ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: 60 ಸಾವಿರ ಗ್ರಾಮಗಳಿಗೆ ದೊರೆಯದ 'ಬಯಲು ಶೌಚ ಮುಕ್ತ' ಸ್ಥಾನ

Last Updated 18 ಅಕ್ಟೋಬರ್ 2020, 11:14 IST
ಅಕ್ಷರ ಗಾತ್ರ

ಭಾರತವು ‘ಬಯಲು ಶೌಚ ಮುಕ್ತ’ ದೇಶವಾಗಿದೆ ಎಂದು 2019ರ ಅಕ್ಟೋಬರ್‌ 2ರಂದೇ ಘೋಷಿಸಲಾಗಿದೆ. ಆದರೆ ದೇಶದ ವಿವಿಧ ರಾಜ್ಯಗಳ 12 ಜಿಲ್ಲೆಗಳನ್ನು ಇನ್ನೂ, ‘ಬಯಲು ಶೌಚ ಮುಕ್ತ ಜಿಲ್ಲೆ’ಗಳು ಎಂದು ಘೋಷಿಸಿಲ್ಲ. 6 ಸಾವಿರಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳಿಗೆ ಬಯಲು ಶೌಚ ಮುಕ್ತ ಸ್ಥಾನ ದೊರೆತಿಲ್ಲ. ಆದರೆ ದೇಶದ ಎಲ್ಲಾ ರಾಜ್ಯಗಳು ಶೇ 100ರಷ್ಟು ಬಯಲು ಶೌಚ ಮುಕ್ತ ರಾಜ್ಯಗಳಾಗಿವೆ ಎಂದು ‘ಸ್ವಚ್ಛ ಭಾರತ ಅಭಿಯಾನ ಗ್ರಾಮೀಣ’ ಮತ್ತು ‘ಸ್ವಚ್ಛ ಭಾರತ ಅಭಿಯಾನ ನಗರ’ ಜಾಲತಾಣಗಳಲ್ಲಿ ಘೋಷಿಸಲಾಗಿದೆ.

ದೇಶದ ಪ್ರತಿ ಕುಟುಂಬವೂ ಪ್ರತ್ಯೇಕ ಶೌಚಾಲಯ ಹೊಂದಿರಬೇಕು ಎಂಬುದೂ ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಸ್ವಚ್ಛಭಾರತ ಅಭಿಯಾನದ ಗುರಿಗಳಲ್ಲಿ ಒಂದಾಗಿತ್ತು. 2014ರ ಅಕ್ಟೋಬರ್ 2ರಂದು ಈ ಅಭಿಯಾನವನ್ನು ಘೋಷಿಸಿದಾಗ ದೇಶದ ಗ್ರಾಮೀಣ ಭಾಗದಲ್ಲಿ 9.13 ಕೋಟಿಗೂ ಹೆಚ್ಚು ಕುಟುಂಬಗಳು ಪ್ರತ್ಯೇಕ ಶೌಚಾಲಯಗಳನ್ನು ಹೊಂದಿರಲಿಲ್ಲ. ಅಭಿಯಾನ ಆರಂಭಿಸಿದ ಐದು ವರ್ಷಗಳಲ್ಲಿ ದೇಶವನ್ನು, ‘ಬಯಲು ಶೌಚ ಮುಕ್ತ’ಗೊಳಿಸುವ ಗುರಿ ಹಾಕಿಕೊಳ್ಳಲಾಯಿತು. ಅದರಂತೆ 2019ರ ಅಕ್ಟೋಬರ್ 2ರಂದು ದೇಶವನ್ನು ಬಯಲು ಶೌಚ ಮುಕ್ತ ದೇಶ ಎಂದು ಘೋಷಿಸಲಾಯಿತು.

2020ರ ಅಕ್ಟೋಬರ್ 17ರ ಹೊತ್ತಿಗೆ 10.28 ಕೋಟಿ ಶೌಚಾಲಯಗಳನ್ನು ದೇಶದ ಗ್ರಾಮೀಣ ಭಾಗಗಳಲ್ಲಿ ನಿರ್ಮಿಸಲಾಗಿದೆ. ಅಭಿಯಾನ ಆರಂಭವಾದಾಗಿನಿಂದ ಈವರೆಗೆ ಹೆಚ್ಚುವರಿಯಾಗಿ 1.15 ಕೋಟಿ ಶೌಚಾಲಯಗಳನ್ನು ಹೆಚ್ಚುವರಿಯಾಗಿ ನಿರ್ಮಿಸಲಾಗಿದೆ.ಭಾರತ ಸರ್ಕಾರದ ‘ಭಾರತವನ್ನು ತಿಳಿಯಿರಿ’ ಜಾಲತಾಣದ ಪ್ರಕಾರ ದೇಶದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು 718 ಜಿಲ್ಲೆಗಳು ಇವೆ. ಸ್ವಚ್ಛ ಭಾರತ ಅಭಿಯಾನದ ಅಡಿ ಈ ಎಲ್ಲಾ ಜಿಲ್ಲೆಗಳಲ್ಲಿ ಶೌಚಾಲಯ ನಿರ್ಮಾಣ ಕಾಮಗಾರಿ ನಡೆಸಲಾಗಿದೆ. ಆದರೆ ಇವುಗಳಲ್ಲಿ ‘ಬಯಲು ಶೌಚ ಮುಕ್ತ’ ಸ್ಥಾನ ದೊರೆತಿರುವುದು 706 ಜಿಲ್ಲೆಗಳಿಗೆ ಮಾತ್ರ ಎಂದು ಸ್ವಚ್ಛಭಾರತ ಗ್ರಾಮೀಣ ಜಾಲತಾಣದಲ್ಲಿನ ಮಾಹಿತಿ ಹೇಳುತ್ತದೆ.ಆದರೆ ಇನ್ನೂ 12 ಜಿಲ್ಲೆಗಳಿಗೆ 'ಬಯಲು ಶೌಚ ಮುಕ್ತ ಜಿಲ್ಲೆ'ಯ ಸ್ಥಾನ ದೊರೆತಿಲ್ಲ.

ದೇಶದ ಎಲ್ಲಾ ಗ್ರಾಮ ಪಂಚಾಯಿತಿಗಳಿಗೂ ಬಯಲು ಶೌಚ ಮುಕ್ತ ಸ್ಥಾನ ದೊರೆತಿಲ್ಲ. ದೇಶದಲ್ಲಿ ಒಟ್ಟು 2,69,347 ಗ್ರಾಮ ಪಂಚಾಯಿತಿಗಳು ಇವೆ. ಇದರಲ್ಲಿ 2,62,736 ಗ್ರಾಮ ಪಂಚಾಯಿತಿಗಳಿಗೆ ಮಾತ್ರ ಬಯಲು ಶೌಚ ಮುಕ್ತ ಸ್ಥಾನ ದೊರೆತಿದೆ. 6,611 ಗ್ರಾಮ ಪಂಚಾಯಿತಿಗಳಿಗೆ ಇನ್ನಷ್ಟೇ ಈ ಸ್ಥಾನ ದೊರೆಯಬೇಕಿದೆ.

ದೇಶದ ಎಲ್ಲಾ ಗ್ರಾಮಗಳಿಗೆ ಇನ್ನೂ ‘ಬಯಲು ಶೌಚ ಮುಕ್ತ ಗ್ರಾಮ’ದ ಸ್ಥಾನ ಲಭ್ಯವಾಗಿಲ್ಲ. ಭಾರತ ಸರ್ಕಾರದ ‘ಲೋಕಲ್ ಗವರ್ನಮೆಂಟ್ ಡೈರೆಕ್ಟರಿ’ ಪ್ರಕಾರ ದೇಶದಲ್ಲಿ ಒಟ್ಟು6,64,462 ಲಕ್ಷ ಗ್ರಾಮಗಳಿವೆ. ಆದರೆ ಸ್ವಚ್ಛ ಭಾರತ ಅಭಿಯಾನದ ಅಡಿ ಬಯಲು ಶೌಚ ಮುಕ್ತ ಗ್ರಾಮದ ಸ್ಥಾನ ಪಡೆದ ಗ್ರಾಮಗಳ ಸಂಖ್ಯೆ6,03,177 ಮಾತ್ರ. ದೇಶದ 61,285 ಗ್ರಾಮಗಳಿಗೆ ಇನ್ನೂ ಬಯಲು ಶೌಚ ಮುಕ್ತ ಗ್ರಾಮದ ಸ್ಥಾನ ದೊರೆತಿಲ್ಲ. ಆದರೆ ಸ್ವಚ್ಛ ಭಾರತ ಮಿಷನ್‌ ಅಡಿ ದೇಶದ ಎಲ್ಲಾ ರಾಜ್ಯಗಳು ಶೇ 100ರಷ್ಟು ಬಯಲು ಶೌಚ ಮುಕ್ತವಾಗಿವೆ ಎಂದು ಘೋಷಿಸಲಾಗಿದೆ.

ದೇಶವನ್ನು ಬಯಲು ಶೌಚ ಮುಕ್ತ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿ ಒಂದು ವರ್ಷ ಕಳೆದಿದೆ. ಹೀಗೆ ಘೋಷಿಸಿದ ನಂತರದ ಒಂದು ವರ್ಷದಲ್ಲಿ ಸ್ವಚ್ಛ ಭಾರತ ಅಭಿಯಾನದ ಅಡಿ 80 ಲಕ್ಷಕ್ಕೂ ಹೆಚ್ಚು ಶೌಚಾಲಯಗಳನ್ನು ಹೆಚ್ಚುವರಿಯಾಗಿ ನಿರ್ಮಿಸಲಾಗಿದೆ. ಅಭಿಯಾನ ಆರಂಭಿಸಿದಾಗ ನಿರ್ಮಿಸಬೇಕಿದ್ದ ಶೌಚಾಲಯಗಳಿಗಿಂತ ಹೆಚ್ಚುವರಿಯಾಗಿ 1.15 ಕೋಟಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಹೀಗಿದ್ದೂ ದೇಶದ 61,285 ಗ್ರಾಮಗಳಿಗೆ, 6,611 ಗ್ರಾಮ ಪಂಚಾಯಿತಿಗಳಿಗೆ ಮತ್ತು 12 ಜಿಲ್ಲೆಗಳಿಗೆ ಬಯಲು ಶೌಚ ಮುಕ್ತ ಸ್ಥಾನ ದೊರೆತಿಲ್ಲ.

ಆಧಾರ: ಸ್ವಚ್ಛ ಭಾರತ ಅಭಿಯಾನ ಗ್ರಾಮೀಣ ಜಾಲತಾಣ, ಲೋಕಲ್ ಗವರ್ನಮೆಂಟ್ ಡೈರೆಕ್ಟರಿ, ಭಾರತವನ್ನು ತಿಳಿಯಿರಿ ಜಾಲತಾಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT