ಮಂಗಳವಾರ, ಮಾರ್ಚ್ 2, 2021
23 °C

ನಾವೀನ್ಯ ಸೂಚ್ಯಂಕ: ಸತತ ಎರಡನೇ ವರ್ಷ ಕರ್ನಾಟಕ ಪ್ರಥಮ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ನೀತಿ ಆಯೋಗವು ಬುಧವಾರ ಎರಡನೇ ನಾವೀನ್ಯ ಸೂಚ್ಯಂಕವನ್ನು ಬಿಡುಗಡೆಗೊಳಿಸಿದ್ದು, ಸತತ ಎರಡನೇ ವರ್ಷವೂ ಕರ್ನಾಟಕ ಪ್ರಥಮ ಸ್ಥಾನ ಪಡೆದಿದೆ. ನಂತರದ ಸ್ಥಾನಗಳಲ್ಲಿ ಮಹಾರಾಷ್ಟ್ರ, ತಮಿಳುನಾಡು, ತೆಲಂಗಾಣ ಹಾಗೂ ಕೇರಳವಿದೆ.

ಜಾಗತಿಕ ನಾವೀನ್ಯ ಸೂಚ್ಯಂಕದ ಆಧಾರದಲ್ಲಿ ಅಭಿವೃದ್ಧಿಪಡಿಸಿರುವ ಈ ಸೂಚ್ಯಂಕವನ್ನು ಆಯೋಗದ ಉಪಾಧ್ಯಕ್ಷ ರಾಜೀವ್‌ ಕುಮಾರ್‌ ಹಾಗೂ ಸಿಇಒ ಅಮಿತಾಬ್‌ ಕಾಂತ್‌ ಬಿಡುಗಡೆಗೊಳಿಸಿದರು.

ಜಾರ್ಖಂಡ್‌, ಛತ್ತೀಸಗಡ ಹಾಗೂ ಬಿಹಾರ ಸೂಚ್ಯಂಕದದಲ್ಲಿ ಕೊನೆಯ ಸ್ಥಾನಗಳಲ್ಲಿವೆ. ಕೇಂದ್ರಾಡಳಿತ ಪ್ರದೇಶಗಳ ಪೈಕಿ ದೆಹಲಿ ಮೊದಲ ಸ್ಥಾನ ಪಡೆದಿದ್ದು, ಈಶಾನ್ಯ ರಾಷ್ಟ್ರಗಳ ವಿಭಾಗದಲ್ಲಿ ಹಿಮಾಚಲ ಪ್ರದೇಶವು ಪ್ರಥಮ ಸ್ಥಾನದಲ್ಲಿದೆ.

ದಕ್ಷಿಣ ರಾಜ್ಯಗಳ ಪಾರುಪತ್ಯ: ‘ಪ್ರಮುಖ ರಾಜ್ಯಗಳ ಪೈಕಿ, ಸರಾಸರಿ ನಾವೀನ್ಯ ಅಂಕವು 25.35ರಷ್ಟಿದೆ. 42.5 ಅಂಕ ಪಡೆದ ಕರ್ನಾಟಕವು ಮೊದಲ ಸ್ಥಾನದಲ್ಲಿದ್ದು, ಹೆಚ್ಚಿನ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ರಫ್ತು, ವಿದೇಶಿ ನೇರ ಬಂಡವಾಳ ಹೂಡಿಕೆಯು ಏರಿಕೆಯಾಗಿರುವುದೂ ಇಲ್ಲಿ ಆವಿಷ್ಕಾರ ಸಾಮರ್ಥ್ಯ ಹೆಚ್ಚಲು ಕಾರಣ. ಮೊದಲ ಐದು ಸ್ಥಾನಗಳ ಪೈಕಿ ನಾಲ್ಕು ಸ್ಥಾನವನ್ನು ದಕ್ಷಿಣದ ರಾಜ್ಯಗಳೇ ಪಡೆದಿವೆ’ ಎಂದು ಭಾರತೀಯ ನಾವೀನ್ಯ ಸೂಚ್ಯಂಕ–2020ರಲ್ಲಿ ಉಲ್ಲೇಖಿಸಲಾಗಿದೆ.

ಎರಡನೇ ರ್‍ಯಾಂಕ್‌ನಲ್ಲಿರುವ ಮಹಾರಾಷ್ಟ್ರವು 38 ಅಂಕ ಪಡೆದಿದ್ದು, 14.5 ಅಂಕ ಪಡೆದಿರುವ ಬಿಹಾರ ಕೊನೆಯ ಸ್ಥಾನದಲ್ಲಿದೆ.

ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳನ್ನು, 17 ಪ್ರಮುಖ ರಾಜ್ಯಗಳು, 10 ಈಶಾನ್ಯ ಹಾಗೂ ಗುಡ್ಡಗಾಡು ರಾಜ್ಯಗಳು ಮತ್ತು 9 ನಗರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿ, ಅಲ್ಲಿನ ಆವಿಷ್ಕಾರಗಳನ್ನು ಪರಿಗಣಿಸಿ ಅಂಕ ನೀಡಲಾಗುತ್ತಿದೆ. ಈಶಾನ್ಯ ಹಾಗೂ ಗುಡ್ಡಗಾಡು ರಾಜ್ಯಗಳ ಸರಾಸರಿ ನಾವೀನ್ಯ ಅಂಕವು 17.89 ಆಗಿದ್ದು, ಹಿಮಾಚಲ ಪ್ರದೇಶವು 25 ಅಂಕ ಪಡೆದಿದೆ. ನಂತರದ ಸ್ಥಾನದಲ್ಲಿ ಕ್ರಮವಾಗಿ ಮಣಿಪುರ (22.77) ಹಾಗೂ ಸಿಕ್ಕಿಂ (2228) ಇದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು