ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25ರಂದು ತೃತೀಯ ರಂಗದ ಸಮಾಗಮ: ದೇವೇಗೌಡ, ಮುಲಾಯಂ, ನಿತೀಶ್‌ ಒಂದೇ ವೇದಿಕೆಗೆ

Last Updated 7 ಸೆಪ್ಟೆಂಬರ್ 2021, 14:35 IST
ಅಕ್ಷರ ಗಾತ್ರ

ನವದೆಹಲಿ: ಮಾಜಿ ಉಪ ಪ್ರಧಾನಿ ದೇವಿಲಾಲ್‌ ಅವರ ಜನ್ಮ ದಿನಾಚರಣೆ ಅಂಗವಾಗಿ ಭಾರತೀಯ ಲೋಕದಳದ(ಐಎನ್‌ಎಲ್‌ಡಿ) ಓಂ ಪ್ರಕಾಶ್‌ ಚೌಟಾಲ ಅವರು ಸೆ. 25ರಂದು ಬೃಹತ್‌ ಸಮಾವೇಶ ಸಂಘಟಿಸಿದ್ದು, ಅದರಲ್ಲಿ ತೃತೀಯ ರಂಗದ ನಾಯಕರಾದ ಮಾಜಿ ಪ್ರಧಾನಿ, ಜೆಡಿಎಸ್‌ ವರಿಷ್ಠ ಎಚ್‌.ಡಿ ದೇವೇಗೌಡ, ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್‌ ಯಾದವ್‌ಭಾಗವಹಿಸಲಿದ್ದಾರೆ. ಜೊತೆಗೆ,ಬಿಹಾರ ಮುಖ್ಯಮಂತ್ರಿ–ಜೆಡಿಯು ನಾಯಕ ನಿತೀಶ್‌ ಕುಮಾರ್‌ ಅವರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಎನ್‌ಸಿಪಿ ನಾಯಕ ಶರದ್ ಪವಾರ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ–ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿ, ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ ಮತ್ತು ಆರ್‌ಎಲ್‌ಡಿ ನಾಯಕ ಜಯಂತ್ ಚೌಧರಿ ಅವರನ್ನು ಹರಿಯಾಣದ ಜಿಂದ್‌ನಲ್ಲಿ ನಡೆಯಲಿರುವ ಬೃಹತ್ ರಾಜಕೀಯ ಸಮಾವೇಶಕ್ಕೆ ಆಹ್ವಾನಿಸಲಾಗಿದೆ. ಸಮಾವೇಶಕ್ಕೆ ಹಾಜರಾಗುವ ಕುರಿತು ನಾಯಕರ ದೃಢೀಕರಣವನ್ನು ನಿರೀಕ್ಷಿಸಲಾಗುತ್ತಿದೆ ಎಂದು ಐಎನ್‌ಎಲ್‌ಡಿ ನಾಯಕ ಅಭಯ್ ಚೌಟಾಲಾ ಪಿಟಿಐಗೆ ತಿಳಿಸಿದರು.

ಜೆಡಿ (ಎಸ್) ವರಿಷ್ಠ ದೇವೇಗೌಡ, ಎಸ್‌ಪಿ ನಾಯಕ ಮುಲಾಯಂ ಸಿಂಗ್ ಯಾದವ್, ನಿತೀಶ್ ಕುಮಾರ್ ಮತ್ತು ಬಾದಲ್ ಅವರು ದೇವಿ ಲಾಲ್ ಅವರ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿರುವ 'ಸಮ್ಮಾನ್ ಸಮರೋಹ್'ಗೆ ಹಾಜರಾಗುವುದಾಗಿ ಖಚಿತಪಡಿಸಿದ್ದಾರೆ ಎಂದು ಅವರು ಹೇಳಿದರು.

ಬಿಜೆಪಿ, ಕಾಂಗ್ರೆಸ್ಸೇತರ ಪಕ್ಷಗಳ ಸಮಾನ ಮನಸ್ಕ ನಾಯಕರು ಜಿಂದ್‌ ವೇದಿಕೆಯಲ್ಲಿ ಒಟ್ಟಿಗೆ ಸೇರಲಿದ್ದಾರೆ. ಜನರ ಸಮಸ್ಯೆಗಳು, ವಿಶೇಷವಾಗಿ ರೈತರ ಸಮಸ್ಯೆಗಳನ್ನು ಸಮಾವೇಶದಲ್ಲಿ ಈ ನಾಯಕರು ಪ್ರಸ್ತಾಪಿಸಲಿದ್ದಾರೆ ಎಂದು ಅಭಯ್ ಚೌಟಾಲ ಹೇಳಿದರು.

ಜನರು ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಪರ್ಯಾಯವಾದ ಶಕ್ತಿಯನ್ನು ಅರಸುತ್ತಿದ್ದಾರೆ ಎಂದು ಅವರು ಹೇಳಿದರು.

‘ದೇಶದ ಮತ್ತು ಜನರ ಒಟ್ಟಾರೆ ಕಲ್ಯಾಣಕ್ಕಾಗಿ ತೃತೀಯ ರಂಗವನ್ನು ರೂಪಿಸುವುದೇ ಈ ಎಲ್ಲ ನಾಯಕರನ್ನು ಒಟ್ಟಿಗೆ ಕರೆತರುತ್ತಿರುವುದರ ಗುರಿಯಾಗಿದೆ,‘ ಎಂದು ಅವರು ತಿಳಿಸಿದರು.

ಈ ಕುರಿತು ಮಾತನಾಡಿರುವ ಐಎನ್‌ಎಲ್‌ಡಿ ವಕ್ತಾರ ರಾಕೇಶ್ ಸಿಹಾಗ್, ‘ಓಂ ಪ್ರಕಾಶ್ ಚೌಟಾಲಾ ಅವರು ದೇವೇಗೌಡ ಮತ್ತು ಮುಲಾಯಂ ಸಿಂಗ್ ಯಾದವ್ ಅವರನ್ನು ಸ್ವತಃ ಭೇಟಿಯಾಗಿ ಅವರನ್ನು ಸಮಾವೇಶಕ್ಕೆ ಆಹ್ವಾನಿಸಿದ್ದಾರೆ,‘ ಎಂದು ಹೇಳಿದರು.

ಜುಲೈ 2 ರಂದು ದೆಹಲಿಯ ತಿಹಾರ್ ಜೈಲಿನಿಂದ ಬಿಡುಗಡೆಯಾಗಿದ್ದ ಓಂ ಪ್ರಕಾಶ್ ಚೌಟಾಲಾ(86) ರಾಷ್ಟ್ರಮಟ್ಟದಲ್ಲಿ ‘ತೃತೀಯ ರಂಗ’ವನ್ನು ಸಂಘಟಿಸಲು ದೇಶದ ವಿರೋಧ ಪಕ್ಷದ ನಾಯಕರನ್ನು ಸಂಪರ್ಕಿಸುವುದಾಗಿ ಘೋಷಿಸಿದ್ದರು.

ಹರಿಯಾಣದ ಮಾಜಿ ಮುಖ್ಯಮಂತ್ರಿಯಾದ ಓಂ ಪ್ರಕಾಶ್‌ ಚೌಟಾಲ, ನೇಮಕಾತಿ ಹಗರಣದಲ್ಲಿ 10 ವರ್ಷಗಳ ಶಿಕ್ಷೆಯನ್ನು ಅನುಭವಿಸಿದ್ದರು‌.

ಸದ್ಯ ಐಎನ್‌ಎಲ್‌ಡಿ ಆಹ್ವಾನಿಸಿರುವ ಪಕ್ಷಗಳಲ್ಲಿ ಕೆಲವು ಕಾಂಗ್ರೆಸ್ ಜೊತೆಗೂ, ಕೆಲವು ಬಿಜೆಪಿಯೊಂದಿಗೂ ಮೈತ್ರಿ ಮಾಡಿಕೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT