ಮಂಗಳವಾರ, ಜನವರಿ 18, 2022
23 °C

ನಿತೀಶ್ ಕುಮಾರ್ ಗಾಂಜಾ ಸೇದುತ್ತಿದ್ದರು: ಆರ್‌ಜೆಡಿ ಶಾಸಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಟ್ನಾ: ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು 'ಗಾಂಜಾ ಸೇದುತ್ತಿದ್ದರು' ಎಂದು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಶಾಸಕ ರಾಜವಂಶಿ ಮಹತೊ ಆರೋಪಿಸಿದ್ದಾರೆ. 

ಬಿಹಾರದಲ್ಲಿ ಮದ್ಯಪಾನ ನಿಷೇಧ ಕಾನೂನನ್ನು ಯಶಸ್ವಿಯಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ನಿತೀಶ್ ಕುಮಾರ್ ಜನರಿಂದ ಪ್ರಮಾಣ ವಚನ ಪಡೆಯುವ ಅಭಿಯಾನ ಆರಂಭಿಸಿರುವ ಹೊತ್ತಿನಲ್ಲೇ  ಮಹತೊ ಅವರು ಈ ಹೇಳಿಕೆ ನೀಡಿದ್ದಾರೆ. 

‘ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಅಮಲು ಬರುವ ಗಾಂಜಾ ಸೇದುತ್ತಾರೆ. ರಾಜ್ಯದಲ್ಲಿ ಗಾಂಜಾ ಮಾರಾಟ ಮತ್ತು ಸೇವನೆಯನ್ನು ಸಹ ನಿಷೇಧಿಸಲಾಗಿದೆ. ಆದರೆ, ನಿತೀಶ್‌ ಏಕೆ ಗಾಂಜಾ ಚಟ ಬಿಡುತ್ತಿಲ್ಲ?‘ ಎಂದು ಬೇಗುಸರಾಯ್ ಜಿಲ್ಲೆಯ ಚೆರಿಯಾ ಬರಿಯಾರ್‌ಪುರ ವಿಧಾನಸಭಾ ಕ್ಷೇತ್ರದ ಶಾಸಕರೂ ಆದ  ಮಹತೋ ಪ್ರಶ್ನೆ ಮಾಡಿದ್ದಾರೆ. 

‘ಬಿಹಾರದಲ್ಲಿ ಮದ್ಯ ನಿಷೇಧವು ಕೇವಲ ಕಣ್ಣಿಗೆ ಕಾಣುವಂತಿದೆ. ಆದರೆ, ರಾಜ್ಯದ ಪ್ರತಿ ಹಳ್ಳಿ ಮತ್ತು ನಗರಗಳಲ್ಲಿ ಮದ್ಯ ಲಭ್ಯವಿದೆ. ನಿತೀಶ್ ಕುಮಾರ್ ಬಿಹಾರದ ಜನರನ್ನು ಮೂರ್ಖರನ್ನಾಗಿಸುತ್ತಿದ್ದಾರೆ’ ಎಂದು ಮಹತೊ ಹೇಳಿದರು.

‘ಬಿಹಾರದಲ್ಲಿ ಮದ್ಯವನ್ನು ನಿಷೇಧಿಸಿರುವುದೇ ಆದರೆ, ಮದ್ಯ ಕುಡಿಯದಂತೆ ಅವರು ಎಲ್ಲರಿಂದ ಪ್ರಮಾಣ ಏಕೆ ಮಾಡಿಸುತ್ತಿದ್ದಾರೆ. ಅದನ್ನು ಅವರೇ ಏಕೆ ಪಾಲಿಸುತ್ತಿಲ್ಲ,’ ಎಂದು ಅವರು ಗೇಲಿ ಮಾಡಿದ್ದಾರೆ. 

‘ಮಾಫಿಯಾಗಳು ಬಿಹಾರದಲ್ಲಿ ಬಡವರನ್ನು ದುರ್ಬಳಕೆ ಮಾಡಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿವೆ. ಅದರೆ,  ರಾಜ್ಯ ಪೊಲೀಸರು ಮಾತ್ರ ಬಡವರ ವಿರುದ್ಧ ದರ್ಪ ತೋರುತ್ತಿದ್ದಾರೆ. ನಿಜವಾದ ಮಾಫಿಯಾಗಳ ಮೇಲೆ ಅಲ್ಲ’ ಎಂದು ಮಹತೊ ಹೇಳಿದರು.

‘ನಿತೀಶ್ ಕುಮಾರ್ ಅವರು ಗಾಂಜಾ ಸೇವಿಸುವ ವಿಷಯ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡ್‌ ಆಗಿದೆ’ ಎಂದು ಆರ್‌ಜೆಡಿಯ ವಕ್ತಾರ ಚಿತ್ರಾಂಜನ ಗಗನ್‌ ಗೇಲಿ ಮಾಡಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು