ಶನಿವಾರ, ಆಗಸ್ಟ್ 13, 2022
26 °C

ಹಣ ಅಕ್ರಮ ವರ್ಗಾವಣೆ ಪ್ರಕರಣ: ಶಿವಸೇನಾ ನಾಯಕ ರಾವುತ್ ಇ.ಡಿ ಎದುರು ಇಂದು ಹಾಜರು

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು (ಶುಕ್ರವಾರ) ಮಧ್ಯಾಹ್ನ ಜಾರಿ ನಿರ್ದೇನಾಲಯದ (ಇ.ಡಿ) ವಿಚಾರಣೆಗೆ ಹಾಜರಾಗುವುದಾಗಿ ಶಿವಸೇನಾ ನಾಯಕ ಸಂಜಯ್ ರಾವುತ್ ಅವರು ತಿಳಿಸಿದ್ದಾರೆ. ಈ ಮಾಹಿತಿಯನ್ನು ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

'ಇಂದು ಮಧ್ಯಾಹ್ನ 12ಕ್ಕೆ ನಾನು ಇ.ಡಿ ವಿಚಾರಣೆಗೆ ಹಾಜರಾಗಲಿದ್ದೇನೆ. ನನಗೆ ನೀಡಿರುವ ಸಮನ್ಸ್‌ ಅನ್ನು ಗೌರವಿಸುತ್ತೇನೆ ಮತ್ತು ಅದರಂತೆ ತನಿಖಾ ಸಂಸ್ಥೆಗಳಿಗೆ ಸಹಕರಿಸುವುದು ನನ್ನ ಕರ್ತವ್ಯವಾಗಿದೆ. ಇ.ಡಿ ಕಚೇರಿ ಎದುರು ಗುಂಪು ಸೇರದಂತೆ ಶಿವಸೇನಾ ಕಾರ್ಯಕರ್ತರಲ್ಲಿ ಮನವಿ ಮಾಡುತ್ತೇನೆ' ಎಂದು ಟ್ವೀಟ್‌ ಮಾಡಿದ್ದಾರೆ.

ಅದೇ ಟ್ವೀಟ್‌ನಲ್ಲಿ, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ, ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನೂ ಟ್ಯಾಗ್‌ ಮಾಡಿದ್ದು, 'ಚಿಂತಿಸಬೇಡಿ!' ಎಂದೂ ಉಲ್ಲೇಖಿಸಿದ್ದಾರೆ. 

ತನಿಖಾ ಸಂಸ್ಥೆಯು ಜೂನ್‌ 28ರಂದು ರಾವುತ್‌ಗೆ ಸಮನ್ಸ್‌ ನೀಡಿತ್ತು. ಆದರೆ, ಅವರ ಪರ ವಕೀಲರು ತನಿಖೆ ಹಾಜರಾಗಲು ಕಾಲಾವಕಾಶ ನೀಡುವಂತೆ ಮನವಿ ಮಾಡಿದ್ದರು. ಆದರೆ, ಶುಕ್ರವಾರದೊಳಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಹೊಸ ಸಮನ್ಸ್‌ ನೀಡಲಾಗಿದೆ.

ರಾವುತ್, ಅವರ ಪತ್ನಿ ಹಾಗೂ ಸ್ನೇಹಿತ ಶಾಮೀಲಾಗಿದ್ದಾರೆ ಎನ್ನಲಾದ ‘ಪತ್ರಾ ಚಾಲ್‌’ ಭೂ ಹಗರಣಕ್ಕೆ ಸಂಬಂಧಿಸಿದ ಹಣಕಾಸು ಅಕ್ರಮ ವರ್ಗಾವಣೆ ಪ್ರಕರಣ ಹಾಗೂ ಇತರ ಕೆಲವು ಪ್ರಕರಣಗಳಲ್ಲಿ ಅವರಿಗೆ ಸಮನ್ಸ್ ನೀಡಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು