ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಾಕೋಟ್‌ ಮಾಹಿತಿ ಮೋದಿ ಮೂಲಕವೇ ಸೋರಿಕೆ: ರಾಹುಲ್‌ ಗಾಂಧಿ ಗಂಭೀರ ಆರೋಪ

Last Updated 25 ಜನವರಿ 2021, 11:17 IST
ಅಕ್ಷರ ಗಾತ್ರ

ಕರೂರ್‌ (ತಮಿಳುನಾಡು): ಪಾಕಿಸ್ತಾನದ ಬಾಲಾಕೋಟ್‌ ಮೇಲೆ 2019ರಲ್ಲಿ ಭಾರತ ನಡೆಸಿದ ವೈಮಾನಿಕ ದಾಳಿಯ ಮುಂಚಿತ ಮಾಹಿತಿಯು ಪ್ರಧಾನಿ ನರೇಂದ್ರ ಮೋದಿ ಅವರ ಮೂಲಕ ರಿಪಬ್ಲಿಕ್‌ ಟಿವಿ ಸಂಪಾದಕ ಅರ್ನಬ್‌ ಗೋಸ್ವಾಮಿ ಅವರಿಗೆ ದೊರಕಿದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ.

ಹೀಗಿದ್ದರೂ, ಈ ಆರೋಪಕ್ಕೆ ಪೂರಕ ಸಾಕ್ಷ್ಯಗಳನ್ನು ರಾಹುಲ್‌ ಗಾಂಧಿ ನೀಡಿಲ್ಲ. ಪ್ರಧಾನಿ ಕಚೇರಿಯೂ ಈ ಆರೋಪಕ್ಕೆ ಯಾವುದೇ ಪ್ರತಿಕ್ರಿಯೆಯನ್ನು ಇಲ್ಲಿಯವರೆಗೂ ನೀಡಿಲ್ಲ.

ತಮಿಳುನಾಡು ವಿಧಾನಸಭೆ ಚುನಾವಣೆ ಪ್ರಯುಕ್ತ ಇಲ್ಲಿ ರೋಡ್‌ಶೋ ನಡೆಸಿದ ರಾಹುಲ್‌ ಗಾಂಧಿ, ‘ಪ್ರಧಾನಿ, ರಕ್ಷಣಾ ಸಚಿವರು, ರಾಷ್ಟ್ರೀಯ ಭದ್ರತೆ ಸಲಹೆಗಾರ, ವಾಯುಪಡೆ ಮುಖ್ಯಸ್ಥ ಹಾಗೂ ಗೃಹ ಸಚಿವರಿಗಷ್ಟೇ ಇಂತಹ ಪೂರ್ವನಿಯೋಜಿತ ದಾಳಿಯ ಮಾಹಿತಿ ಇರುತ್ತದೆ. ಕೆಲ ದಿನಗಳ ಹಿಂದಷ್ಟೇ ಪತ್ರಕರ್ತರೊಬ್ಬರಿಗೆ ಬಾಲಾಕೋಟ್‌ ದಾಳಿಯ ಮಾಹಿತಿ ಇತ್ತು ಎಂದು ವರದಿ ಬಂದಿದೆ. ಪಾಕಿಸ್ತಾನದ ಮೇಲೆ ಭಾರತೀಯ ವಾಯುಪಡೆಯು ದಾಳಿ ನಡೆಸುವ ಮೂರು ದಿನಗಳ ಮುಂಚಿತವಾಗಿಯೇ, ಇಂತಹ ದಾಳಿ ನಡೆಯುತ್ತದೆ ಎಂದು ಭಾರತೀಯ ಪತ್ರಕರ್ತರೊಬ್ಬರು ಹೇಳಿದ್ದರು’ ಎಂದು ಅವರು ಹೇಳಿದರು.

‘ಬಾಲಾಕೋಟ್‌ ದಾಳಿಯ ಬಗ್ಗೆ ಬೇರೆ ಯಾರಿಗೂ ತಿಳಿದಿರಲಿಲ್ಲ. ದಾಳಿಯ ಬಳಿಕವಷ್ಟೇ ಎಲ್ಲರಿಗೂ ವಿಷಯ ತಿಳಿಯಿತು. ಆ ಪತ್ರಕರ್ತನಿಗೆ ದಾಳಿಯ ಮುಂಚಿತವಾಗಿಯೇ ಮಾಹಿತಿ ನೀಡಿದ್ದವರು ಯಾರು ಎಂದು ಪತ್ತೆಹಚ್ಚಲು ಇಲ್ಲಿಯವರೆಗೂ ಏಕೆ ತನಿಖೆ ಆರಂಭಿಸಿಲ್ಲ? ಈ ಐದು ಜನರಲ್ಲೇ ಒಬ್ಬರು ಅವರಿಗೆ ಮಾಹಿತಿ ನೀಡಿರುವುದು ಇದಕ್ಕೆ ಕಾರಣ. ಈ ಐವರಲ್ಲಿ ಒಬ್ಬರು ನಮ್ಮ ವಾಯುಪಡೆಗೆ ದ್ರೋಹವೆಸಗಿದ್ದಾರೆ. ಇದು ಸತ್ಯವಾಗಿದ್ದಲ್ಲಿ, ಇವರಲ್ಲೊಬ್ಬರು ನಮ್ಮ ವಾಯುಪಡೆಯ ಪೈಲಟ್‌ಗಳ ಜೀವವನ್ನು ಅಪಾಯಕ್ಕೆ ದೂಡಿದ್ದರು’ ಎಂದರು.

ಆರೋಪ ಸುಳ್ಳಾಗಿದ್ದಲ್ಲಿ, ತನಿಖೆ ನಡೆಸಿ ಈ ಐವರಲ್ಲಿ ಮಾಹಿತಿಯನ್ನು ಸೋರಿಕೆ ಮಾಡಿದವರು ಯಾರು ಎನ್ನುವುದನ್ನು ಪ್ರಧಾನಿ ತಿಳಿಸಲಿ ಎಂದು ರಾಹುಲ್‌ ಗಾಂಧಿ ಆಗ್ರಹಿಸಿದರು.

ಅರ್ನಬ್‌ ಗೋಸ್ವಾಮಿ ಹಾಗೂ ಬ್ರಾಡ್‌ಕಾಸ್ಟ್‌ ಆಡಿಯನ್ಸ್‌ ರಿಸರ್ಚ್‌ ಕೌನ್ಸಿಲ್‌(ಬಾರ್ಕ್‌)ನ ಮಾಜಿ ಮುಖ್ಯಸ್ಥ ಪಾರ್ಥೋ ದಾಸ್‌ಗುಪ್ತಾ ನಡುವಿನ ವಾಟ್ಸ್‌ಆ್ಯಪ್‌ ಸಂಭಾಷಣೆಯು ಇತ್ತೀಚೆಗೆ ವರದಿಯಾಗಿತ್ತು. ಇದರಲ್ಲಿ ಗೋಸ್ವಾಮಿ, ಬಾಲಾಕೋಟ್‌ ದಾಳಿಯ ಬಗ್ಗೆ ಮಾಹಿತಿ ಮೊದಲೇ ದೊರಕಿತ್ತು ಎಂದು ಉಲ್ಲೇಖಿಸಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಪುಲ್ವಾಮಾ ದಾಳಿಯ ಬಳಿಕ 2019 ಫೆ.26ರಂದು ಭಾರತೀಯ ವಾಯುಪಡೆಯು ಪಾಕಿಸ್ತಾನದ ಬಾಲಾಕೋಟ್‌ನಲ್ಲಿರುವ ಜೈಶ್‌–ಇ–ಮೊಹಮ್ಮದ್‌(ಜೆಇಎಂ) ಉಗ್ರ ಸಂಘಟನೆಯ ತರಬೇತಿ ಕೇಂದ್ರಗಳ ಮೇಲೆ ವೈಮಾನಿಕ ದಾಳಿ ನಡೆಸಿತ್ತು.

‘ಚೀನಾ ಹೆಸರೇ ಹೇಳುವುದಿಲ್ಲ’
ಗಡಿ ಬಿಕ್ಕಟ್ಟಿನ ಕುರಿತು ಪ್ರಸ್ತಾಪಿಸಿದ ರಾಹುಲ್‌ ಗಾಂಧಿ, ‘ಭಾರತದೊಳಗೆ ಚೀನಾ ಸೇನೆಯು ಬಂದಿದೆ. ಭಾರತದ ಸಾವಿರಾರು ಕಿ.ಮೀ. ಭೂಮಿಯನ್ನು ವಶಕ್ಕೆ ಪಡೆದಿದೆ. ಆದರೆ ಈ ಕುರಿತು ಮಾತನಾಡಲು ಮೋದಿ ಅವರಿಗೆ ಧೈರ್ಯವಿಲ್ಲ. ಕಳೆದ 3–4 ತಿಂಗಳಿಂದ ಅವರ ಭಾಷಣಗಳನ್ನು ಕೇಳಿ, ಎಲ್ಲಿಯೂ ಅವರು ಚೀನಾ ಪದ ಬಳಕೆ ಮಾಡುವುದೇ ಇಲ್ಲ’ ಎಂದು ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT