ಬುಧವಾರ, ಮೇ 25, 2022
22 °C
ಕಾಂಗ್ರೆಸ್‌ ವಾಗ್ದಾಳಿ l ಮಸೂದೆ ಸಮರ್ಥಿಸಿದ ಸರ್ಕಾರ

ಸಂಸತ್‌ | ಮುಂಗಾರು ಅಧಿವೇಶನ: ರೈತರ ಹಕ್ಕಿಗೆ ಮಸೂದೆ ಕೊಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಸುಗ್ರೀವಾಜ್ಞೆಗಳ ಬದಲಾಗಿ ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ರೈತರಿಗೆ ಸಂಬಂಧಿಸಿದ ಮೂರು ಮಸೂದೆಗಳ ವಿಚಾರದಲ್ಲಿ ಸರ್ಕಾರ ಹಾಗೂ ಕಾಂಗ್ರೆಸ್ ನಡುವೆ ಲೋಕಸಭೆಯಲ್ಲಿ ಸೋಮವಾರ ಜಟಾಪಟಿ ನಡೆಯಿತು. ರೈತರನ್ನು ಕ್ರೂರವಾಗಿ ಶೋಷಿಸಲು ಕಾರ್ಪೊರೇಟ್ ಸಂಸ್ಥೆಗಳಿಗೆ ಈ ಮಸೂದೆಗಳು ಮುಕ್ತ ಅವಕಾಶ ನೀಡುತ್ತವೆ ಎಂದು ಕಲಾಪದ ಮೊದಲ ದಿನ ಕಾಂಗ್ರೆಸ್ ಆರೋಪಿಸಿತು. 

ಸರ್ಕಾರ ಸೋಮವಾರ ಮಂಡಿಸಿದ ಮೂರು ಮಸೂದೆಗಳು ರೈತರು ಹಾಗೂ ಕೃಷಿ ಕಾರ್ಮಿಕರ ಮೇಲೆ ಭೀಕರವಾಗಿ ದಾಳಿ ಎಸಗಲಿವೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆರೋಪಿಸಿದರು. ‘ಕೇಂದ್ರ ಸರ್ಕಾರದ ಮೂರು ಕರಾಳ ಸುಗ್ರೀವಾಜ್ಞೆಗಳಿಂದಾಗಿ ರೈತರಿಗೆ ಕನಿಷ್ಠ ಬೆಂಬಲ ಬೆಲೆ ಸಿಗುವುದಿಲ್ಲ. ಸುಗ್ರೀವಾಜ್ಞೆಯು ಪ್ರಧಾನಿಯ ಮತ್ತೊಂದು ರೈತವಿರೋಧಿ ಪಿತೂರಿ. ರೈತರ ಹಕ್ಕುಗಳ ಮೇಲೆ ದಾಳಿ’ ಎಂದು ಆರೋಪಿಸಿದರು.

ಆದರೆ ಮಸೂದೆಗಳನ್ನು ಸಮರ್ಥಿಸಿ ಕೊಂಡ ಸಚಿವ ನರೇಂದ್ರ ಸಿಂಗ್ ತೋಮರ್, ರೈತರು ತಮ್ಮ ಉತ್ಪನ್ನಗಳಿಗೆ ಸೂಕ್ತ ಬೆಲೆ ಪಡೆಯಲಿದ್ದಾರೆ. ಜತೆಗೆ ಖಾಸಗಿ ಬಂಡವಾಳ, ತಂತ್ರಜ್ಞಾನವೂ ಹರಿದುಬರಲಿದೆ ಎಂದರು. 

ರೈತ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ಮತ್ತು ನೆರವು) ಮಸೂದೆ, ಬೆಲೆ ಖಾತರಿ ಮತ್ತು ಬೇಸಾಯ ಸೇವೆಗಳ ಒಪ್ಪಂದ (ಸಬಲೀಕರಣ ಮತ್ತು ಸಂರಕ್ಷಣೆ) ಮಸೂದೆ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಮಸೂದೆಯನ್ನು ಮಂಡಿಸಲಾಯಿತು. ಈ ಹಿಂದೆ ಸರ್ಕಾರ ಹೊರಡಿಸಿದ್ದ ಸುಗ್ರೀವಾಜ್ಞೆಗಳ ಜಾಗವನ್ನು ಇವು ತುಂಬಲಿವೆ. 

2014ರಲ್ಲಿ ಕೇಂದ್ರ ಸರ್ಕಾರದ ಭೂ ಮಸೂದೆ ವಿರುದ್ಧ ಕಾಂಗ್ರೆಸ್ ಚಳವಳಿ ನಡೆಸಿತ್ತು. ಈ ಬಾರಿ ಮೂರು ಸುಗ್ರೀವಾಜ್ಞೆಗಳನ್ನು ಇಟ್ಟುಕೊಂಡು ಹೋರಾಟ ರೂಪಿಸಲು ಕಾಂಗ್ರೆಸ್ ಮುಂದಾಗಿದೆ. ಸರ್ಕಾರವನ್ನು ರೈತ ವಿರೋಧಿ ಹಾಗೂ ಕಾರ್ಪೊರೇಟ್ ಪರ ಎಂದು ಬಿಂಬಿಸಲು ಸಜ್ಜಾದಂತೆ ಕಂಡುಬಂದಿತು.

ರೈತರು ಹಾಗೂ ಕೃಷಿ ಕ್ಷೇತ್ರವನ್ನು ನಾಶಮಾಡಲು ಸರ್ಕಾರ ಈ ಮಸೂದೆಗಳನ್ನು ಪರಿಚಯಿಸಿದೆ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್‌ನ ಉಪನಾಯಕ ಗೌರವ್ ಗೊಗೊಯಿ ಆರೋಪಿಸಿದರು. 

‘ಮಂಡಿಸಲಾದ ಮಸೂದೆಗಳು ರೈತರಿಗೆ ಸಹಾಯ ಮಾಡುವುದಿಲ್ಲ. ಆದರೆ ಉದ್ಯಮ ವಲಯ ಮತ್ತು ದೊಡ್ಡ ಬಂಡವಾಳಶಾಹಿಗಳಿಗೆ ಸಹಾಯ ಮಾಡುತ್ತವೆ. ಬಹುಶಃ ಈ ದಿನಗಳು ರೈತರ ಪಾಲಿಗೆ ಕಪ್ಪು ಅಕ್ಷರದಲ್ಲಿ ಬರೆಯಬೇಕಾದ ದಿನಗಳು. ರೈತರು ಸಂಕಷ್ಟದಲ್ಲಿದ್ದಾರೆ. ಉತ್ಪನ್ನಗಳಿಗೆ ಸೂಕ್ತ ಬೆಲೆ ಪಡೆಯಲು ಸಾಧ್ಯವಾಗುತ್ತಿಲ್ಲ. ಹೊಲದಲ್ಲಿ ಕೆಲಸ ಮಾಡುತ್ತಿರುವವರಿಗೆ ದಿನಗೂಲಿ ನೀಡಲು ಅವರಿಂದ ಆಗು
ತ್ತಿಲ್ಲ’ ಎಂದು ಗೊಗೊಯಿ ಹೇಳಿದ್ದಾರೆ.

ಮೂರು ಸುಗ್ರೀವಾಜ್ಞೆಗಳನ್ನು ವಿರೋಧಿಸಿ ಹರಿಯಾಣ, ಪಂಜಾಬ್‌ನಲ್ಲಿ ಪ್ರತಿಭಟನೆ ನಡೆಯುತ್ತಿರುವ ವೇಳೆಯಲ್ಲಿ, ಸಂಸತ್ತಿನಲ್ಲಿ ಕಾಂಗ್ರೆಸ್ ಈ ಬಗ್ಗೆ ದನಿ ಎತ್ತಿದೆ. ಈ ಸುಗ್ರೀವಾಜ್ಞೆಗಳು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುತ್ತವೆ ಎಂದು ಕೆಲವು ರಾಜ್ಯ ಸರ್ಕಾರಗಳೂ ದನಿ ಎತ್ತಿದ್ದು, ವಾಪಸಾತಿಗೆ ಆಗ್ರಹಿಸಿವೆ. ಭಾರತೀಯ ಕಿಸಾನ್ ಸಂಘ ಕೂಡ ಸುಗ್ರೀವಾಜ್ಞೆ ಹಿಂತೆಗೆದುಕೊಳ್ಳಲು ಆಗ್ರಹಿಸಿ ಮನವಿಪತ್ರ ಸಲ್ಲಿಸಿದೆ. 

ಪ್ರಶ್ನೆ ಅವಧಿ ಕಡಿತ: ಆಕ್ರೋಶ ಪ್ರಶ್ನೆ ಅವಧಿ ಕೈಬಿಡುವ ಹಾಗೂ ಶೂನ್ಯವೇಳೆಯನ್ನು ಮೊಟಕುಗೊಳಿಸುವ ಸರ್ಕಾರದ ನಿರ್ಧಾರವನ್ನು ಕಾಂಗ್ರೆಸ್ ಸೇರಿದಂತೆ ವಿರೋಧಪಕ್ಷಗಳು ಖಂಡಿಸಿವೆ. ಇದು ಸಂಸತ್ತಿನ ಘನತೆ ಮೇಲಿನ ದಾಳಿ ಎಂದು ಕಾಂಗ್ರೆಸ್ ಮುಖಂಡ ಗೊಗೊಯಿ ಆರೋಪಿಸಿದ್ದಾರೆ.  ಶಾಸಕಾಂಗದ ಹಕ್ಕುಗಳ ನಿಗ್ರಹ, ಹೊಣೆಗಾರಿಕೆ ಕಿತ್ತುಕೊಳ್ಳುವಿಕೆಯನ್ನು ಖಂಡಿಸುತ್ತೇವೆ ಎಂದು ಅವರು ಹೇಳಿದ್ದಾರೆ. 

‘ಸರ್ಕಾರ ಕೇವಲ ಲಿಖಿತ ಉತ್ತರಗಳ ಕಡೆ ಗಮನ ನೀಡುತ್ತಿದೆ. ಆದರೆ ಲಿಖಿತ ಉತ್ತರಗಳನ್ನು ಅಧಿಕಾರಿಗಳು ತಯಾರಿಸುತ್ತಾರೆ. ದೇಶದ ಜನರು ಪ್ರಧಾನಿ ಹಾಗೂ ಸಂಪುಟದ ಸಚಿವರನ್ನು ಆಯ್ಕೆ ಮಾಡಿದ್ದಾರೆಯೇ ಹೊರತು ಅಧಿಕಾರಿಗಳನ್ನು ಆಯ್ಕೆ ಮಾಡಿಲ್ಲ ಎಂದರು. ಜನರ ಪ್ರಶ್ನೆಗಳಿಗೆ ಉತ್ತರಿಸುವುದು ಅವರ ಕರ್ತವ್ಯ’ ಎಂದು ಹೇಳಿದರು.

ಪಾಳಿಯಲ್ಲಿ ಎರಡೂ ಸದನಗಳ ಕಲಾಪ

ಆರು ತಿಂಗಳ ಬಳಿಕ ಸಮಾವೇಶಗೊಂಡ ಕಲಾಪದಲ್ಲಿ ಕೋವಿಡ್ ಹರಡದಂತೆ ಅಂತರ ಕಾಯ್ದುಕೊಳ್ಳಲು ಹಲವು ಕ್ರಮ ತೆಗೆದುಕೊಳ್ಳಲಾಗಿತ್ತು. ಉಭಯ ಸದನಗಳಿಗೆ ತಲಾ 4 ಗಂಟೆ ಕಲಾಪ ನಡೆಸಲು ಸಮಯ ನಿಗದಿಪಡಿಸಲಾಗಿತ್ತು. ಪಾಳಿಯಲ್ಲಿ ಎರಡೂ ಸದನಗಳು ಕಾರ್ಯ ನಿರ್ವಹಿಸಿದವು. ಬೆಳಗ್ಗೆ ರಾಜ್ಯಸಭೆ, ಮಧ್ಯಾಹ್ನದ ಬಳಿಕ ಲೋಕಸಭೆ ಸಮಾವೇಶಗೊಂಡಿದ್ದವು.

ಆಸನ ವ್ಯವಸ್ಥೆಯಲ್ಲೂ ಬದಲಾವಣೆ ಮಾಡಲಾಗಿತ್ತು. ರಾಜ್ಯಸಭೆ ಹಾಗೂ ಲೋಕಸಭೆಯ ಎರಡೂ ಚೇಂಬರ್‌ಗಳಲ್ಲಿ ಸದಸ್ಯರು ಕುಳಿತುಕೊಳ್ಳಲು ಆಸನ ಸಿದ್ಧಪಡಿಸಲಾಗಿತ್ತು. 200 ಸದಸ್ಯರು ಲೋಕಸಭೆಯ ಚೇಂಬರ್‌ನಲ್ಲಿ, ಕೆಲವರು ಸಂದರ್ಶಕರ ಗ್ಯಾಲರಿಯಲ್ಲಿದ್ದರು. ರಾಜ್ಯಸಭೆಯಲ್ಲಿ ವಿರಳ ಹಾಜರಾತಿ ಕಂಡುಬಂದಿತು.

25 ಸಂಸದರು ಮತ್ತು 50ಕ್ಕೂ ಹೆಚ್ಚು ಸಿಬ್ಬಂದಿಗೆ ಕೋವಿಡ್

ಉತ್ತರ ಕನ್ನಡ ಸಂಸದ ಅನಂತಕುಮಾರ್ ಹೆಗಡೆ ಸೇರಿ ಕನಿಷ್ಠ 25 ಸಂಸದರು ಮತ್ತು 50ಕ್ಕೂ ಹೆಚ್ಚು ಸಿಬ್ಬಂದಿಗೆ ಕೋವಿಡ್ ದೃಢಪಟ್ಟಿದೆ. ಕ್ವಾರಂಟೈನ್‌ನಲ್ಲಿ ಇರುವಂತೆ ಇವರಿಗೆ ಸೂಚಿಸಲಾಗಿದೆ. ಸಂಸತ್ ಪ್ರವೇಶಿಸಲು ಅವಕಾಶ ನೀಡಿಲ್ಲ. 

541 ಸದಸ್ಯಬಲದ ಲೋಕಸಭೆಯಲ್ಲಿ ಮೊದಲ ದಿನ 359 ಸಂಸದರು ಮಾಸ್ಕ್ ಧರಿಸಿ, ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಕಲಾ‍ಪಕ್ಕೆ ಹಾಜರಾಗಿದ್ದರು. 

ಕಲಾಪಕ್ಕೆ ಹಾಜರಾಗುವ ಸಂಸದರಿಗೆ ಕಡ್ಡಾಯ ಮಾಡಲಾಗಿದ್ದ ಆರ್‌ಟಿ–ಪಿಸಿಆರ್ ಪರೀಕ್ಷೆಯಲ್ಲಿ ಸಂಸದರಲ್ಲಿ ಕೋವಿಡ್ ಇರುವುದು ಪತ್ತೆಯಾಗಿದೆ. ಲೋಕಸಭೆಯಲ್ಲಿ ಬಿಜೆಪಿಯ ಮೀನಾಕ್ಷಿ ಲೇಖಿ, ಪರ್ವೇಶ್ ಸಾಹಿಬ್ ಸಿಂಗ್, ಸುಕಾಂತ್ ಮಜುಂದಾರ್ ಸೇರಿ 17 ಜನರಿಗೆ ಸೋಂಕು ತಗುಲಿದೆ. ರಾಜ್ಯಸಭೆಯ 8 ಮಂದಿಗೆ ಸೋಂಕು ಖಚಿತಪಟ್ಟಿದೆ. 

ಆರ್‌ಎಲ್‌ಪಿ ಸದಸ್ಯ ಹನುಮಾನ್ ಬೇನಿವಾಲ್‌ ಅವರ ಪರೀಕ್ಷಾ ವರದಿ ‘ಪಾಸಿಟಿವ್’ ಬಂದಿದೆ. ಆದರೆ ಜೈಪುರದ ಎಸ್‌ಎಂಎಸ್ ಆಸ್ಪತ್ರೆಯಲ್ಲಿ ಮಾಡಿಸಿದ ಪರೀಕ್ಷೆಯು ‘ನೆಗೆಟವ್’ ಎಂದು ತೋರಿಸಿದೆ. ಇದರಲ್ಲಿ ಯಾವುದು ಸರಿ ಎಂದು ಅವರು ಟ್ವಿಟರ್‌ನಲ್ಲಿ ಪ್ರಶ್ನಿಸಿದ್ದಾರೆ. 

***
ಮೂರು ಮಸೂದೆಗಳು ರೈತರ ಹಕ್ಕುಗಳು ಹಾಗೂ ಆದಾಯದ ಮೇಲೆ ದಾಳಿ ಮಾಡುತ್ತವೆ. ಹೀಗಾಗಿ ನಾವು ಸಂಪೂರ್ಣವಾಗಿ ವಿರೋಧಿಸುತ್ತೇವೆ.
–ಗೌರವ್ ಗೊಗೊಯಿ, ಲೋಕಸಭೆಯಲ್ಲಿ ಕಾಂಗ್ರೆಸ್ ಉಪನಾಯಕ

***
ಕೃಷಿ ಉತ್ಪನ್ನಗಳನ್ನು ಅಡೆತಡೆಯಿಲ್ಲದಂತೆ ಮಾರಾಟ ಮಾಡಲು ಹಾಗೂ ಹೂಡಿಕೆದಾರರೊಂದಿಗೆ ಸಹಭಾಗಿತ್ವಕ್ಕೆ ಮಸೂದೆಗಳು ರೈತರಿಗೆ ಅಧಿಕಾರ ನೀಡಲಿವೆ.
–ನರೇಂದ್ರ ಸಿಂಗ್ ತೋಮರ್, ಕೇಂದ್ರ ಸಚಿವ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು