ಶುಕ್ರವಾರ, ಅಕ್ಟೋಬರ್ 30, 2020
20 °C
ಉತ್ತರ ಪ್ರದೇಶದ ಝಾನ್ಸಿ ಪಟ್ಟಣದಲ್ಲಿ ದುಷ್ಕೃತ್ಯ: 12 ಜನ ಯುವಕರ ವಿರುದ್ಧ ಆರೋಪ

ಉತ್ತರ ಪ್ರದೇಶ: ಕಾಲೇಜಿನಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲಖನೌ (ಉತ್ತರಪ್ರದೇಶ): ಝಾನ್ಸಿ ಪಟ್ಟಣದಲ್ಲಿರುವ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ 17 ವರ್ಷದ ಬಾಲಕಿ ಮೇಲೆ 12 ಜನ ಯುವಕರು ಭಾನುವಾರ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಹೇಳಲಾಗಿದೆ.

ಝಾನ್ಸಿ ಪಟ್ಟಣ ಲಖನೌನಿಂದ 300 ಕಿ.ಮೀ. ದೂರದಲ್ಲಿದೆ. ಗೆಳತಿಯನ್ನು ಭೇಟಿಯಾಗಲು ಈ ಬಾಲಕಿ ತನ್ನ ಸ್ನೇಹಿತನೊಂದಿಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಹಾಥರಸ್‌ನಲ್ಲಿ ಪರಿಶಿಷ್ಟ ಯುವತಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿದ ಘಟನೆ ಜನರ ಮನದಿಂದ ಮರೆಯಾಗುವ ಮುನ್ನವೇ ಝಾನ್ಸಿಯಲ್ಲಿ ನಡೆದಿರುವ ಈ ಸಾಮೂಹಿಕ ಅತ್ಯಾಚಾರ ಉತ್ತರಪ್ರದೇಶದ ಜನರನ್ನು ಬೆಚ್ಚಿ ಬೀಳಿಸಿದೆ.

‘12 ಜನ ಯುವಕರು, ಬಾಲಕಿ ಮತ್ತು ಆಕೆಯ ಸ್ನೇಹಿತನನ್ನು ಪಾಲಿಟೆಕ್ನಿಕ್‌ ಕಾಲೇಜಿನ ಒಳಗೆ ಬಲವಂತದಿಂದ ಎಳೆದುಕೊಂಡು ಹೋಗಿದ್ದಾರೆ. ಸ್ನೇಹಿತನನ್ನು ಥಳಿಸಿದ್ದಾರೆ. ನಂತರ ಬಾಲಕಿ ಮೇಲೆ ಕೆಲ ಯುವಕರು ಅತ್ಯಾಚಾರ ಎಸಗಿದ್ದಾರೆ’ ಎಂದು ಮೂಲಗಳು ಹೇಳಿವೆ.

ಕಾಲೇಜು ಬಳಿ ಸಾಗುತ್ತಿದ್ದ ಕಾನ್‌ಸ್ಟೆಬಲ್‌ ಬಾಲಕಿಯ ಚೀರಾಟವನ್ನು ಕೇಳಿ, ಒಳಗಡೆ ಹೋಗಿದ್ದಾರೆ. ಕಾನ್‌ಸ್ಟೆಬಲ್‌ ಬರುವುದನ್ನು ನೋಡಿ ಯುವಕರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ನಂತರ ಕಾನ್‌ಸ್ಟೆಬಲ್‌ ಬಾಲಕಿಯನ್ನು ರಕ್ಷಿಸಿದರು ಎಂದೂ ಮೂಲಗಳು ಹೇಳಿವೆ.

ಯುವಕರು ಈ ಘಟನೆಯ ವಿಡಿಯೊ ಚಿತ್ರೀಕರಣ ಮಾಡಿದ್ದಾರೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಿದಲ್ಲಿ ವಿಡಿಯೊವನ್ನು ವೈರಲ್‌ ಮಾಡುವುದಾಗಿ ಬಾಲಕಿಗೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಘಟನೆಗೆ ಸಂಬಂಧಿಸಿ 12 ಜನ ಯುವಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗೆ ಜಾಲ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ‘12 ಜನರ ಪೈಕಿ ಒಬ್ಬ ಯುವಕ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದು, ಆರೋಪಿಯನ್ನು ಗುರುತಿಸಿದ್ದೇವೆ’ ಎಂದು ಹಿರಿಯ ಪೊಲೀಸ್‌ ಅಧಿಕಾರಿ ಹೇಳಿದ್ದಾರೆ.

ಖಂಡನೆ: ಹಿರಿಯ ಕಾಂಗ್ರೆಸ್ ಮುಖಂಡ, ಕೇಂದ್ರದ ಮಾಜಿ ಸಚಿವ ಪ್ರದೀಪ್‌ ಜೈನ್‌ ಆದಿತ್ಯ ಅವರು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.  ‘ರಾಜ್ಯದಲ್ಲಿ ಮಹಿಳೆಯರ ವಿರುದ್ಧ ನಡೆಯುತ್ತಿರುವ ದೌರ್ಜನ್ಯ ತಡೆಗಟ್ಟುವಲ್ಲಿ ಸರ್ಕಾರ ವಿಫಲವಾಗಿದೆ’ ಎಂದು ಟೀಕಿಸಿದ್ದಾರೆ.

‘ಮಹಿಳೆಯರಿಗೆ ರಕ್ಷಣೆ ಒದಗಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಮಹಿಳೆಯರ ವಿರುದ್ಧ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಲೇ ಇವೆ’ ಎಂದೂ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು