ಶುಕ್ರವಾರ, ಜನವರಿ 21, 2022
29 °C

ಭಯೋತ್ಪಾದನಾ ಚಟುವಟಿಕೆಗೆ ಹಣ: ಎನ್ಐಎ ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರೀನಗರ: ಭಯೋತ್ಪಾದನಾ ಚಟುವಟಿಕೆಗೆ ಹಣ ಒದಗಿಸಿದ ಆರೋಪ ಎದುರಿಸುತ್ತಿರುವ ಇಲ್ಲಿನ ಮಾನವ ಹಕ್ಕುಗಳ ಕಾರ್ಯಕರ್ತ ಖುರಾಂ ಪರ್ವೇಜ್‌ ಅವರ ನಿವಾಸ ಹಾಗೂ ಕಚೇರಿಯ ಮೇಲೆ ಸೋಮವಾರ ರಾಷ್ಟ್ರೀಯ ತನಿಖಾ ದಳ( ಎನ್‌ಐಎ) ದಾಳಿ ನಡೆಸಿದೆ.

ಸೋಮವಾರ ಮುಂಜಾನೆ 9ಗಂಟೆ ಸುಮಾರಿಗೆ ಪೊಲೀಸರು ಹಾಗೂ ಅರೆ ಸೇನಾಪಡೆಯ ಬಿಗಿಭದ್ರತೆಯೊಂದಿಗೆ ಶ್ರೀನಗರದ ಸೋನ್ವಾರ್‌ನಲ್ಲಿ ಖುರಾಂ ಪರ್ವೇಜ್‌ ಅವರ ನಿವಾಸ ಹಾಗೂ ಅಮಿರ ಕದಲ್‌ ಬಳಿಯ ಅವರ ಕಚೇರಿ ಮೇಲೆ ದಾಳಿ ನಡೆಸಿ ಶೋಧ ಕಾರ್ಯ ನಡೆಸಿದೆ.

ಕಳೆದ ವರ್ಷದ ಅಕ್ಟೋಬರ್‌ 28ರಂದು ಖುರಾಂ ಪರ್ವೇಜ್‌ ಅವರ ನಿವಾಸ ಹಾಗೂ ಕಚೇರಿ, ಪರ್ವೇಜ್‌ ಅವರ ನಿಕಟವರ್ತಿಗಳಾದ ಪತ್ರಕರ್ತ ಪರ್ವೇಜ್‌ ಬುಖಾರಿ, ಸ್ವಾತಿ ಶೇಷಾದ್ರಿ, ಅಥ್ರೂಟ್‌ ಸ್ವಯಂ ಸೇವಾ ಸಂಸ್ಥೆಯ ಪ್ರವೀಣ ಅಹಂಗೀರ್‌, ಗ್ರೇಟರ್‌ ಕಾಶ್ಮೀರ ಟ್ರಸ್ಟ್‌ನ ಕಚೇರಿ ಮೇಲೆ ದಾಳಿ ನಡೆಸಲಾಗಿತ್ತು. ಈ ವೇಳೆ ಎಲ್ಗಾರ್‌ ಪರಿಷದ್‌ ಪ್ರಕರಣದಲ್ಲಿ ಜೈಲಿನಲ್ಲಿರುವ ಸಾಮಾಜಿಕ ಕಾರ್ಯಕರ್ತ ಗೌತಮ್‌ ನವಲಂಖಾ ಅವರೊಂದಿಗೆ ಖುರಾಂ ಪರ್ವೇಜ್‌ ಅವರಿಗೆ ಸಂಪರ್ಕ ಇರುವುದು ಕಂಡು ಬಂದ ಹಿನ್ನೆಲೆಯಲ್ಲಿ ಮತ್ತೆ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಜಮ್ಮು ಮತ್ತು ಕಾಶ್ಮೀರದ ನಾಗರಿಕ ಒಕ್ಕೂಟದ ಮುಖ್ಯಸ್ಥರಾಗಿರುವ ಖುರಾಂ ಪರ್ವೇಜ್‌, ಪತ್ರಕರ್ತ ಪರ್ವೇಜ್‌ ಬುಖಾರಿ, ಅಥ್ರೂಟ್‌ ಸ್ವಯಂ ಸೇವಾ ಸಂಸ್ಥೆ ವಿವಿಧ ಮೂಲಗಳಿಂದ ದೇಣಿಗೆಯನ್ನು ಪಡೆದು ಅದನ್ನು ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ಚಟುವಟಿಕೆಗಳಿಗೆ ನೀಡುತ್ತಿದೆ ಎಂದು ಎನ್‌ಐಎ ಆರೋಪಿಸಿದ್ದು, ಪಾಕಿಸ್ತಾನ, ಯುರೋಪ್‌ನ ರಾಷ್ಟ್ರಗಳು, ಈಸ್ಟ್‌ ಟೈಮೊರ್‌, ಫಿಜಿ ದೇಶಗಳಿಂದ ದೇಣಿಗೆ ಪಡೆದು ಜಮ್ಮು ಮತ್ತು ಕಾಶ್ಮೀರದಲ್ಲಿ ಎನ್‌ಜಿಒಗಳ ಮೂಲಕ ಉಗ್ರರಿಗೆ ಹಣ ಒದಗಿಸಲಾಗುತ್ತಿದೆ ಎಂದು ಎನ್ಐಎ ಹೇಳಿದೆ.

ಭಯೋತ್ಪಾದನಾ ಚಟುವಟಿಕೆಗಳಿಗೆ ಹಣ ಒದಗಿಸುತ್ತಿರುವ ಹಾಗೂ ಆತ್ಮಾಹುತಿ ದಾಳಿ ಪ್ರಕರಣ ಸಂಬಂಧ 2017ರಿಂದ ಕಾಶ್ಮೀರದಲ್ಲಿ ಎನ್‌ಐಎ ನಿರಂತರವಾಗಿ ದಾಳಿ ನಡೆಸುತ್ತಿದ್ದು, ಈ ಸಂಬಂಧ ಹಲವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು