ಭೀಮಾ ಕೊರೆಗಾಂವ್ ಹಿಂಸಾಚಾರ: 8 ಜನರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದ ಎನ್ಐಎ

ಮುಂಬೈ: ಭೀಮಾ ಕೊರೆಗಾಂವ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಸಾಮಾಜಿಕ ಕಾರ್ಯಕರ್ತ ಗೌತಮ್ ನವಲಖಾ ಮತ್ತು ದೆಹಲಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಹನಿ ಬಾಬು ಸೇರಿದಂತೆ 8 ಜನರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭೀಮಾ ಕೋರೆಗಾಂವ್ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ್ದಾರೆ ಎನ್ನುವ ಆರೋಪದ ಮೇಲೆ ಹನಿ ಬಾಬು, ಗೌತಮ್ ನವಲಖಾ, ಬುಡಕಟ್ಟು ಮುಖಂಡ ಮತ್ತು ಮಾನವ ಹಕ್ಕುಗಳ ಹೋರಾಟಗಾರ ಫಾದರ್ ಸ್ಟ್ಯಾನ್ ಸ್ವಾಮಿ, ಗೋವಾ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ಪ್ರಾಧ್ಯಾಪಕ ಆನಂದ್ ತೇಲ್ತುಂಬ್ಡೆ, ಜ್ಯೋತಿ ಜಗ್ತಾಪ್, ಸಾಗರ್ ಗೋರ್ಖೆ ಮತ್ತು ಭೀಮಾ ಕೊರೆಗಾಂವ್ ಶೌರ್ಯ ದಿನ್ ಪ್ರೇರಣಾ ಅಭಿಯಾನದ ತಂಡದ ಕಾರ್ಯಕರ್ತರಾದ ರಮೇಶ್ ಗೈಚೋರ್ ಅವರ ವಿರುದ್ಧ ಎನ್ಐಎ ಚಾರ್ಜ್ ಶೀಟ್ ಸಲ್ಲಿಸಿದೆ.
ಎನ್‌ಐಎ ವಕ್ತಾರೆ ಮತ್ತು ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ ಸೋನಿಯಾ ನಾರಂಗ್, ಚಾರ್ಜ್‌ಶೀಟ್ ಅನ್ನು ಇಲ್ಲಿನ ಗೊತ್ತುಪಡಿಸಿದ ವಿಶೇಷ ನ್ಯಾಯಾಲಯದ ಮುಂದೆ ಸಲ್ಲಿಸಲಾಗಿದೆ. ತನಿಖೆಯ ವೇಳೆ ಎಂಟು ಜನರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
2018ರ ಜನವರಿ 1ರಂದು ಪುಣೆ ಸಮೀಪದ ಭೀಮಾ ಕೊರೆಗಾಂವ್ ಯುದ್ಧದ 200ನೇ ವರ್ಷದ ವಿಜಯೋತ್ಸವದ ವೇಳೆ ನಡೆದ ಹಿಂಸಾಚಾರದಲ್ಲಿ ಒಬ್ಬ ಮೃತಪಟ್ಟು, 30 ಪೊಲೀಸರು ಗಾಯಗೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಎಂಟು ಜನರ ಮೇಲೆ ಚಾರ್ಜ್ ಶೀಟ್ ಸಲ್ಲಿಸಲಾಗಿದೆ.
ಪ್ರಕರಣದಲ್ಲಿ ಮಿಲಿಂದ್ ತೇಲ್ತುಂಬ್ಡೆ ಎಂಬಾತನನ್ನು ಕೂಡ ಆರೋಪಿಯೆಂದು ಎನ್‌ಐಎ ಹೆಸರಿಸಿದ್ದು, ಆತ ಪರಾರಿಯಾಗಿದ್ದಾನೆ. ಈ ವರ್ಷದ ಜನವರಿ 24 ರಂದು ಎನ್‌ಐಎ ಈ ಪ್ರಕರಣದ ವಿಚಾರಣೆಯನ್ನು ಕೈಗೊಂಡಿತ್ತು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.