ಬುಧವಾರ, ಸೆಪ್ಟೆಂಬರ್ 23, 2020
27 °C

ಕೋವಿಡ್‌–19 ಚಿಕಿತ್ಸೆಗೆ ಅಗ್ಗದ ಔಷಧ: ಪ್ರತಿ ಮಾತ್ರೆಗೆ ₹33

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್‌: ಕೋವಿಡ್‌–19 ದೃಢಪಟ್ಟವರಿಗೆ ಚಿಕಿತ್ಸೆ ನೀಡಲು ಅಗ್ಗದ ದರದ ಔಷಧವನ್ನು ಬಿಡುಗಡೆ ಮಾಡುವುದಾಗಿ ಹೈದರಾಬಾದ್‌ ಮೂಲದ ಔಷಧ ತಯಾರಿಕಾ ಕಂಪನಿ ಎಂಎಸ್‌ಎನ್‌ ಗ್ರೂಪ್‌ ಗುರುವಾರ ಹೇಳಿದೆ.

ಫೆವಿಪಿರವಿರ್ ಆ್ಯಂಟಿ ವೈರಲ್‌‌ ಔಷಧವನ್ನು 200 ಎಂಜಿ ಮಾತ್ರೆಗಳ ರೂಪದಲ್ಲಿ ತಯಾರಿಸಲಾಗಿದೆ. ಮಾತ್ರೆಯೊಂದಕ್ಕೆ ₹33 ಬೆಲೆ ನಿಗದಿ ಮಾಡಲಾಗಿದೆ.

‘ಫ್ಯಾವಿಲೋ’ ಬ್ರ್ಯಾಂಡ್‌ ಹೆಸರಿನಲ್ಲಿ ಈ ಔಷಧವು ದೇಶದ ಎಲ್ಲಾ ಔಷಧ ಮಳಿಗೆಗಳಲ್ಲಿ ಲಭ್ಯವಾಗಲಿದೆ. 400 ಎಂಜಿ ಮಾತ್ರೆಗಳ ರೂಪದಲ್ಲೂ ಔಷಧ ಸಿದ್ಧಪಡಿಸಲಾಗಿದ್ದು ಇದನ್ನೂ ಶೀಘ್ರವೇ ಮಾರುಕಟ್ಟೆಗೆ ತರಲು ಚಿಂತಿಸಲಾಗಿದೆ ಎಂದೂ ಹೇಳಲಾಗಿದೆ.

‘ಕೋವಿಡ್‌ ಬಿಕ್ಕಟ್ಟಿನಿಂದಾಗಿ ಎಲ್ಲರೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೋವಿಡ್‌ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಈ ಸಮಯದಲ್ಲೇ ನಾವು ಔಷಧವನ್ನು ಮಾರುಕಟ್ಟೆಗೆ ತರಲು ಮುಂದಾಗಿದ್ದೇವೆ. ಕಡಿಮೆ ದರದಲ್ಲಿ ಗುಣಮಟ್ಟದ ಔಷಧ ಪೂರೈಸುವುದಕ್ಕೆ ನಾವು ಆದ್ಯತೆ ನೀಡಲಿದ್ದೇವೆ’ ಎಂದು ಎಂಎಸ್‌ಎನ್‌ ಸಮೂಹದ ಸಿಎಂಡಿ ಎಂಎಸ್‌ಎನ್‌ ರೆಡ್ಡಿ ತಿಳಿಸಿದ್ದಾರೆ.

ಹೈದರಾಬಾದ್‌ನ ಬೊಲ್ಲಾರಾಮ್‌ನಲ್ಲಿರುವ ಎಂಎಸ್‌ಎನ್‌ ಸಮೂಹದ ಔಷಧ ತಯಾರಿಕಾ ಘಟಕದಲ್ಲಿ ಈ ಔಷಧವನ್ನು ಸಿದ್ಧಪಡಿಸಲಾಗುತ್ತಿದೆ. ಆಗಸ್ಟ್‌‌ 15ರಂದು ಇದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಬಗ್ಗೆಯೂ ಚಿಂತಿಸಲಾಗಿದೆ.  

ಜಪಾನ್‌ನ ಫ್ಯೂಜಿಫಿಲ್ಮಿ ಹೋಲ್ಡಿಂಗ್ಸ್‌ ಕಾರ್ಪ್ ಕಂಪನಿಯು ಏವಿಗನ್‌ ಎಂಬ ಬ್ರ್ಯಾಂಡ್‌ ಹೆಸರಿನಲ್ಲಿ ಮೊದಲು ಫೆವಿಪಿರವಿರ್ ಆ್ಯಂಟಿ ವೈರಲ್‌‌ ಔಷಧವನ್ನು ಅಭಿವೃದ್ಧಿಪಡಿಸಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು