಿ ಕೈಗೆತ್ತಿಕೊಳ್ಳಲಾಗಿದ್ದು, ಇದರ ದತ್ತಾಂಶ ಆಧರಿಸಿ ಈ ಯೋಜನೆಯನ್ನು ರಾಷ್ಟ್ರಮಟ್ಟಕ್ಕೆ ವಿಸ್ತರಿಸಲಾಗುತ್ತಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಶನಿವಾರ ಹೇಳಿದರು.

‘ಆಕಾಶದಿಂದ ಔಷಧಗಳು’ ಯೋಜನೆಗೆ ಇಲ್ಲಿ ಚಾಲನೆ ನೀಡಿದ ಅವರು, ಈ ಯೋಜನೆ ಇಡೀ ದೇಶಕ್ಕೆ ಮಾದರಿಯಾಗಲಿದೆ. ಇಂದು ತೆಲಂಗಾಣ ಮಾತ್ರವಲ್ಲ ಇಡೀ ದೇಶಕ್ಕೆ ಕ್ರಾಂತಿಕಾರಿ ದಿನ ಎಂದು ಹೇಳಿದರು. 

ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಹೊಸ ಡ್ರೋನ್ ನೀತಿಯನ್ನು ಇತ್ತೀಚೆಗೆ ಜಾರಿಗೆ ತಂದಿದೆ. ಪ್ರಧಾನಿ ಮೋದಿಯವರ ದೂರದೃಷ್ಟಿಯ ನಾಯಕತ್ವದಲ್ಲಿ ಡ್ರೋನ್ ನೀತಿಯನ್ನು ರೂಪಿಸಲಾಗಿದೆ. ಡ್ರೋನ್ ಕಾರ್ಯಾಚರಣೆಗೆ ಸಂಬಂಧಿಸಿದ ನಿಬಂಧನೆಗಳನ್ನು 25ರಿಂದ 5ಕ್ಕೆ, ಶುಲ್ಕದ ವಿಧಗಳನ್ನು 72ರಿಂದ 4ಕ್ಕೆ ಇಳಿಸಿ, ಡ್ರೋನ್‌ ಕಾರ್ಯಾಚರಣೆ ಸುಗಮಗೊಳಿಸಲಾಗಿದೆ ಎಂದು ಸಿಂಧಿಯಾ ಹೇಳಿದರು.

ಹಸಿರು ವಲಯದಡಿ ಡ್ರೋನ್‌ಗಳ ಹಾರಾಟಕ್ಕೆ ಯಾವುದೇ ಅನುಮತಿಯ ಅಗತ್ಯವಿಲ್ಲ. ಕೆಂಪು ವಲಯಗಳು ಹಾರಾಟದ ಪ್ರದೇಶಗಳಲ್ಲದಿದ್ದರೂ ಹಳದಿ ವಲಯದಲ್ಲಿ ಅನುಮತಿ ಪಡೆಯುವ ಅಗತ್ಯವಿದೆ. ‘16 ಹಸಿರು ವಲಯಗಳಲ್ಲಿ ‘ಆಕಾಶದಿಂದ ಔಷಧಗಳು’ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಇದರ ದತ್ತಾಂಶವನ್ನು ಮೂರು ತಿಂಗಳವರೆಗೆ ವಿಶ್ಲೇಷಿಸಲಾಗುತ್ತದೆ. ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ, ಆರೋಗ್ಯ ಸಚಿವಾಲಯ, ಐ.ಟಿ ಸಚಿವಾಲಯ, ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಒಟ್ಟಾಗಿ ದತ್ತಾಂಶ ವಿಶ್ಲೇಷಿಸಲಿವೆ ಎಂದರು.

ತೆಲಂಗಾಣದ ಐ.ಟಿ ಮತ್ತು ಕೈಗಾರಿಕಾ ಸಚಿವ ಕೆ.ಟಿ. ರಾಮರಾವ್ ಹೈದರಾಬಾದ್‌ನ ಬೇಗಂಪೇಟೆ ವಿಮಾನ ನಿಲ್ದಾಣದಲ್ಲಿ ವಾಯುಯಾನ ವಿಶ್ವವಿದ್ಯಾಲಯ ಅಥವಾ ಶ್ರೇಷ್ಠತಾ ಕೇಂದ್ರ ಸ್ಥಾಪಿಸುವಂತೆ ಕೇಂದ್ರ ಸಚಿವರಿಗೆ ಮನವಿ ಮಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು