ಭಾನುವಾರ, ಆಗಸ್ಟ್ 14, 2022
20 °C

ಸರ್ಕಾರ ರಚನೆ ಬಗ್ಗೆ ಶಿಂಧೆ ಜೊತೆ ಮಾತುಕತೆ ನಡೆದಿಲ್ಲ: ಮಹಾರಾಷ್ಟ್ರ ಬಿಜೆಪಿ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಮುಂಬೈ: ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ರಚನೆ ಸೇರಿದಂತೆ ಯಾವುದೇ ವಿಚಾರದ ಬಗ್ಗೆ ಹೇಳುವುದಕ್ಕೆ ಸದ್ಯ ಸೂಕ್ತ ಸಮಯವಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್ ಹೇಳಿರುವುದಾಗಿ ಎಎನ್‌ಐ ಟ್ವೀಟ್ ಮಾಡಿದೆ.

ಸರ್ಕಾರ ರಚನೆಗೆ ಏಕನಾಥ್ ಶಿಂಧೆ ಬಿಜೆಪಿಗಾಗಲಿ ಅಥವಾ ಬಿಜೆಪಿ ಏಕನಾಥ್ ಶಿಂಧೆಗಾಗಲಿ ಯಾವುದೇ ಪ್ರಸ್ತಾವನೆ ಕಳುಹಿಸಿಲ್ಲ ಎಂದು ಅವರು ಹೇಳಿದ್ದಾರೆ. ಈ ಬಗ್ಗೆ ಈಗ ಏನನ್ನೂ ಹೇಳಲು ಸಾಧ್ಯವಿಲ್ಲ. ನಾವು ಕಾದುನೋಡುವ ಕೆಲಸ ಮಾಡುತ್ತಿದ್ದೇವೆ. ರಾಜಕೀಯದಲ್ಲಿ ಯಾವುದೇ ಸಂದರ್ಭ ಏನು ಬೇಕಾದರೂ ಆಗಬಹುದು ಎಂದಿದ್ದಾರೆ.

ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣೆಯಲ್ಲಿ ನಾವು ಪಕ್ಷೇತರರು ಮತ್ತು ಸಣ್ಣ ಪಕ್ಷಗಳ ಬೆಂಬಲ ಪಡೆದಿದ್ದೆವು. ನಮ್ಮ ಮಾಹಿತಿ ಪ್ರಕಾರ ಏಕನಾಥ್ ಶಿಂದೆ ಮತ್ತು 35 ಶಾಸಕರು ರಾಜ್ಯ ಬಿಟ್ಟು ಬೇರೆಡೆಗೆ ತೆರಳಿದ್ದಾರೆ. ತಾಂತ್ರಿಕವಾಗಿ ಸದ್ಯ ಸರ್ಕಾರ ಬಹುಮತ ಕಳೆದುಕೊಂಡಿದೆ. ಆದರೆ, ವಾಸ್ತವವಾಗಿ ಬಹುಮತ ಕಳೆದುಕೊಳ್ಳಲು ಕೆಲ ಸಮಯ ಹಿಡಿಯುತ್ತದೆ ಎಂದು ಚಂದ್ರಕಾತ್ ಹೇಳಿದ್ದಾರೆ.

ಇದೇವೇಳೆ, ಅವಿಶ್ವಾಸ ನಿರ್ಣಯ ಮಂಡನೆಗೆ ವಿಶೇಷ ಅಧಿವೇಶನ ಕರೆಯುವಂತೆ ಒತ್ತಾಯಿಸುವ ಪರಿಸ್ಥಿತಿ ಸದ್ಯಕ್ಕೆ ಇಲ್ಲ. ಜುಲೈ 18ರಿಂದ ವಿಧಾನಸಭೆ ಅಧಿವೇಶನ ಆರಂಭವಾಗುತ್ತಿದ್ದು, ಅಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಪರಿಷತ್ ಚುನಾವಣೆಯೇ ಮೂಲ

ಮಹಾರಾಷ್ಟ್ರ ವಿಧಾನಪರಿಷತ್‌ಗೆ ಸೋಮವಾರ ನಡೆದ ಚುನಾವಣೆಯಲ್ಲಿ ‘ಮಹಾ ವಿಕಾಸ್ ಅಘಾಡಿ’ ಮೈತ್ರಿಕೂಟದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಚಂದ್ರಕಾಂತ್ ಹಂಡೊರೆಗೆ ಸೋಲಾಗಿತ್ತು. ಆಡಳಿತಾರೂಢ ಮೈತ್ರಿಕೂಟ 6 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಐವರು ಮಾತ್ರ ಜಯಗಳಿಸಿದ್ದರು. ಹೀಗಾಗಿ ಅಡ್ಡಮತದಾನವಾಗಿರುವ ಶಂಕೆ ವ್ಯಕ್ತವಾಗಿತ್ತು. ಬಿಜೆಪಿಯ ಎಲ್ಲ ಐವರು ಅಭ್ಯರ್ಥಿಗಳು ಜಯಗಳಿಸಿದ್ದರು.

ಅದರ ಬೆನ್ನಲ್ಲೇ ಶಿವಸೇನಾ ಶಾಸಕರು ಬಂಡೆದ್ದಿದ್ದಾರೆ.

ಸೂರತ್‌ನ ಹೋಟೆಲ್‌ವೊಂದರ 11 ಕೊಠಡಿಗಳನ್ನು ಸೋಮವಾರ ರಾತ್ರಿ 9.30ರಿಂದ 10 ಗಂಟೆಯ ನಡುವೆ ಕಾಯ್ದಿರಿಸಲಾಗಿದ್ದು, 11 ಶಾಸಕರು ಹೋಟೆಲ್ ತಲುಪಿದ್ದರು. ಮಹಾರಾಷ್ಟ್ರದ ನಗರಾಭಿವೃದ್ಧಿ ಸಚಿವ ಏಕನಾಥ್ ಶಿಂಧೆ ನೇತೃತ್ವದಲ್ಲಿ 14 ಶಾಸಕರ ತಂಡ ತಡರಾತ್ರಿ 1.30ರ ವೇಳೆಗೆ ಹೋಟೆಲ್ ತಲುಪಿತ್ತು ಎಂದು ಮೂಲಗಳು ತಿಳಿಸಿವೆ.

ಈ ಮಧ್ಯೆ, ಬಂಡಾಯದ ಬಾವುಟ ಹಾರಿಸಿರುವ ಏಕನಾಥ್ ಶಿಂಧೆ ಅವರನ್ನು ಶಿವಸೇನೆ ಶಾಸಕಾಂಗ ಪಕ್ಷದ ನಾಯಕನ ಸ್ಥಾನದಿಂದ ವಜಾ ಮಾಡಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು