ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವರಿಗೆ ನೊಬೆಲ್‌ ಕೊಡಬೇಕು...: ಕೇಜ್ರಿವಾಲ್‌ ಬಗ್ಗೆ ಬಿ.ಎಲ್‌ ಸಂತೋಷ್‌ ವ್ಯಂಗ್ಯ 

Last Updated 22 ಆಗಸ್ಟ್ 2022, 18:08 IST
ಅಕ್ಷರ ಗಾತ್ರ

ಬೆಂಗಳೂರು: ‘ಭಾರತ ರತ್ನ ನೀಡಬೇಕಾದಂತಹ ಕೆಲಸವನ್ನು ಸಿಸೋಡಿಯಾ ಮಾಡಿದ್ದಾರೆ. ಆದರೆ ಅವರಿಗೆ ಕಿರುಕುಳ ನೀಡಲಾಗುತ್ತಿದೆ’ ಎಂಬ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಹೇಳಿಕೆಯನ್ನು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್‌ ಸಂತೋಷ್ ಅವರು ಸೋಮವಾರ ವ್ಯಂಗ್ಯವಾಡಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅವರು, ‘ಸತ್ಯೇಂದ್ರ ಜೈನ್‌ಗೆ ಪದ್ಮವಿಭೂಷಣ... ಮನೀಶ್ ಸಿಸೋಡಿಯಾಗೆ ಭಾರತ ರತ್ನ.... ಮುಂದೆ ಅವರಿಗೇ (ಅರವಿಂದ ಕೇಜ್ರಿವಾಲ್‌ಗೆ) ನೊಬೆಲ್ ಪ್ರಶಸ್ತಿ... ಅದ್ಭುತವಾಗಿದೆ ‘ಅರಾಜಕತಾವಾದಿ ಪಕ್ಷ’ ಎಂದು ಅವರು ಗೇಲಿ ಮಾಡಿದ್ದಾರೆ.

‘70 ವರ್ಷಗಳಲ್ಲಿ ಯಾವುದೇ ಪಕ್ಷಗಳು ಮಾಡಲು ಸಾಧ್ಯವಾಗದ ಕೆಲಸವನ್ನು ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮಾಡಿದ್ದಾರೆ. ಸರ್ಕಾರಿ ಶಾಲೆಗಳನ್ನು ಸುಧಾರಿಸಿದ್ದಾರೆ. ಅಂಥವರಿಗೆ ಭಾರತ ರತ್ನ ಸಿಗಬೇಕು. ಇಡೀ ದೇಶದ ಶಿಕ್ಷಣ ವ್ಯವಸ್ಥೆಯನ್ನು ಅವರ ಕೈಗೆ ಒಪ್ಪಿಸಬೇಕು. ಅದರ ಬದಲಿಗೆ ಅವರ ಮೇಲೆ ಸಿಬಿಐ ದಾಳಿ ನಡೆಸಲಾಗುತ್ತಿದೆ’ ಎಂದು ಎಎಪಿಯ ರಾಷ್ಟ್ರೀಯ ಸಂಚಾಲಕರೂ ಆಗಿರುವ ಅರವಿಂದ ಕೇಜ್ರಿವಾಲ್‌ ಅವರು ಗುಜರಾತ್‌ನಲ್ಲಿ ಸೋಮವಾರ ಹೇಳಿದ್ದರು. ಕೇಜ್ರಿವಾಲ್‌ ಅವರ ಈ ಹೇಳಿಕೆಗೆ ತಿರುಗೇಟು ನೀಡುವ ರೀತಿಯಲ್ಲಿ ಸಂತೋಷ್‌ ಟ್ವೀಟ್‌ ಮಾಡಿದ್ದಾರೆ.

ದೆಹಲಿ ಸರ್ಕಾರದ ಅಬಕಾರಿ ನೀತಿ ನಿರೂಪಣೆಯಲ್ಲಿನ ಅಕ್ರಮದ ಸಂಬಂಧ ಸಿಬಿಐ ಇತ್ತೀಚೆಗೆ ಮನೀಶ್‌ ಸಿಸೋಡಿಯಾ ಅವರ ನಿವಾಸ, ಕಚೇರಿ ಮೇಲೆ ದಾಳಿ ನಡೆಸಿತ್ತು. ಸಿಸೋಡಿಯಾ, ಕೇಜ್ರಿವಾಲ್‌ ಮತ್ತು ದೆಹಲಿಯ ಎಎಪಿ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಬಿಜೆಪಿ ಆರೋಪಿಸಿದೆ. ಕೇಜ್ರಿವಾಲ್‌ ಅವರ ಏಳಿಗೆಯನ್ನು ಸಹಿಸದ ಬಿಜೆಪಿ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಅವರನ್ನು ತಡೆಯುವ ಪ್ರಯತ್ನ ಮಾಡುತ್ತಿದೆ ಎಂದು ಎಎಪಿ ಆರೋಪಿಸಿದೆ.

ಇದಕ್ಕೂ ಹಿಂದೆ, ಮೇ 30ರಂದು ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ದೆಹಲಿಯ ಸಚಿವ ಸತ್ಯೇಂದ್ರ ಜೈನ್‌ ಅವರನ್ನು ಜಾರಿ ನಿರ್ದೇಶನಾಲಯವು (ಇ.ಡಿ.) ಬಂಧಿಸಿತ್ತು.

ಅರಾಜಕತಾವಾದಿ ಎಂದಿದ್ದ ಕೇಜ್ರಿವಾಲ್‌

ಇನ್ನು, ಬಿ.ಎಲ್‌ ಸಂತೋಷ್‌ ಅವರು ತಮ್ಮ ಟ್ವೀಟ್‌ನಲ್ಲಿ ಎಎಪಿಯನ್ನು ಅರಾಜಕತಾವಾದಿ ಪಕ್ಷ ಎಂದು ಉಲ್ಲೇಖಿಸಿದ್ದಾರೆ.

ವ್ಯಭಿಚಾರ ಮತ್ತು ಮಾದಕ ದ್ರವ್ಯ ಜಾಲದ ವಿರುದ್ಧ ಕ್ರಮ ಕೈಗೊಳ್ಳಲು ನಿರಾಕರಿಸಿದ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಮತ್ತು ದಿಲ್ಲಿ ಪೊಲೀಸ್ ಇಲಾಖೆಯನ್ನು ರಾಜ್ಯ ಸರಕಾರದ ಸುಪರ್ದಿಗೆ ವಹಿಸಬೇಕೆಂದು ಆಗ್ರಹಿಸಿ ಅರವಿಂದ್ ಕೇಜ್ರಿವಾಲ್ ಅವರು 2014ರಲ್ಲಿ ಸಂಪುಟದ ಸಹೊದ್ಯೋಗಿಗಳೊಂದಿಗೆ ದೆಹಲಿಯಲ್ಲಿ ಧರಣಿ ಕುಳಿತಿದ್ದರು.

ಕೇಜ್ರಿವಾಲ್‌ ನಡೆಯನ್ನು ಟೀಕಿಸಿದ್ದ ಬಿಜೆಪಿ, ‘ಸಚಿವಾಲಯವನ್ನು ಬೀದಿಗೆ ತಂದು ದಿಲ್ಲಿಯಲ್ಲಿ ಅರಾಜಕತೆ ಸೃಷ್ಟಿಸಿದ್ದಾರೆ’ ಎಂದಿತ್ತು. ಬಿಜೆಪಿ ಟೀಕೆಗೆ ತಿರುಗೇಟು ನೀಡಿದ್ದ ಕೇಜ್ರಿವಾಲ್‌ ‘ಹೌದು. ನಾನು ಅರಾಜಕತಾವಾದಿಯೇ’ ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT