ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡ್ರಗ್ಸ್‌ ಪ್ರಕರಣ: ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ವಿರುದ್ಧ ಸುಲಿಗೆ ಆರೋಪ

Last Updated 21 ಅಕ್ಟೋಬರ್ 2021, 10:16 IST
ಅಕ್ಷರ ಗಾತ್ರ

ಮುಂಬೈ: ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಸುಲಿಗೆಯಲ್ಲಿ ತೊಡಗಿದ್ದಾರೆ ಎಂದು ಎನ್‌ಸಿಪಿ ನಾಯಕ, ಮಹಾರಾಷ್ಟ್ರ ಸರ್ಕಾರದ ಸಚಿವ ನವಾಬ್ ಮಲಿಕ್‌ ಗಂಭೀರ ಆರೋಪ ಮಾಡಿದ್ದಾರೆ.

ಬಾಲಿವುಡ್‌ ನಟಿ ಅನನ್ಯಾ ಪಾಂಡೆ ಅವರನ್ನು ಎನ್‌ಸಿಬಿ ವಿಚಾರಣೆಗೆ ಕರೆದಿರುವ ಬೆನ್ನಲ್ಲೇ ಮಲಿಕ್‌ ಅವರು ಈ ಆರೋಪ ಮಾಡಿದ್ದು ಚರ್ಚೆಗೆ ಗ್ರಾಸವಾಗಿದೆ.

ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳೊಂದಿಗೆ ಗುರುವಾರ ಮಾತನಾಡಿರುವ ನವಾಬ್‌ ಮಲಿಕ್‌, 'ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮಹತ್ಯೆಯ ನಂತರ ವಿಶೇಷ ಅಧಿಕಾರಿಯೊಬ್ಬರನ್ನು (ಸಮೀರ್ ವಾಂಖೆಡೆ) ಎನ್‌ಸಿಬಿಗೆ ಕರೆತರಲಾಯಿತು. ಸುಶಾಂತ್‌ರ ಸಾವಿನ ರಹಸ್ಯ ಇನ್ನೂ ಹೊರಬಂದಿಲ್ಲ. ಪ್ರಕರಣದ ಕುರಿತು ಸಿಬಿಐ ತನಿಖೆ ನಡೆಸುತ್ತಿದೆ. ಆದರೆ, ಈಗ ಎನ್‌ಸಿಬಿಯು ಬಾಲಿವುಡ್‌ ಹಿಂದೆ ಬಿದ್ದಿದೆ. ರಿಯಾ ಚಕ್ರವರ್ತಿ ಸೇರಿದಂತೆ ಹಲವು ಬಾಲಿವುಡ್‌ ನಟ-ನಟಿಯರು ಎನ್‌ಸಿಬಿ ಮುಂದೆ ಪರೇಡ್‌ ನಡೆಸಿದ್ದಾರೆ' ಎಂದು ನವಾಬ್ ಮಲಿಕ್ ಹೇಳಿದರು.

'ಸಮೀರ್ ವಾಂಖೆಡೆ ಮತ್ತು ಬಾಲಿವುಡ್ ನಡುವೆ ಆಳವಾದ ಸಂಪರ್ಕವಿದೆ. ಕೋವಿಡ್ ಸಮಯದಲ್ಲಿ ಇಡೀ ಚಿತ್ರರಂಗ ಮಾಲ್ಡೀವ್ಸ್‌ನಲ್ಲಿತ್ತು. ಆ ಸಮಯದಲ್ಲಿ ಸಮೀರ್ ವಾಂಖೆಡೆ ಮತ್ತು ಅವರ ಕುಟುಂಬ ಸದಸ್ಯರು ಏನು ಮಾಡುತ್ತಿದ್ದರು ಎಂಬುದನ್ನು ಸ್ಪಷ್ಟಪಡಿಸಬೇಕು' ಎಂದು ಮಲಿಕ್ ಒತ್ತಾಯಿಸಿದರು.

'ನಾವು ಬಹಳ ಸ್ಪಷ್ಟವಾಗಿದ್ದೇವೆ. ಸಮೀರ್‌ ಅವರ ಎಲ್ಲಾ ಸುಲಿಗೆಗಳು ಮಾಲ್ಡೀವ್ಸ್ ಮತ್ತು ದುಬೈನಲ್ಲಿ ನಡೆದಿವೆ. ಇದಕ್ಕೆ ಸಂಬಂಧಿಸಿದ ಫೋಟೋಗಳನ್ನು ಬಿಡುಗಡೆ ಮಾಡುತ್ತೇನೆ' ಎಂದೂ ಮಹಾರಾಷ್ಟ್ರ ಸಚಿವರು ಹೇಳಿದರು.

ಅಕ್ಟೋಬರ್ 3 ರಂದು ವಾಂಖೆಡೆ ನೇತೃತ್ವದ ತಂಡವು ಮುಂಬೈನ ಕರಾವಳಿಯಲ್ಲಿ ಐಶಾರಾಮಿ ಕ್ರೂಸ್ ಹಡಗಿನ ಮೇಲೆ ದಾಳಿ ನಡೆಸಿತ್ತು.ಆ ಮೂಲಕ ಬಾಲಿವುಡ್‌ ನಟ ಶಾರುಕ್ ಖಾನ್ ಅವರ ಪುತ್ರ ಆರ್ಯನ್ ಮತ್ತಿತರರನ್ನು ಬಂಧಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT