ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಮಹಿಳಾ ಅಭ್ಯರ್ಥಿ ವಿರುದ್ಧ ಕಮಲನಾಥ್‌ ಆಕ್ಷೇಪಾರ್ಹ ಪದ ಬಳಕೆ: ವಿವಾದ

Last Updated 19 ಅಕ್ಟೋಬರ್ 2020, 4:58 IST
ಅಕ್ಷರ ಗಾತ್ರ

ದತಿಯಾ (ಮಧ್ಯಪ್ರದೇಶ): ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದ, ತಮ್ಮ ಮಂತ್ರಿಮಂಡಲದ ಮಾಜಿ ಸಹೋದ್ಯೋಗಿ, ಹಾಲಿ ಬಿಜೆಪಿ ಅಭ್ಯರ್ಥಿಯಾಗಿರುವ ಇಮಾರತಿ ದೇವಿ ಎಂಬುವವರ ವಿರುದ್ಧ ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಕಮಲನಾಥ್‌ ಅವರು ‘ಐಟಂ’ ಎಂಬ ಪದ ಬಳಸಿರುವುದು ವಿವಾದಕ್ಕೆ ಕಾರಣವಾಗಿದೆ.

ದಬ್ರಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯ ಪರ ಕಮಲ್‌ ನಾಥ್‌ ಭಾನುವಾರ ಪ್ರಚಾರ ಕೈಗೊಂಡಿದ್ದರು. ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಇಮಾರತಿ ದೇವಿ ಅವರ ವಿರುದ್ಧ ಸಮಾವೇಶದಲ್ಲಿ ಮಾತನಾಡಿರುವ ಕಮಲನಾಥ್‌, ‘ನಮ್ಮ ಅಭ್ಯರ್ಥಿ ಅತ್ಯಂತ ಸರಳ ವ್ಯಕ್ತಿ. ಅವರಂತೆ (ಇಮಾರತಿ ದೇವಿ) ಐಟಂ’ ಅಲ್ಲ ಎಂದು ಗೇಲಿ ಮಾಡಿದರು.

‘ನಾನು ಅವರ (ಇಮಾರ್ತಿ ದೇವಿ) ಹೆಸರನ್ನು ಏಕೆ ಹೇಳಬೇಕು? ನೀವೆಲ್ಲರೂ ಅವರನ್ನು ನನಗಿಂತ ಚೆನ್ನಾಗಿ ಬಲ್ಲಿರಿ. ಎಂಥ ಐಟಂ...? ಎಂಥ ಐಟಂ...?’ ಎಂದು ನಕ್ಕರು. ಆಗ ಸಮಾವೇಶದಲ್ಲಿ ಸೇರಿದ್ದವರು ‘ಇಮಾರ್ತಿ ದೇವಿ...’ ‘ಇಮಾರ್ತಿ ದೇವಿ...’ ಎಂದು ಕೂಗುತ್ತಿದ್ದರು.

ಕಮಲ್‌ ನಾಥ್‌ ಅವರ ಹೇಳಿಕೆಗೆ ಟ್ವಿಟರ್‌ನಲ್ಲಿ ತಿರುಗೇಟು ನೀಡಿರುವ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್‌, ‘ಇಮಾರತಿ ದೇವಿ ಒಬ್ಬ ಬಡ ರೈತನ ಮಗಳು. ಹಳ್ಳಿಯಲ್ಲಿ ಕೂಲಿ ಕಾರ್ಮಿಕರಾಗಿದ್ದ ಅವರು, ಸಮಾಜ ಸೇವಕರಾಗಿ ಬೆಳೆದಿದ್ದಾರೆ. ಒಬ್ಬ ಮಹಿಳೆಯನ್ನು ‘ಐಟಂ‘ ಎಂದು ಕರೆಯುವ ಮೂಲಕ ಕಾಂಗ್ರೆಸ್ ಮತ್ತು ಅದರ ನಾಯಕರು ತಮ್ಮ ಜಮೀನ್ದಾರಿ ಮನಸ್ಥಿತಿಯನ್ನು ಬಹಿರಂಗಪಡಿಸಿದ್ದಾರೆ,’ ಎಂದು ಚೌಹಾನ್ ಟ್ವೀಟ್ ಮಾಡಿದ್ದಾರೆ.

ಈ ಹೇಳಿಕೆ ಕುರಿತು ಬಿಜೆಪಿಯು ಚುನಾವಣಾ ಆಯೋಗಕ್ಕೆ ದೂರನ್ನೂ ನೀಡಿದೆ. ‘ಮಹಿಳೆಯರು ಮತ್ತು ದಲಿತರನ್ನು ಕಮಲನಾಥ್‌ ಅಪಮಾನಿಸಿದ್ದಾರೆ,’ ಎಂದು ಬಿಜೆಪಿ ದೂರಿದೆ.

ಇಮಾರತಿ ದೇವಿ ಅವರೂ ಸೇರಿದಂತೆ ಕಾಂಗ್ರೆಸ್‌ನ 21 ಶಾಸಕರು ಜೋತಿರಾದಿತ್ಯ ಸಿಂಧಿಯಾ ಅವರ ನೇತೃತ್ವದಲ್ಲಿ ಕಳೆದ ವರ್ಷ ಮಾರ್ಚ್‌ನಲ್ಲಿ ಬಿಜೆಪಿ ಸೇರಿದ್ದರು. ಹೀಗಾಗಿ ಕಮಲನಾಥ್‌ ಅವರ ಸರ್ಕಾರ ಪತನವಾಗಿತ್ತು. ಈ 21 ಕ್ಷೇತ್ರಗಳೂ ಸೇರಿ ಮಧ್ಯಪ್ರದೇಶದ ಒಟ್ಟು 28 ಸ್ಥಾನಗಳಿಗೆ ಇದೇ ನ.3ರಂದು ಉಪಚುನಾವಣೆ ನಡೆಯುತ್ತಿದೆ. ನ. 10ರಂದು ಫಲಿತಾಂಶ ಪ್ರಕಟವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT