ಸೋಮವಾರ, ಮೇ 23, 2022
21 °C

ಸೆ.14ರಿಂದ ಅ.1ರವರೆಗೆ ಮುಂಗಾರು ಅಧಿವೇಶನ; ಪ್ರಶ್ನೋತ್ತರ ಅವಧಿ ಇರುವುದಿಲ್ಲ

ಎಎನ್ಐ Updated:

ಅಕ್ಷರ ಗಾತ್ರ : | |

ಸಾಂದರ್ಭಿಕ ಚಿತ್ರ

ನವದೆಹಲಿ: ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಮುಂಗಾರು ಅಧಿವೇಶನದಲ್ಲಿ ಪ್ರಶ್ನೋತ್ತರ ಅವಧಿ ಮತ್ತು ಸಚಿವರಲ್ಲದ ಸದಸ್ಯರ ಮಂಡನೆಗಳಿಗೆ ಅವಕಾಶ ಇರುವುದಿಲ್ಲ ಎಂದು ರಾಜ್ಯಸಭಾ ಸಚಿವಾಲಯ ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಆದಾಗ್ಯೂ, ವೇಳಾಪಟ್ಟಿಯ ಪ್ರಕಾರವೇ ಶೂನ್ಯ ವೇಳೆ ಮತ್ತು ಇತರ ಪ್ರಕ್ರಿಯೆಗಳು ನಡೆಯುತ್ತವೆ. ಸಂಸತ್ತಿನ ಮುಂಗಾರು ಅಧಿವೇಶನವು ಸೆಪ್ಟೆಂಬರ್ 14 ರಿಂದ ಪ್ರಾರಂಭವಾಗಿ ಅಕ್ಟೋಬರ್ 1 ರಂದು ಮುಕ್ತಾಯಗೊಳ್ಳಲಿದೆ.

ಅಧಿವೇಶನಕ್ಕೆ ಹಾಜರಾಗುವವರು 72 ಗಂಟೆಗಳ ಒಳಗೆ ಕೋವಿಡ್-19ಗೆ ಪರೀಕ್ಷೆಗೆ ಒಳಪಡುವುದು ಸೇರಿದಂತೆ ಅಗತ್ಯವಾದ ಕೊರೊನಾ ವೈರಸ್ ಸೋಂಕು ನಿಯಂತ್ರಣದ ನಿಯಮಾವಳಿಗಳನ್ನು ಅನುಸರಿಸಬೇಕಾಗುತ್ತದೆ.

ಸರ್ಕಾರದ ಮೂಲಗಳು ಎಎನ್‌ಐ ಸುದ್ದಿಸಂಸ್ಥೆಗೆ ನೀಡಿರುವ ಮಾಹಿತಿ ಪ್ರಕಾರ, ಸಂಸತ್ತಿನ ಮುಂಗಾರು ಅಧಿವೇಶನವು ವಾರಾಂತ್ಯದಲ್ಲಿ ಸಹ ವಿರಾಮವಿಲ್ಲದೆ ಪ್ರತಿದಿನವೂ ನಡೆಯಲಿದೆ. ಉಭಯ ಸದನಗಳ ಕಲಾಪಗಳು ದಿನದ ಆಧಾರದಲ್ಲಿ ನಡೆಯಲಿದೆ. ಮೊದಲ ದಿನ (ಸೆ. 14) ಲೋಕಸಭೆಯು ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ರವರೆಗೆ ನಡೆಯಲಿದ್ದು, ರಾಜ್ಯಸಭಾ ಪ್ರಕ್ರಿಯೆಯು ಮಧ್ಯಾಹ್ನ 3 ರಿಂದ ಸಂಜೆ 7 ರವರೆಗೆ ನಡೆಯಲಿದೆ. ಸೆಪ್ಟೆಂಬರ್ 14ರ ನಂತರ ರಾಜ್ಯಸಭಾ ಕಲಾಪವು ಬೆಳಿಗ್ಗೆ 9 ರಿಂದ ಮಧ್ಯಾಹ್ನ 1ರವರೆಗೆ ಮತ್ತು ಲೋಕಸಭೆ ಕಲಾಪವು ಮಧ್ಯಾಹ್ನ 3 ರಿಂದ ಸಂಜೆ 7 ರವರೆಗೆ ನಿಗದಿಪಡಿಸಲಾಗಿದೆ.

ಸಂಸತ್ತಿನ ಉಭಯ ಸದನಗಳು ಪ್ರತಿದಿನ ನಾಲ್ಕು ಗಂಟೆಗಳು ಕಲಾಪ ಕೈಗೊಳ್ಳಬೇಕು ಮತ್ತು ಸಾಂಕ್ರಾಮಿಕ ರೋಗವನ್ನು ಗಮನದಲ್ಲಿಟ್ಟುಕೊಂಡು ಪ್ರತಿಯೊಂದು ಮುನ್ನೆಚ್ಚರಿಕೆ ಕ್ರಮಗಳನ್ನು ಸರ್ಕಾರ ಕೈಗೊಳ್ಳಲಿದೆ.

ಲೋಕಸಭಾ ಸ್ಪೀಕರ್ ಮತ್ತು ರಾಜ್ಯಸಭಾ ಅಧ್ಯಕ್ಷರು ಈಗಾಗಲೇ ಅಧಿಕಾರಿಗಳೊಂದಿಗೆ ಸಭೆಯನ್ನು ನಡೆಸಿ, ಆರೋಗ್ಯ ಸಚಿವಾಲಯದ ಅಧಿಕಾರಿಗಳ ಸಮ್ಮುಖ ಈ ಮುಂಗಾರು ಅಧಿವೇಶನದಲ್ಲಿ ಕೋವಿಡ್-19 ಮಾರ್ಗಸೂಚಿಗಳನ್ನು ಹೇಗೆ ಅನುಸರಿಸಬೇಕು ಎಂಬುದರ ಕುರಿತು ಸೂಚನೆಗಳನ್ನು ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು