ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ, ಜಿಲ್ಲಾ ಮಟ್ಟದ ಘಟಕ ಸ್ಥಾಪನೆಗೆ ಸೂಚನೆ

ಮಾನವ ಕಳ್ಳ ಸಾಗಾಟ ತಡೆಗೆ ಕಟ್ಟುನಿಟ್ಟಿನ ಕ್ರಮಕ್ಕೆ ಕೇಂದ್ರ ಸೂಚನೆ
Last Updated 2 ಡಿಸೆಂಬರ್ 2020, 22:40 IST
ಅಕ್ಷರ ಗಾತ್ರ

ನವದೆಹಲಿ: ಮಾನವ ಕಳ್ಳ ಸಾಗಾಟವನ್ನು ತಡೆಯುವ ಪ್ರಯತ್ನವನ್ನು ಕೇಂದ್ರ ಗೃಹ ಸಚಿವಾಲಯವು ಇನ್ನಷ್ಟು ತೀವ್ರಗೊಳಿಸಿದೆ. ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ತಕ್ಷಣವೇ ವಿಶೇಷ ಕಾರ್ಯಪಡೆ ರಚಿಸುವಂತೆ ರಾಜ್ಯಗಳಿಗೆ ಸೂಚನೆ ನೀಡಿದೆ. ಮಾನವ ಕಳ್ಳ ಸಾಗಾಣಿಕೆಯ ಪ್ರಯತ್ನ ತಡೆಯುವಲ್ಲಿ ಮಹಿಳೆಯರಿಗೆ ನೆರವು ನೀಡುವುದಕ್ಕಾಗಿ ಪೊಲೀಸ್‌ ಠಾಣೆಗಳಲ್ಲಿ ಮಹಿಳಾ ಸಹಾಯ ಕೇಂದ್ರ ಸ್ಥಾಪನೆಯನ್ನು ಕಡ್ಡಾಯಗೊಳಿಸಿದೆ.

ಮಾನವ ಕಳ್ಳ ಸಾಗಾಟದ ಸಮಸ್ಯೆಯನ್ನು ಸಮಗ್ರವಾಗಿ ಮತ್ತು ಸಶಕ್ತವಾಗಿ ಮಟ್ಟಹಾಕಲು ಮೂರು ಸ್ತರದ ವ್ಯವಸ್ಥೆ ಅಗತ್ಯವಿದೆ ಎಂದು ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಮತ್ತು ಪೊಲೀಸ್‌ ಮಹಾನಿರ್ದೇಶಕರಿಗೆ ಬರೆದ ಪತ್ರದಲ್ಲಿ ಹೇಳಲಾಗಿದೆ.

ರಾಜ್ಯ ಮಟ್ಟದಲ್ಲಿ ಮಾನವ ಕಳ್ಳಸಾಗಾಟ ತಡೆ ಬ್ಯೂರೊ (ಎಎಚ್‌ಟಿಬಿ) ಸ್ಥಾಪಿಸಬೇಕು. ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರ ನೇತೃತ್ವದ ಈ ಘಟಕವು ರಾಜ್ಯದಲ್ಲಿ ಕಳ್ಳ ಸಾಗಾಟ ತಡೆ ಚಟುವಟಿಕೆಗಳ ಉಸ್ತುವಾರಿ ಮತ್ತು ಸಮನ್ವಯದ ಕೆಲಸ ಮಾಡಬೇಕು. ಇತರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಜತೆಗಿನ ಸಮನ್ವಯದ ಕೆಲಸವನ್ನೂ ಈ ಘಟಕ ಮಾಡಬೇಕು ಎಂದು ಪತ್ರದಲ್ಲಿ ವಿವರಿಸಲಾಗಿದೆ.

ಜಿಲ್ಲೆಯೊಳಗಿನ ಮಾನವ ಕಳ್ಳಸಾಗಾಟ ತಡೆಗೆ ಜಿಲ್ಲಾ ಮಟ್ಟದಲ್ಲಿ ಮಾನವ ಕಳ್ಳಸಾಗಾಟ ತಡೆ ಘಟಕ (ಎಎಚ್‌ಟಿಯು) ಇರಬೇಕು. ಈ ಘಟಕವು ಎಎಚ್‌ಟಿಬಿಯ ಅಧೀನದಲ್ಲಿರುತ್ತದೆ. ಜಿಲ್ಲಾ ಮಟ್ಟದ ಘಟಕಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಥವಾ ಡಿವೈಎಸ್‌ಪಿ ಮುಖ್ಯಸ್ಥರಾಗಿರಬೇಕು.

ಪ್ರತಿ ಪೊಲೀಸ್‌ ಠಾಣೆಯಲ್ಲಿಯೂ ಮಹಿಳಾ ಸಹಾಯ ಕೇಂದ್ರವನ್ನು ಸ್ಥಾಪಿಸಬೇಕು. ಮಹಿಳೆಯರಿಗೆ ಕಳ್ಳಸಾಗಾಟದಿಂದ ರಕ್ಷಣೆ, ತಡೆ, ಸುರಕ್ಷತೆ ಮತ್ತು ಕಳ್ಳಸಾಗಾಟ ಪ್ರಕರಣಗಳ ತನಿಖೆಗೆ ಬೆಂಬಲ ಈ ಸಹಾಯ ಕೇಂದ್ರದ ಹೊಣೆ ಆಗಿರುತ್ತದೆ. ಇತರ ಪೊಲೀಸ್‌ ಠಾಣೆಗಳ ಜತೆಗೆ ಇಂತಹ ಪ್ರಕರಣಗಳ ಸಮನ್ವಯದ ಜವಾಬ್ದಾರಿಯೂ ಈ ಕೇಂದ್ರದ್ದಾಗಿರುತ್ತದೆ.

ಈ ಎಲ್ಲ ಘಟಕಗಳ ಸ್ಥಾಪನೆಯೊಂದಿಗೆ ಮಾನವ ಕಳ್ಳಸಾಗಾಟ ತಡೆಗೆ ಎಲ್ಲ ಹಂತಗಳಲ್ಲಿಯೂ ವ್ಯವಸ್ಥೆಯೊಂದು ಜಾರಿಗೆ ಬಂದಂತಾಗುತ್ತದೆ. ಈ ವ್ಯವಸ್ಥೆಯ ಮೂಲಕ ಮಾನವ ಕಳ್ಳ ಸಾಗಾಟವನ್ನು ಪರಿಣಾಮಕಾರಿಯಾಗಿ ತಡೆಯಬಹುದು ಎಂದು ಕೇಂದ್ರ ಗೃಹ ಸಚಿವಾಲಯದ ಉಪ ಕಾರ್ಯದರ್ಶಿ ಅರುಣ್‌ ಸೊಬ್ತಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT