ಮಂಗಳವಾರ, 30 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid Wave: ಲಾಕ್‌ಡೌನ್‌, ವಿಮಾನ ಸಂಚಾರ ನಿರ್ಬಂಧ ಸದ್ಯ ಅನಗತ್ಯ

Last Updated 24 ಡಿಸೆಂಬರ್ 2022, 21:45 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ ಸದ್ಯದಕೋವಿಡ್ ಪರಿಸ್ಥಿತಿಯನ್ನು ಗಮನಿಸಿದರೆ, ಲಾಕ್‌ಡೌನ್ ವಿಧಿಸುವ ಅಥವಾ ಅಂತರರಾಷ್ಟ್ರೀಯ ವಿಮಾನ ಸಂಚಾರವನ್ನು ನಿಷೇಧಿಸುವ ಅಗತ್ಯವಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹಲವು ದೇಶಗಳಲ್ಲಿ ಕೋವಿಡ್ ಪ್ರಕರಣಗಳು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ದೇಶದಲ್ಲಿ ಕಟ್ಟಿನಿಟ್ಟಿನ ನಿಗಾ ಅಗತ್ಯ ಎಂದು ಹೇಳಿದ್ದಾರೆ.

ಸೋಂಕು ಹಾಗೂ ಕೋವಿಡ್ ತಡೆ ಲಸಿಕೆಗಳಿಂದ ದೇಶದ ಜನರಲ್ಲಿ ‘ಹೈಬ್ರಿಡ್ ಇಮ್ಯುನಿಟಿ’ ಸಹಜವಾಗಿ (ರೋಗ ನಿರೋಧಕ ಶಕ್ತಿ) ಅಭಿವೃದ್ಧಿಯಾಗಿದೆ.ಹೀಗಾಗಿ ದೇಶದಲ್ಲಿ ಕೋವಿಡ್‌ನ ದೊಡ್ಡ ಅಲೆ ಸೃಷ್ಟಿಯಾಗುವ ಅಥವಾ ಗಂಭೀರ ಸ್ವರೂಪದ ಪ್ರಕರಣಗಳು ಉಲ್ಬಣವಾಗುವ ಸಾಧ್ಯತೆ ಇಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಒಟ್ಟಾರೆ ಕೋವಿಡ್ ಪ್ರಕರಣಗಳ ಏರಿಕೆ ಅಷ್ಟಾಗಿ ಇಲ್ಲ. ದೇಶದಲ್ಲಿ ಈಗ ಸಹಜಸ್ಥಿತಿ ಇದೆ. ಲಾಕ್‌ಡೌನ್ ಅಥವಾ ವಿಮಾನ ಸಂಚಾರ ನಿರ್ಬಂಧ ಸದ್ಯಕ್ಕೆಅಗತ್ಯವಿಲ್ಲ’ ಎಂದು ಏಮ್ಸ್ ಮಾಜಿ ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ಹೇಳಿದ್ದಾರೆ.

‘ಸೋಂಕು ಪ್ರಸರಣ ತಡೆಗೆ ವಿಮಾನಸಂಚಾರ ನಿರ್ಬಂಧಿಸುವುದು ಅಷ್ಟೊಂದು ಪರಿಣಾಮಕಾರಿ ವಿಧಾನ ಅಲ್ಲ ಎಂಬುದು ಸ್ಪಷ್ಟವಾಗಿದೆ. ಮೇಲಾಗಿ, ಚೀನಾದಲ್ಲಿ ಪ್ರಕರಣ ಹೆಚ್ಚಳಕ್ಕೆ ಕಾರಣವಾಗಿರುವ ಬಿಎಫ್‌.7 ಉಪತಳಿ ಈಗಾಗಲೇ ದೇಶದಲ್ಲಿ ಕಂಡುಬಂದಿದೆ’ ಎಂದು ಅವರುಅಭಿಪ್ರಾಯಪಟ್ಟಿದ್ದಾರೆ.

ದೇಶದಲ್ಲಿ ಕೋವಿಡ್ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ರೋಗನಿರೋಧಕ ಶಕ್ತಿ ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ ಮಂಡಳಿಯ ಮುಖ್ಯಸ್ಥ ಡಾ. ಎನ್.ಕೆ. ಅರೋರಾ ಅಭಿಪ್ರಾಯಪಟ್ಟಿದ್ದಾರೆ.

201 ಹೊಸ ಪ್ರಕರಣ ಪತ್ತೆ: ದೇಶದಲ್ಲಿ ಕೋವಿಡ್‌ನ 201 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಸಕ್ರಿಯ ಸೋಂಕಿತರ ಸಂಖ್ಯೆ 3,397ಕ್ಕೆ ತಲುಪಿದೆ ಎಂದು ಕೇಂದ್ರ ಸರ್ಕಾರ ಶನಿವಾರ ತಿಳಿಸಿದೆ.

ಶನಿವಾರ ಬೆಳಿಗ್ಗೆ 8 ಗಂಟೆವರೆಗಿನ ಮಾಹಿತಿ ಪ್ರಕಾರ, 24 ಗಂಟೆ ಅವಧಿಯಲ್ಲಿ 1.36 ಲಕ್ಷ ಕೋವಿಡ್ ತಪಾಸಣೆ ನಡೆಸಲಾಗಿದೆ. ಕೇರಳದಲ್ಲಿ ಒಂದು ಸಾವು ಸಂಭವಿಸಿದ್ದು, ದೇಶದಲ್ಲಿ ಶೇ 0.15ರಷ್ಟು ಪಾಸಿಟಿವಿಟಿ ದರ ದಾಖಲಾಗಿದೆ.

ವಿಮಾನ ನಿಲ್ದಾಣಗಳಲ್ಲಿ ತಪಾಸಣೆ ಆರಂಭ

ಬೆಂಗಳೂರು, ದೆಹಲಿ, ಹೈದರಾಬಾದ್, ಮುಂಬೈ, ಚೆನ್ನೈ, ಅಹಮದಾಬಾದ್‌, ಪುಣೆ, ಇಂದೋರ್‌ ಹಾಗೂ ಗೋವಾದ ವಿಮಾನ ನಿಲ್ದಾಣಗಳಿಗೆ ವಿದೇಶದಿಂದ ಬಂದಿಳಿಯುವ ಆಯ್ದ ಕೆಲವು ಪ್ರಯಾಣಿಕರನ್ನು (ರ್‍ಯಾಂಡಮ್) ಶನಿವಾರದಿಂದ ತಪಾಸಣೆಗೆ ಒಳಪಡಿಸುವ ಪ್ರಕ್ರಿಯೆ ಶುರುವಾಗಿದೆ. ವಿದೇಶಗಳಿಂದ ಬರುವ ಶೇ 2ರಷ್ಟು ಪ್ರಯಾಣಿಕರನ್ನು ಕೋವಿಡ್ ಪತ್ತೆ ಪರೀಕ್ಷೆಗೆ ಒಳಪಡಿಸಬೇಕು ಎಂದು ಸರ್ಕಾರ ಮಾರ್ಗಸೂಚಿಯಲ್ಲಿ ತಿಳಿಸಿತ್ತು.

ಚೆನ್ನೈ ವಿಮಾನ ನಿಲ್ದಾಣಕ್ಕೆ ಶನಿವಾರ ಬಂದಿಳಿದ 37 ಪ್ರಯಾಣಿಕರನ್ನು ತಪಾಸಣೆ ನಡೆಸಲಾಯಿತು. ಕ್ವಾಲಾಲಂಪುರ, ದುಬೈ, ಕೊಲಂಬೊ ಮತ್ತು ಢಾಕಾದಿಂದ ಬಂದ ಶೇ 2ರಷ್ಟು ಪ್ರಯಾಣಿಕರನ್ನು ತಪಾಸಣೆ ನಡೆಸಲಾಯಿತು. ಯಾವ ಪ್ರಯಾಣಿಕರಲ್ಲೂ ಸೋಂಕು ಕಂಡುಬಂದಿಲ್ಲ.

ದೇಶದ 29 ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಶುಕ್ರವಾರ 87,966 ಪ್ರಯಾಣಿಕರು ವಿವಿಧ ದೇಶಗಳಿಂದ ಬಂದಿದ್ದಾರೆ.

ಆಮ್ಲಜನಕ ಸಿಲಿಂಡರ್, ವೆಂಟಿಲೇಟರ್ ಸನ್ನದ್ಧ: ಕೇಂದ್ರ ಸೂಚನೆ

ಆಮ್ಲಜನಕ ಸಿಲಿಂಡರ್‌, ವೆಂಟಿಲೇಟರ್ ಮೊದಲಾದ ಜೀವರಕ್ಷಕ ಉಪಕರಣಗಳನ್ನು ಸನ್ನದ್ಧ ಸ್ಥಿತಿಯಲ್ಲಿಇರಿಸಿಕೊಳ್ಳುವಂತೆ ಎಲ್ಲ ರಾಜ್ಯಗಳು ಹಾಗೂಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಶನಿವಾರ ಸೂಚನೆ ನೀಡಿದೆ.

ಆಸ್ಪತ್ರೆಗಳಲ್ಲಿ ಆಮ್ಲಜನಕ ಉತ್ಪಾದನಾ ಘಟಕಗಳನ್ನು ಸಜ್ಜುಗೊಳಿಸಬೇಕು ಹಾಗೂ ಅವುಗಳ ಕಾರ್ಯಕ್ಷಮತೆಯನ್ನು ಪರೀಕ್ಷಿಸಿ ಖಚಿತಪಡಿಸಿಕೊಳ್ಳಬೇಕು ಎಂದು ನಿರ್ದೇಶನ ನೀಡಿದೆ. ಆಮ್ಲಜನಕ ಸಿಲಿಂಡರ್‌ಗಳ ದಾಸ್ತಾನು, ಸಿಲಿಂಡರ್ ಭರ್ತಿ ಪ್ರಕ್ರಿಯೆ ಹಾಗೂ ಅವುಗಳ ಸರಬರಾಜಿಗೆ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ತಿಳಿಸಲಾಗಿದೆ.

ಒಂದು ವೇಳೆ ಪ್ರಕರಣಗಳು ಹೆಚ್ಚಳವಾದರೆ,ಪರಿಸ್ಥಿತಿಯನ್ನು ನಿಭಾಯಿಸುವ ದೃಷ್ಟಿಯಿಂದ ಎಲ್ಲ ರೀತಿಯ ವೈದ್ಯಕೀಯ ಮೂಲಸೌಕರ್ಯವನ್ನು ಕಾರ್ಯಾಚರಣೆಯ ಸ್ಥಿತಿಯಲ್ಲಿ ಇರಿಸಬೇಕು ಎಂದು ಆರೋಗ್ಯ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಮನೋಹರ್ ಅಗನಾನಿ ಅವರು ಸೂಚಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT