ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಕೆದಾಟು: ತೀರ್ಪು ಕಾಯ್ದಿರಿಸಿದ ಎನ್‌ಜಿಟಿ

ಸಮಿತಿ ರಚನೆ– ದಕ್ಷಿಣ ಪೀಠದ ಆದೇಶ ಪ್ರಶ್ನಿಸಿ ಕರ್ನಾಟಕದ ಮೇಲ್ಮನವಿ
Last Updated 18 ಜೂನ್ 2021, 1:47 IST
ಅಕ್ಷರ ಗಾತ್ರ

ನವದೆಹಲಿ: ಮೇಕೆದಾಟು ಸ್ಥಳ ಪರಿಶೀಲನೆಗಾಗಿ ಸಮಿತಿ ರಚಿಸಿ ದಕ್ಷಿಣ (ಚೆನ್ನೈ) ಪೀಠ ನೀಡಿದ್ದ ಆದೇಶ ಪ್ರಶ್ನಿಸಿರುವ ಕರ್ನಾಟಕದ ಮೇಲ್ಮನವಿಯ ವಿಚಾರಣೆಯನ್ನು ಗುರುವಾರ ಪೂರ್ಣಗೊಳಿಸಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ)ಯ ಪ್ರಧಾನ ಪೀಠ, ಈ ಸಂಬಂಧದ ತೀರ್ಪನ್ನು ಕಾಯ್ದಿರಿಸಿದೆ.

‘ಕರ್ನಾಟಕ ಸರ್ಕಾರವು ಮೇಕೆದಾಟು ಬಳಿ ಕಾವೇರಿ ನದಿಗೆ ಅಡ್ಡಲಾಗಿ ಅಕ್ರಮವಾಗಿ ಅಣೆಕಟ್ಟೆ ನಿರ್ಮಿಸುತ್ತಿದೆ’ ಎಂಬ ಪತ್ರಿಕಾ ವರದಿ ಆಧರಿಸಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದ ದಕ್ಷಿಣದ ಪೀಠ, ಮೇ 21ರಂದು ಸಮಿತಿಯೊಂದನ್ನು ರಚಿಸಿ ಸ್ಥಳ ಪರಿಶೀಲನೆಗಾಗಿ ಆದೇಶಿಸಿತ್ತು.

ಈ ಆದೇಶ ಪ್ರಶ್ನಿಸಿ ಸಲ್ಲಿಕೆಯಾಗಿರುವ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆದರ್ಶಕುಮಾರ್‌ ಗೋಯೆಲ್‌ ನೇತೃತ್ವದ ಪ್ರಧಾನ ಪೀಠದೆದುರು ಅಡ್ವೋಕೇಟ್ ಜನರಲ್‌ ಪ್ರಭುಲಿಂಗ ನಾವದಗಿ ವಾದ ಮಂಡಿಸಿದರು.

ಮೇಕೆದಾಟು ಯೋಜನೆ ವಿರೋಧಿಸಿ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ಗೆ ಈಗಾಗಲೇ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ಬಾಕಿ ಇದೆ. ಈ ವಿಷಯವನ್ನು ತಮಿಳುನಾಡು ಸರ್ಕಾರವೇ ಕೇಂದ್ರ ಸರ್ಕಾರದೆದುರು ಹೇಳಿಕೊಂಡಿದೆ. ಹಾಗಾಗಿ, ಎನ್‌ಜಿಟಿ ದಕ್ಷಿಣದ ಪೀಠ ಸ್ವಯಂ ಪ್ರೇರಣೆಯ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸಲು ಅವಕಾಶವಿಲ್ಲ ಎಂದು ಅವರು ಹೇಳಿದರು.

ಕಾವೇರಿಯ ಹೆಚ್ಚುವರಿ ನೀರನ್ನು ತಡೆದು, ಬೆಂಗಳೂರು ಮತ್ತು ಸುತ್ತಮುತ್ತಲ ಪ್ರದೇಶಗಳ ಜನತೆಗೆ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಕರ್ನಾಟಕ ಸರ್ಕಾರ ಮೇಕೆದಾಟು ಯೋಜನೆಯನ್ನು ರೂಪಿಸಿದೆ. ಯೋಜನಾ ಸ್ಥಳದಲ್ಲಿ ಕಾಮಗಾರಿ ಆರಂಭಿಸಲಾಗಿಲ್ಲ. ಯಾವುದೇ ರೀತಿಯ ಅಕ್ರಮಕ್ಕೆ ಅವಕಾಶವೇ ಇಲ್ಲ ಎಂದು ವಿವರಿಸಿದರು.

ಪ್ರಕರಣ ಕುರಿತು ಮಾಹಿತಿ ಕಲೆಹಾಕಿ, ದಾಖಲೆ ಸಲ್ಲಿಸಲು ಸಮಯಾವಕಾಶ ನೀಡಬೇಕು. ಅಲ್ಲಿಯವರೆಗೆ ವಿಚಾರಣೆ ಮುಂದೂಡಬೇಕು ಎಂದುಈ ಸಂದರ್ಭ ತಮಿಳುನಾಡು ಪರ ವಕೀಲರು ಮಾಡಿಕೊಂಡ ಮನವಿಗೆ ಹಸಿರು ಪೀಠ ಮಾನ್ಯತೆ ನೀಡಲಿಲ್ಲ.

ರಾಜ್ಯ ಸರ್ಕಾರದ ವಾದ ಆಲಿಸಿದ ನ್ಯಾಯಮೂರ್ತಿ ಸುಧೀರ್‌ ಅಗರ್‌ವಾಲ್‌, ತಜ್ಞ ಸದಸ್ಯ ನಾಗಿನ್‌ ನಂದಾ ಅವರಿದ್ದ ಪೀಠವು ತೀರ್ಪು ಕಾಯ್ದಿರಿಸಿತು.

‘ಅರಣ್ಯ, ಪರಿಸರ ಅನುಮತಿ ಪಡೆಯದೆಯೇ ಮೇಕೆದಾಟು ಜಲಾಶಯ ನಿರ್ಮಿಸಲು ಕರ್ನಾಟಕ ಸರ್ಕಾರ ಸಿದ್ಧತೆ ನಡೆಸಿದೆ’ ಎಂಬ ಚೆನ್ನೈನ ಪತ್ರಿಕೆಯೊಂದರ ವರದಿ ಆಧರಿಸಿ ನ್ಯಾಯಮೂರ್ತಿ ಆರ್‌.ರಾಮಕೃಷ್ಣನ್‌ ಹಾಗೂ ತಜ್ಞ ಸದಸ್ಯ ಕೆ.ಸತ್ಯಗೋಪಾಲ್‌ ಅವರನ್ನು ಒಳಗೊಂಡ ದಕ್ಷಿಣ ಪೀಠವು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿತ್ತು. ಮೇಕೆದಾಟು ಬಳಿಯ ಸ್ಥಳ ಪರಿಶೀಲನೆಗಾಗಿ ಸಮಿತಿ ರಚಿಸಿ, ಜುಲೈ 5ರೊಳಗೆ ವರದಿ ಸಲ್ಲಿಸುವಂತೆ ಆ ಸಮಿತಿಗೆ ಸೂಚಿಸಿತ್ತು.

ಉದ್ದೇಶಿತ ಯೋಜನಾ ಪ್ರದೇಶದ ಬಳಿ ಇರುವ ಕಾವೇರಿ ವನ್ಯಜೀವಿ ತಾಣ ಹಾಗೂ ಮೇಕೆದಾಟು ಸುತ್ತಮುತ್ತಲಿನ ಅರಣ್ಯ ಪ್ರದೇಶದಲ್ಲಿ ಯಾವುದೇ ರೀತಿಯ ಉಲ್ಲಂಘನೆ ಕಂಡುಬಂದಲ್ಲಿ ವಾಸ್ತವ ವರದಿಯನ್ನು ಸಲ್ಲಿಸಬೇಕು ಎಂದು ಪೀಠವು ಸಮಿತಿಗೆ ನಿರ್ದೇಶನ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT