ನವದೆಹಲಿ: ‘ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರೀಸರ್ಚ್– ನ್ಯಾಷನಲ್ ಕ್ಯಾನ್ಸರ್ ರೆಜಿಸ್ಟ್ರಿ ಪ್ರೋಗ್ರಾಮ್ (ಐಎಂಸಿಆರ್– ಎನ್‌ಸಿಪಿಆರ್) ಪ್ರಕಾರ, 2022ರಲ್ಲಿ ಭಾರತದಲ್ಲಿ 14.6 ಲಕ್ಷ ಕ್ಯಾನ್ಸರ್ ಪ್ರಕರಣಗಳಿದ್ದು ಈ ಸಂಖ್ಯೆ 2025ಕ್ಕೆ 15.7 ಲಕ್ಷಕ್ಕೆ ಏರಲಿದೆ’ ಎಂದು ಕೇಂದ್ರ ಆರೋಗ್ಯ ಖಾತೆಯ ರಾಜ್ಯ ಸಚಿವೆ ಭಾರತಿ ಪ್ರವೀಣ್ ಪವಾರ್ ಅವರು ಸಂಸತ್ತಿನಲ್ಲಿ ಹೇಳಿದ್ದಾರೆ.
ಈ ಕುರಿತು ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ವಿವರಿಸಿದ ಭಾರತಿ ಅವರು, ‘ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಸಾಮಾನ್ಯ ಕ್ಯಾನ್ಸರ್‌ಗಳಂತಹ ಸಾಂಕ್ರಾಮಿಕವಲ್ಲದ ಕಾಯಿಲೆಗಳ (ಎನ್‌ಸಿಡಿಗಳು) ತಡೆಗಟ್ಟುವಿಕೆ, ನಿಯಂತ್ರಣ ಮತ್ತು ತಪಾಸಣೆಗಾಗಿ ಜನಸಂಖ್ಯೆ ಆಧಾರಿತ ಉಪಕ್ರಮವನ್ನು ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್‌ಎಚ್‌ಎಂ) ಅಡಿಯಲ್ಲಿ ಹಾಗೂ ಸಮಗ್ರ ಪ್ರಾಥಮಿಕ ಆರೋಗ್ಯ ರಕ್ಷಣೆಯ ಭಾಗವಾಗಿ ದೇಶದಾದ್ಯಂತ ಜಾರಿಗೆ ತರಲಾಗಿದೆ’ ಎಂದರು.
‘30 ವರ್ಷ ಮೇಲ್ಪಟ್ಟವರಿಗೆ ಬಾಯಿ, ಸ್ತನ ಮತ್ತು ಗಂಟಲಿಗೆ ಸಂಬಂಧಿಸಿದಂತೆ ಮೂರು ಸಾಮಾನ್ಯ ಕ್ಯಾನ್ಸರ್‌ಗಳ ತಪಾಸಣೆ ನಡೆಸಲಾಗುತ್ತದೆ. ಆಯುಷ್ಮಾನ್ ಭಾರತ್ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರ ಯೋಜನೆಯಡಿಯಲ್ಲಿ ಈ ಸಾಮಾನ್ಯ ಕ್ಯಾನ್ಸರ್‌ಗಳ ತಪಾಸಣೆಯು ಸೇವಾ ವಿತರಣೆಯ ಅವಿಭಾಜ್ಯ ಅಂಗವಾಗಿದೆ’ ಎಂದು ರಾಜ್ಯಸಭೆಯಲ್ಲಿ ಕೇಳಲಾದ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ್ದಾರೆ.
‘ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಎನ್‌ಎಚ್‌ಎಂ ಭಾಗವಾಗಿ ಕ್ಯಾನ್ಸರ್, ಮಧುಮೇಹ, ಹೃದಯಸಂಬಂಧಿ ಕಾಯಿಲೆಗಳು ಮತ್ತು ಪಾರ್ಶ್ವವಾಯು (ಎನ್‌ಪಿಸಿಡಿಸಿಎಸ್) ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕಾಗಿ ರಾಷ್ಟ್ರೀಯ ಕಾರ್ಯಕ್ರಮದ ಅಡಿಯಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ತಾಂತ್ರಿಕ ಮತ್ತು ಆರ್ಥಿಕ ಬೆಂಬಲವನ್ನು ಒದಗಿಸುತ್ತದೆ’ ಎಂದು ಅವರು ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.