ಶನಿವಾರ, ಡಿಸೆಂಬರ್ 5, 2020
25 °C

ಪ್ರತೀಕಾರಕ್ಕಾಗಿ ಪ್ರಿಯಾ ರಮಣಿ ಮಾನಹಾನಿಕರ ಹೇಳಿಕೆ: ಅಕ್ಬರ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ಪತ್ರಕರ್ತೆ ಪ್ರಿಯಾ ರಮಣಿ ಸಾರ್ವಜನಿಕ ಹಿತಾಸಕ್ತಿ ಬದಲು ನನ್ನ ವಿರುದ್ಧದ ಪ್ರತೀಕಾರಕ್ಕಾಗಿ ಮಾನಹಾನಿಕರ ಹೇಳಿಕೆಗಳನ್ನು ನೀಡಿದ್ದಾರೆ’ ಎಂದು ಕೇಂದ್ರದ ಮಾಜಿ ಸಚಿವ, ಹಿರಿಯ ಪತ್ರಕರ್ತ ಎಂ.ಜೆ. ಅಕ್ಬರ್ ಮಂಗಳವಾರ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ತಮ್ಮ ವಿರುದ್ಧ ಪ್ರಿಯಾ ರಮಣಿ ಸಲ್ಲಿಸಿರುವ ಕ್ರಿಮಿನಲ್ ಮಾನಹಾನಿ ದೂರಿನ ಅಂತಿಮ ವಾದಗಳ ಸಂದರ್ಭದಲ್ಲಿ ಅಕ್ಬರ್, ತಮ್ಮ ವಕೀಲರ ಮೂಲಕ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟಿನ್ ಮ್ಯಾಜಿಸ್ಟ್ರೇಟ್ (ಎಸಿಎಂಎಂ) ವಿಶಾಲ್ ಪಹುಜಾ ಅವರ ಮುಂದೆ ಈ ಹೇಳಿಕೆ ನೀಡಿದ್ದಾರೆ.

ಅಕ್ಬರ್ ಪರ ವಾದಿಸಿದ ಹಿರಿಯ ವಕೀಲರಾದ ಗೀತಾ ಲುಥ್ರಾ, ‘ರಮಣಿ ಅವರು ಸಾರ್ವಜನಿಕ ಹಿತಕ್ಕಾಗಿ ಅಕ್ಬರ್ ವಿರುದ್ಧ ಆರೋಪ ಮಾಡಿಲ್ಲ, ಬದಲಾಗಿ ಪ್ರತೀಕಾರದ ಕಾರಣಕ್ಕಾಗಿ ಮಾಡಿದ್ದಾರೆ. ಅಲ್ಲದೇ, ಅವರು ತಮ್ಮ ತಪ್ಪು ಹೇಳಿಕೆಗಳ ಕುರಿತು ಕ್ಷಮೆಯನ್ನೂ ಕೇಳಿಲ್ಲ’ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

‘ಆರೋಪಕ್ಕೆ ಸಂಬಂಧಿಸಿದಂತೆ ರಮಣಿ ಅವರು ದಾಖಲೆಗಳು, ಪಾರ್ಕಿಂಗ್ ರಸೀದಿಗಳು, ಸಿಸಿ ಟಿವಿ ದೃಶ್ಯಾವಳಿಗಳನ್ನೂ ನೀಡಿಲ್ಲ. ತಮ್ಮ ದೂರು ಸಾಬೀತುಪಡಿಸಲು ಯಾವುದೇ ಸಾಕ್ಷ್ಯಗಳನ್ನೂ ನೀಡಿಲ್ಲ. ಮೀಟೂ ಆಂದೋಲನದ ವೇಳೆ ಅಕ್ಬರ್ ಅವರ ಪ್ರತಿಷ್ಠೆಗೆ ಧಕ್ಕೆ ತರುವ ಉದ್ದೇಶದಿಂದ ಅವರು ‘ವೋಗ್’ ಪತ್ರಿಕೆಯಲ್ಲಿ ಕಾಲ್ಪನಿಕ ಸನ್ನಿವೇಶವನ್ನು ಸೃಷ್ಟಿಸಿ ಬರೆದಿದ್ದಾರೆ’ ಎಂದೂ ವಕೀಲರು ಪ್ರತಿಪಾದಿಸಿದರು.

2018ರಲ್ಲಿ ನಡೆದ #ಮೀಟೂ ಆಂದೋಲನದ ವೇಳೆ ಪ್ರಿಯಾ ಅವರು, 20 ವರ್ಷಗಳ ಹಿಂದೆ ಪತ್ರಕರ್ತೆಯಾಗಿದ್ದಾಗ ಅಕ್ಬರ್ ಅವರು ತಮ್ಮನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದರು ಎಂದು ಆರೋಪಿಸಿದ್ದರು. ಇದು ವಿವಾದಕ್ಕೆ ತಿರುಗುತ್ತಿದ್ದಂತೆಯೇ ಅಕ್ಬರ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಪ್ರಿಯಾ ರಮಣಿ ಅವರ ನಂತರ ಅನೇಕ ಮಹಿಳೆಯರು ಅಕ್ಬರ್ ಅವರ ವಿರುದ್ಧ ಲೈಂಗಿಕ ಕಿರುಕುಳದ ಆರೋಪಗಳನ್ನು ಮಾಡಿದ್ದರು. ಆದರೆ, ಅಕ್ಬರ್ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು