ಮುಂಬೈ: 14 ವರ್ಷದ ಬಾಲಕಿಯನ್ನು ಅಪಹರಿಸಿ, ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದ ಆರೋಪಿ ‘ಪೀಟರ್ ಪ್ಯಾನ್ ಸಿಂಡ್ರೋಮ್’ನಿಂದ ಬಳಲುತ್ತಿರುವ ಕಾರಣ, ಮುಂಬೈ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.
ವಿಶೇಷ ನ್ಯಾಯಧೀಶ ಎಸ್.ಸಿ ಜಾದವ್, ಅವರು ₹ 25,000 ವೈಯಕ್ತಿಕ ಬಾಂಡ್ ಸೇರಿದಂತೆ ಇತರೆ ನಿಯಮಗಳಡಿಯಲ್ಲಿ 23 ವರ್ಷದ ಆರೋಪಿಗೆ ಜಾಮೀನು ಮಂಜೂರು ಮಾಡಿದ್ದಾರೆ.
ಸಂತ್ರಸ್ತೆ ಮತ್ತು ಯುವಕ ಒಬ್ಬರಿಗೊಬ್ಬರು ಪರಿಚಿತರು. ಇಬ್ಬರ ನಡುವೆ ಪ್ರೀತಿಯೂ ಇತ್ತು. ಯುವಕನಿಗೆ ‘ಪೀಟರ್ ಪ್ಯಾನ್ ಸಿಂಡ್ರೋಮ್’ ಇದ್ದಿದ್ದರಿಂದ ಸಂತ್ರಸ್ತೆಯ ಕುಟುಂಬದವರು ಈತನನ್ನು ವಿರೋಧಿಸಿದ್ದರು. ಸಂತ್ರಸ್ತೆ ಸ್ವ ಇಚ್ಛೆಯಿಂದ ಯುವಕನೊಂದಿಗೆ ಸಂಬಂಧ ಹೊಂದಿದ್ದಳು ಎಂದು ಆರೋಪಿ ಪರ ವಕೀಲ ಸುನೀಲ್ ಪಾಂಡೆವಾದಿಸಿದರು.
ಇದಕ್ಕೆ ವಿರೋಧ ವ್ಯಕ್ತಪಡಿಸಿದ ವಿಶೇಷ ಸಾರ್ವಜನಿಕ ಅಭಿಯೋಜಕಿ ವೀನಾ ಶೆಲಾರ್ ಅವರು ,‘ಆರೋಪಿಯು ಈ ಕೃತ್ಯದಲ್ಲಿ ಭಾಗಿಯಾಗಿರುವುದಕ್ಕೆ ಸಾಕಷ್ಟು ದಾಖಲೆಗಳಿವೆ. ಒಂದು ವೇಳೆ ಆರೋಪಿಗೆ ಜಾಮೀನು ನೀಡಿದರೆ, ಆತ ಸಾಕ್ಷ್ಯಧಾರಗಳನ್ನು ಹಾಳುಮಾಡುವ ಸಾಧ್ಯತೆಗಳಿವೆ’ ಎಂದು ವಾದ ಮಾಡಿದರು.
ಬಾಲಕಿ ನೀಡಿದ್ದ ಹೇಳಿಕೆಯನ್ನು ಪರಿಶೀಲಿಸಿದರೆ, ಮೇಲ್ನೋಟಕ್ಕೆ ಬಾಲಕಿಯೇ ಸ್ವ ಇಚ್ಛೆಯಿಂದ ಮನೆ ಬಿಟ್ಟು, ಯುವಕನ ಬಳಿ ಹೋಗಿರುವುದು ಗೊತ್ತಾಗುತ್ತದೆ. ಬಾಲಕಿಗೆ ಏನು ನಡೆಯುತ್ತಿದೆ ಎಂಬ ವಿಷಯಗಳ ಬಗ್ಗೆ ಅರಿವಿತ್ತು ಎಂಬುದೂ ಗಮನಕ್ಕೆ ಬಂದಿದೆ ಎಂದು ನ್ಯಾಯಾಲಯ ಹೇಳಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.