ಗುರುವಾರ , ಜೂನ್ 24, 2021
25 °C

ತಮಿಳುನಾಡಿನ ನೂತನ ಮುಖ್ಯಮಂತ್ರಿ: ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಪ್ರಮಾಣವಚನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚೆನ್ನೈ: ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಅವರು ಶುಕ್ರವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಅವರ ಜತೆಯಲ್ಲಿ 33 ಶಾಸಕರು, ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಶುಕ್ರವಾರ ಬೆಳಿಗ್ಗೆ ರಾಜಭವನದಲ್ಲಿ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ನಡೆಯಲಿದೆ.

ಸ್ಟಾಲಿನ್ ಅವರು ತಮ್ಮ ಸಂಪುಟಕ್ಕೆ, ಅನುಭವಿಗಳು ಮತ್ತು ಹೊಸಬರನ್ನೂ ಆಯ್ಕೆ ಮಾಡಿಕೊಂಡಿದ್ದಾರೆ. ಅನುಭವಿಗಳಲ್ಲಿ ಡಿಎಂಕೆ ಪ್ರಧಾನ ಕಾರ್ಯದರ್ಶಿ ದೊರೆ ಮುರುಗನ್ ಅವರಿಗೆ ಜಲಸಂಪನ್ಮೂಲ, ಕೆ.ಎನ್.ನೆಹರೂ ಅವರಿಗೆ ನಗರಾಡಳಿತ, ಐ. ಪೆರಿಯಾಸ್ವಾಮಿ ಅವರಿಗೆ ಸಹಕಾರ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ. ಹೊಸಬರಿಗೂ ಪ್ರಮುಖ ಖಾತೆಗಳನ್ನು ನೀಡಲಾಗಿದೆ. ಮಾಜಿ ಬ್ಯಾಂಕರ್ ಪಿಟಿಆರ್‌ಪಿ ತ್ಯಾಗರಾಜನ್ ಅವರಿಗೆ ಹಣಕಾಸು, ಚೆನ್ನೈನ ಮಾಜಿ ಮೇಯರ್ ಮಾ ಸುಬ್ರಮಣಿಯನ್ ಅವರಿಗೆ ಆರೋಗ್ಯ, ಸ್ಟಾಲಿನ್‌ ಅವರ ಮಗ ಉದಯನಿಧಿ ಸ್ಟಾಲಿನ್ ಅವರ ಆಪ್ತ ಅನ್ಬಿಲ್ ಮಹೇಶ್ ಅವರಿಗೆ ಶಾಲಾ ಶಿಕ್ಷಣ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ.

ಇದೇ ಮೊದಲ ಬಾರಿಗೆ ಹವಾಮಾನ ವೈಪರೀತ್ಯ, ರೈತರ ಕಲ್ಯಾಣ, ಮಾನವ ಸಂಪನ್ಮೂಲ ನಿರ್ವಹಣೆ ಮತ್ತು ಅನಿವಾಸಿ ತಮಿಳರ ಕಲ್ಯಾಣ ಖಾತೆಗಳನ್ನು ರಚಿಸಿ, ಹಂಚಿಕೆ ಮಾಡಲಾಗಿದೆ. ಸ್ಟಾಲಿನ್ ಅವರ ಸಂಪುಟದಲ್ಲಿ ಇಬ್ಬರು ಮಹಿಳಾ ಸಚಿವರು ಇರಲಿದ್ದಾರೆ.

ರಾಜ್ಯದ ಎಲ್ಲಾ ಜಿಲ್ಲೆಗಳ ಶಾಸಕರಿಗೂ ಸಚಿವ ಸ್ಥಾನ ದೊರೆತಿಲ್ಲ. ಡಿಎಂಕೆ ಪ್ರಾಬಲ್ಯವಿರುವ ಹಲವು ಜಿಲ್ಲೆಗಳ ಶಾಸಕರಿಗೆ ಸಚಿವ ಸ್ಥಾನ ನೀಡಲಾಗಿಲ್ಲ. ಬದಲಿಗೆ ವಿರೋಧಪಕ್ಷ ಎಐಎಡಿಎಂಕೆ ಪ್ರಾಬಲ್ಯವಿರುವ ಪಶ್ಚಿಮದ ಜಿಲ್ಲೆಗಳಿಂದ ಆಯ್ಕೆಯಾದವರಿಗೆ ಸಚಿವ ಸ್ಥಾನ ನೀಡಲಾಗಿದೆ. ಎಐಎಡಿಎಂಕೆ ಪ್ರಾಬಲ್ಯದ ಪ್ರದೇಶದಲ್ಲಿ ಪಕ್ಷದ ನೆಲೆಗಟ್ಟಿಗೊಳಿಸಲು ಈ ತಂತ್ರ ಅನುಸರಿಸಲಾಗಿದೆ ಎಂದು ಪಕ್ಷದ ಮೂಲಗಳು ಹೇಳಿವೆ.

ಪ್ರಮಾಣವಚನ ಸ್ವೀಕಾರದ ನಂತರ ಅವರು, ಶಕ್ತಿ ಕೇಂದ್ರ ಫೋರ್ಟ್‌ ಸೇಂಟ್ ಜಾರ್ಜ್‌ಗೆ ತೆರಳಲಿದ್ದಾರೆ. ಶುಕ್ರವಾರ ಸಂಜೆ ಸ್ಟಾಲಿನ್ ಅವರು ಜಿಲ್ಲಾಧಿಕಾರಿಗಳ ಜತೆ ವಿಡಿಯೊ ಸಂವಾದ ನಡೆಸಲಿದ್ದಾರೆ. ಸಂಜೆ ಕೋವಿಡ್‌ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಹಲವು ಘೋಷಣೆಗಳನ್ನು ಸ್ಟಾಲಿನ್ ಮಾಡಲಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು