ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಯಿ-ಮಗ ಆತ್ಮಹತ್ಯೆ: ತೆಲಂಗಾಣದ ಆಡಳಿತಾರೂಢ ಟಿಆರ್‌ಎಸ್ ಪಕ್ಷದ ಆರು ನಾಯಕರ ಬಂಧನ

Last Updated 20 ಏಪ್ರಿಲ್ 2022, 7:08 IST
ಅಕ್ಷರ ಗಾತ್ರ

ಕಾಮರೆಡ್ಡಿ: ರಿಯಲ್ ಎಸ್ಟೇಟ್ ಉದ್ಯಮಿ ಮತ್ತು ಅವರ ತಾಯಿ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಆರೋಪದ ಮೇರೆಗೆ ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಪಕ್ಷದ ಆರು ನಾಯಕರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಟಿಆರ್‌ಎಸ್ ನಾಯಕರು ಮತ್ತು ಸರ್ಕಲ್ ಇನ್‌ಸ್ಪೆಕ್ಟರ್ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಗಂಗಮ್ ಸಂತೋಷ್ ಮತ್ತು ಅವರ ತಾಯಿ ಗಂಗಮ್ ಪದ್ಮಾ ಕಾಮರೆಡ್ಡಿಯ ಲಾಡ್ಜ್‌ವೊಂದರಲ್ಲಿ ಏ.16ರಂದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

ಆತ್ಮಹತ್ಯೆಗೂ ಮುನ್ನ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ವಿಡಿಯೊದಲ್ಲಿ, ರಾಮಯಂಪೇಟೆ ಪುರಸಭೆ ಅಧ್ಯಕ್ಷ ಪಲ್ಲೆ ಜಿತೇಂದರ್ ಗೌಡ ಸೇರಿದಂತೆ ಇತರೆ ಐವರು ಟಿಆರ್‌ಎಸ್ ನಾಯಕರು ಮತ್ತು ಸರ್ಕಲ್ ಇನ್‌ಸ್ಪೆಕ್ಟರ್ ನಾಗಾರ್ಜುನ ರೆಡ್ಡಿ ಅವರ ಫೋಟೊಗಳನ್ನು ಹಾಕಿರುವ ಸಂತೋಷ್, ಇವರು ನನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದರು.

'ಇವರೆಲ್ಲರೂ ನನ್ನ ಬ್ಯುಸಿನೆಸ್‌ಗೆ ಹಾನಿಯುಂಟು ಮಾಡಿದ್ದಾರೆ ಮತ್ತು ಜೀವನ ನಡೆಸುವುದೇ ಕಷ್ಟ ಎನ್ನುವಂತೆ ಮಾಡಿದ್ದಾರೆ. ಇವರಿಂದ ಆರ್ಥಿಕವಾಗಿ ಕುಗ್ಗಿದ್ದೇನೆ. ನಾವು ಸತ್ತ ನಂತರವಾದರೂ ನಮಗೆ ನ್ಯಾಯ ದೊರಕುವ ಭರವಸೆ ಇದೆ' ಎಂದು ಡೆತ್ ನೋಟ್ ಬರೆದಿದ್ದಾರೆ.

ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ತನಿಖೆಗಾಗಿ ಸರ್ಕಲ್ ಇನ್ಸ್‌ಪೆಕ್ಟರ್ ತನ್ನ ಫೋನ್ ಅನ್ನು ತೆಗೆದುಕೊಂಡು ಹೋಗಿದ್ದರು. ನಂತರ ಪ್ರಕರಣವನ್ನು ವಜಾಗೊಳಿಸಲಾಯಿತು. ಆದರೆ, ಇನ್ಸ್‌ಪೆಕ್ಟರ್ ತನ್ನ ಫೋನ್‌ನಿಂದ ಗೌಪ್ಯ ಮಾಹಿತಿಯನ್ನು ತೆಗೆದುಕೊಂಡ ನಂತರ ಅದನ್ನು ಹಿಂತಿರುಗಿಸಿದ್ದಾರೆ. ಅವರು ಈ ಮಾಹಿತಿಯನ್ನು ಟಿಆರ್‌ಎಸ್ ಮುಖಂಡರಿಗೆ ರವಾನಿಸಿದ್ದು, ಅವರು ಅದನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಸಂತೋಷ್ ಆರೋಪಿಸಿದ್ದಾರೆ.

ಹೀಗಾಗಿ ಏಳು ಜನರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಪ್ರಕರಣ ದಾಖಲಿಸಲಾಗಿದ್ದು, ಆರೋಪದ ಕುರಿತು ತನಿಖೆ ನಡೆಸಲು ಹಿರಿಯ ಪೊಲೀಸ್ ಅಧಿಕಾರಿಗೆ ಆದೇಶಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT