ಬುಧವಾರ, ನವೆಂಬರ್ 25, 2020
19 °C
ಬಿಹಾರ ವಿಧಾನಸಭಾ ಚುನಾವಣೆ: ಕೊನೆಯ ಹಂತದ ಪ್ರಚಾರ ಅಂತ್ಯ

ಬಿಹಾರ ಚುನಾವಣೆ| ಯೋಗಿ ಹೇಳಿಕೆ ಅಸಂಬದ್ಧ ಎಂದ ನಿತೀಶ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪಟ್ನಾ: ‘ಬಿಹಾರದಲ್ಲಿ ಎನ್‌ಡಿಎ ಅಧಿಕಾರಕ್ಕೆ ಮರಳಿದರೆ ನುಸುಳುಕೋರರನ್ನು ಹೊರಗಟ್ಟಲಾಗುವುದು’ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ನೀಡಿದ ಹೇಳಿಕೆಯ ಬಗ್ಗೆ ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. 

‘ಇಂತಹ ದುರುದ್ದೇಶಪೂರಿತ ವದಂತಿಗಳನ್ನು ಯಾರು ಹರಡುತ್ತಿ ದ್ದಾರೆ? ಎಂತಹ ಅಸಂಬದ್ಧ ಮಾತು ಇದು’ ಎಂದು ನಿತೀಶ್‌ ಪ್ರಶ್ನಿಸಿದ್ದಾರೆ. ಮೂರನೇ ಹಂತದಲ್ಲಿ ಶನಿವಾರ ಮತದಾನ ನಡೆಯಲಿರುವ ಸೀಮಾಂಚಲ ಪ್ರದೇಶದ ಅರಾರಿಯಾ ಮತ್ತು ಕಿಶನ್‌ ಗಂಜ್‌ನಲ್ಲಿ ಅವರು ಚುನಾವಣಾ ಪ್ರಚಾರ ನಡೆಸಿದರು. ಆದರೆ, ಯೋಗಿ ಹೆಸರನ್ನು ನಿತೀಶ್‌  ಉಲ್ಲೇಖಿಸಲಿಲ್ಲ. 

‘ಇಲ್ಲಿ ನೆಲೆಸಿರುವ ಜನರನ್ನು ಹೊರಗಟ್ಟುವ ಧಾರ್ಷ್ಯ ಯಾರಿಗಿದೆ? ಇಲ್ಲಿರುವ ಎಲ್ಲರೂ ಭಾರತೀಯರೇ. ಅವರು ಇಲ್ಲಿಯೇ ಇರಲಿದ್ದಾರೆ ಎಂದು ಅವರು ಹೇಳಿದರು. ಅರಾರಿಯಾ, ಕಿಶನ್‌ಗಂಜ್‌ ಮತ್ತು ಕತಿಹಾರ್‌ ಜಿಲ್ಲೆಗಳಲ್ಲಿ ಅಲ್ಪಸಂಖ್ಯಾತರ ಜನಸಂಖ್ಯೆಯು ಶೇ 50ರಿಂದ 70ರಷ್ಟಿದೆ. ಅಲ್ಪಸಂಖ್ಯಾತರ ಪ್ರಾಬಲ್ಯದ ಈ ಜಿಲ್ಲೆಗಳಲ್ಲಿ ಶನಿವಾರ ಮತದಾನ ನಡೆಯಲಿದೆ. ಇಲ್ಲಿ, ಅಸಾದುದ್ದೀನ್‌ ಒವೈಸಿ ನೇತೃತ್ವದ ಎಐಎಂಐಎಂ ಅಭ್ಯರ್ಥಿಗಳು ಕೂಡ ಕಣದಲ್ಲಿದ್ದಾರೆ. 

ಅಲ್ಪಸಂಖ್ಯಾತರ ಮನದಲ್ಲಿರುವ ಅನುಮಾನಗಳನ್ನು ಪರಿಹರಿಸುವ ಪ್ರಯತ್ನನ್ನು ನಿತೀಶ್‌ ಮಾಡಿದರು. ಸಮಾಜವನ್ನು ಒಡೆಯಲೇಬೇಕು ಎಂದು ಪಣತೊಟ್ಟಿರುವ ನಾಯಕರ ಮಾತಿಗೆ ಯಾರೂ ಬೆಲೆ ಕೊಡಬಾರದು ಎಂದು ಅವರು ಕೋರಿದರು. ಕೆಲವು ನಾಯಕರು ವಾತಾವರಣವನ್ನು ಕೆಡಿಸಲೇಬೇಕು ಎಂಬ ಹಟ ಹೊಂದಿದ್ದಾರೆ. ಹಾಗಾಗಿಯೇ ಅವರು ದುರುದ್ದೇಶಪೂರಿತ ಪ್ರಚಾರ ಮಾಡುತ್ತಿದ್ದಾರೆ ಎಂದು ಅವರು ಟೀಕಿಸಿದರು. 

ನಿತೀಶ್‌ ನೇತೃತ್ವದ ಜೆಡಿಯು, ಎನ್‌ಡಿಎಯ ಭಾಗವಾಗಿದೆ. ನಿತೀಶ್‌ ಅವರು ತಮ್ಮ ಭಾಷಣಗಳಲ್ಲಿ ಮುಸ್ಲಿಮರಿಗೆ ಸಂಬಂಧಿಸಿ ಎಚ್ಚರಿಕೆಯಿಂದ ಮಾತನಾಡುತ್ತಿದ್ದಾರೆ. ಮುಸ್ಲಿಂ ಸಮುದಾಯವನ್ನು ತಮ್ಮೆಡೆಗೆ ಸೆಳೆಯುವ ಪ್ರಯತ್ನವನ್ನೂ ಮಾಡುತ್ತಿದ್ದಾರೆ. ರಾಜ್ಯದ ಮತದಾರರಲ್ಲಿ ಮುಸ್ಲಿಮರ ಜನಸಂಖ್ಯೆ ಶೆ 17ರಷ್ಟಿದೆ. ಈ ಸಮುದಾಯದಲ್ಲಿ ವಿಶ್ವಾಸ ಮೂಡಿಸುವುದಕ್ಕಾಗಿ ನಿತೀಶ್‌ ಅವರು ತಮ್ಮ ಪಕ್ಷದಿಂದ 11 ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಿದ್ದಾರೆ. ಇದು ಜೆಡಿಯುನ ಒಟ್ಟು ಅಭ್ಯರ್ಥಿಗಳಲ್ಲಿ ಶೆ 10ರಷ್ಟಾಗುತ್ತದೆ. 

ನಿತೀಶ್‌ ಮುಂದೆ ಸವಾಲು

ಈ ಬಾರಿಯ ಚುನಾವಣೆ ನಿತೀಶ್‌ ಅವರಿಗೆ ಭಾರಿ ಸವಾಲಿನದ್ದಾಗಿದೆ. ಎನ್‌ಡಿಎಯ ಅಂಗ ಪಕ್ಷವಾಗಿದ್ದ ಎಲ್‌ಜೆಪಿ, ಜೆಡಿಯು ವಿರುದ್ಧ ಅಭ್ಯರ್ಥಿ
ಗಳನ್ನು ಕಣಕ್ಕಿಳಿಸಿದೆ. ಇದು ಜೆಡಿಯು ಅಭ್ಯರ್ಥಿಗಳ ಗೆಲುವಿನ ಸಾಧ್ಯತೆಯನ್ನು ಕಡಿಮೆ ಮಾಡಬಹುದು ಎನ್ನಲಾಗುತ್ತಿದೆ.

ಜೆಡಿಯುಗಿಂತ ಬಿಜೆಪಿ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದರೂ ನಿತೀಶ್‌ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹಲವು ಬಾರಿ ಹೇಳಿದ್ದಾರೆ. ಆದರೆ, ಬಿಜೆಪಿಯ ಹಲವು ಮುಖಂಡರು ನಿತೀಶ್‌ ಅವರ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ತಡೆ ಒಡ್ಡಲು ಯತ್ನಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಕೊನೆಯ ಹಂತದ ಚುನಾವಣೆಯಲ್ಲಿ ಇದು ಇನ್ನೂ ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ.

‘ಕೊನೆಯ ಚುನಾವಣೆ’

ಈ ಬಾರಿಯ ವಿಧಾನಸಭೆ ಚುನಾವಣೆಯೇ ತಮ್ಮ ಕೊನೆಯ ಚುನಾವಣೆ ಎಂದು ನಿತೀಶ್‌ ಕುಮಾರ್‌ ಹೇಳಿದ್ದಾರೆ.

ನಿತೀಶ್‌ ಅವರು ವಿಧಾನಸಭೆಗೆ ಸ್ಪರ್ಧಿಸಿಲ್ಲ. ಅವರು ವಿಧಾನಪರಿಷತ್‌ ಸದಸ್ಯರಾಗಿದ್ದಾರೆ. ಹಾಗಾಗಿ, ಮುಖ್ಯಮಂತ್ರಿ ಅಭ್ಯರ್ಥಿಯಾಗಿ ತಮ್ಮ ಕೊನೆಯ ಚುನಾವಣೆ ಎಂದು ಅವರು ಹೇಳಿದ್ದಾರೆ.

‘ನಿತೀಶ್‌ ಅವರು ನುಡಿದಂತೆ ಹಿಂದೆಯೂ ನಡೆದುಕೊಂಡಿಲ್ಲ. 2013ರಲ್ಲಿ ಬಿಜೆಪಿ ಜತೆಗಿನ ಸಂಬಂಧ ಕಡಿದುಕೊಂಡಿದ್ದ ಅವರು ‘ನಿರ್ನಾಮವಾದರೂ ಪರವಾಗಿಲ್ಲ, ಬಿಜೆಪಿ ಜತೆಗೆ ಕೈ ಜೋಡಿಸುವುದಿಲ್ಲ’ ಎಂದು ಹೇಳಿದ್ದರು. 2015ರಲ್ಲಿ ಮಹಾಮೈತ್ರಿಕೂಟಕ್ಕೆ ಸೇರಿದ್ದರು. ಆದರೆ, 2017ರಲ್ಲಿ ಆ ಕೂಟವನ್ನು ಬಿಟ್ಟು ಮತ್ತೆ ಬಿಜೆಪಿ ಜತೆ ಸೇರಿದ್ದರು. ಹಾಗಾಗಿ, ನಿತೀಶ್‌ ಅವರ ಮಾತನ್ನು ಯಾರೂ ನಂಬುವುದಿಲ್ಲ’ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಹೇಳಿದ್ದಾರೆ. ಆದರೆ, ನಿತೀಶ್‌ ನಿಕಟವರ್ತಿಗಳು ಅವರ ಹೇಳಿಕೆಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಈ ಚುನಾವಣೆಯ ಕೊನೆಯ ಪ್ರಚಾರ ಭಾಷಣ ಎಂದು ಅವರು ಹೇಳಿದ್ದರ ಅರ್ಥ ಎಂದಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು