ಸೋಮವಾರ, ಮಾರ್ಚ್ 27, 2023
32 °C

ಮುರ್ಮು ಅವರಿಗೆ ಆತ್ಮಸಾಕ್ಷಿ ಆಧಾರ ಮತ ಹಾಕಿದೆವು: ಎನ್‌ಸಿಪಿ, ಕಾಂಗ್ರೆಸ್ ಶಾಸಕರು

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರಿಗೆ ಮತ ಹಾಕಿರುವುದಾಗಿ ಘೋಷಿಸುವ ಮೂಲಕ ಜಾರ್ಖಂಡ್‌ನ ಎನ್‌ಸಿಪಿ ಶಾಸಕ ಕಮಲೇಶ್ ಸಿಂಗ್ ಅವರು, ವಿಪಕ್ಷಗಳ ನಾಯಕರು ಹುಬ್ಬೇರಿಸುವಂತೆ ಮಾಡಿದ್ದಾರೆ.

ಒಡಿಶಾದ ಆದಿವಾಸಿ ಜನಾಂಗದ ನಾಯಕ, ಕಾಂಗ್ರೆಸ್‌ನ ಹಿರಿಯ ಶಾಸಕ ಮಹಮ್ಮದ್ ಮೊಕ್ಯುಮ್ ಸಹ ಮುರ್ಮು ಅವರಿಗೆ ಮತ ಹಾಕಿರುವುದಾಗಿ ಹೇಳಿದ್ದಾರೆ.

ತಾವು ತಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಹಾಕಿರುವುದಾಗಿ ಸಿಂಗ್ ಮತ್ತು ಮೊಕ್ಯುಮ್ ಹೇಳಿದ್ದಾರೆ.

‘ರಾಷ್ಟ್ರಪತಿ ಹುದ್ದೆಗೆ ಸೂಕ್ತವಾದವರನ್ನು ಆಯ್ಕೆ ಮಾಡುವ ಹಕ್ಕು ಶಾಸಕರಿಗಿದೆ. ಒಡಿಯಾ ಭಾಷಿಕನಾಗಿ ನನ್ನ ಮತವು ಮುರ್ಮು ಅವರ ಗೆಲುವಿಗೆ ನೆರವಾದರೆ ನನಗೆ ಅತ್ಯಂತ ಹೆಮ್ಮೆ ಎನಿಸುತ್ತದೆ’ಎಂದು ಬಾರಾಬಟಿ–ಕಟಕ್ ಕ್ಷೇತ್ರದ ಶಾಸಕ ಮಹಮ್ಮದ್ ಮೊಕ್ಯುಮ್ ಹೇಳಿದ್ದಾರೆ.

‘ರಾಷ್ಟ್ರಪತಿ ಚುನಾವಣೆಯಲ್ಲಿ ವಿಪ್ ಅನ್ವಯ ಆಗುವುದಿಲ್ಲ. ಹಾಗಾಗಿ, ನನ್ನ ಆತ್ಮಸಾಕ್ಷಿಯ ಅನುಗುಣವಾಗಿ ಮತ ಹಾಕಿದ್ದೇನೆ’ಎಂದು ಅವರು ಹೇಳಿದ್ದಾರೆ.

ತಮ್ಮ ಹಿತೈಷಿಗಳು, ಸ್ನೇಹಿತರು ಮತ್ತು ಗಣ್ಯರು ಮುರ್ಮು ಅವರಿಗೆ ಮತ ಹಾಕುವಂತೆ ಮನವಿ ಮಾಡಿದ್ದರು ಎಂದು ಅವರು ಹೇಳಿದ್ದಾರೆ.

ಒಡಿಶಾದ 81 ಶಾಸಕರ ಪೈಕಿ 51 ಮಂದಿ ರಾಷ್ಟ್ರಪತಿ ಚುನಾವಣೆಯಲ್ಲಿ ಮತದಾನ ಮಾಡಿದ್ದಾರೆ.

ಇತ್ತ, ‘ಜಾರ್ಖಂಡ್‌ನಲ್ಲಿ ಮುರ್ಮು ಅವರಿಗೆ 65 ಶಾಸಕರು ಮತ ಹಾಕಿರಬಹುದು. ಹಲವು ಕಾಂಗ್ರೆಸ್ ಶಾಸಕರು ತಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಮುರ್ಮು ಅವರಿಗೆ ಮತ ಹಾಕಿದ್ದಾರೆ’ಎಂದು ಬಿಜೆಪಿ ಶಾಸಕ ಬಿರಾಂಚಿ ನಾರಾಯಣ್ ಹೇಳಿದ್ದಾರೆ.

ಬಿಜೆಪಿ ಶಾಸಕರಾದ ಅನಂತ್ ಓಝಾ ಮತ್ತು ಪ್ರತಾಪ್ ಶಾಹಿ ಮೊದಲಿಗರಾಗಿ ಮತದಾನ ಮಾಡಿದರು.

‘ದೇಶದ ಪ್ರಥಮ ಪ್ರಜೆಯ ಆಯ್ಕೆಗೆ ನಮ್ಮ ರಾಜ್ಯದಿಂದ ಮೊದಲಿಗನಾಗಿ ಮತದಾನ ಮಾಡಿದ್ದೇನೆ. ಇದು ನನಗೆ ಅತ್ಯಂತ ಹೆಮ್ಮೆಯ ವಿಷಯವಾಗಿದೆ’ ಎಂದು ಓಝಾ ಹೇಳಿದ್ದಾರೆ.

‘ಬಡವರು, ತುಳಿತಕ್ಕೊಳಗಾದವರು ಮತ್ತು ದಲಿತರ ಏಳಿಗೆಗೆ ಮುರ್ಮು ಶ್ರಮಿಸಲಿದ್ದಾರೆ ಎಂಬ ನಂಬಿಕೆ ನಮಗಿದೆ’ ಎಂದು ಶಾಹಿ ಹೇಳಿದ್ದಾರೆ.

ಕಾಂಗ್ರೆಸ್ ಮತ್ತು ಆರ್‌ಜೆಡಿ ಜೊತೆ ಸೇರಿ ಜಾರ್ಖಂಡ್‌ನಲ್ಲಿ ಸರ್ಕಾರ ರಚನೆ ಮಾಡಿರುವ ಜೆಎಂಎಂ ಈ ಮೊದಲು ಪ್ರತಿಪಕ್ಷಗಳ ಅಭ್ಯರ್ಥಿ ಯಶವಂತ್ ಸಿನ್ಹಾ ಅವರನ್ನು ಬೆಮಬಲಿಸಿದ್ದರು. ಆದಿವಾಸಿ ಸಮುದಾಯದ ನಾಯಕರಿಂದ ತೀವ್ರ ವಿರೋಧ ವ್ಯಕ್ತವಾದ ಬಳಿಕ ಮುರ್ಮು ಅವರನ್ನು ಬೆಂಬಲಿಸಲು ತೀರ್ಮಾನಿಸಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು