ಬುಧವಾರ, ಮಾರ್ಚ್ 22, 2023
33 °C

ಜೋಶಿಮಠದಲ್ಲಿ ಸೂಕ್ಷ್ಮ ಭೂಕಂಪನ ವೀಕ್ಷಣಾ ವ್ಯವಸ್ಥೆ ಅಳವಡಿಕೆ: ಕೇಂದ್ರ ಸರ್ಕಾರ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ/ಡೆಹ್ರಾಡೂನ್‌: ಹಿಮಾಲಯ ಶ್ರೇಣಿಯ ಉತ್ತರಾಖಂಡದ ಮುಳುಗುತ್ತಿರುವ ಪಟ್ಟಣ ಜೋಶಿಮಠದಲ್ಲಿ ಸೂಕ್ಷ್ಮ ಭೂಕಂಪ ವೀಕ್ಷಣಾ ವ್ಯವಸ್ಥೆ ಅಳವಡಿಸುವುದಾಗಿ ಕೇಂದ್ರ ಸರ್ಕಾರ ಮಂಗಳವಾರ ಪ್ರಕಟಿಸಿದೆ. 

ಭಾರತ- ಬ್ರಿಟನ್‌ ಜಿಯೋ ಸೈನ್ಸಸ್ ಕಾರ್ಯಾಗಾರದಲ್ಲಿ ಈ ವಿಷಯ ಪ್ರಕಟಿಸಿದ ಕೇಂದ್ರ ಭೂ ವಿಜ್ಞಾನ ಸಚಿವ ಜಿತೇಂದ್ರ ಸಿಂಗ್ ಅವರು, ವೀಕ್ಷಣಾ ವ್ಯವಸ್ಥೆಗಳನ್ನು ಬುಧವಾರದೊಳಗೆ ಅಳವಡಿಸಲಾಗುವುದು ಎಂದರು.

ಭೂ ವಿಜ್ಞಾನ ಸಚಿವಾಲಯವು ಕಳೆದ ಎರಡು ವರ್ಷಗಳಲ್ಲಿ ವ್ಯಾಪಕ ವೀಕ್ಷಣಾ ಸೌಲಭ್ಯಗಳಿಗಾಗಿ 37 ಹೊಸ ಭೂಕಂಪನ ಕೇಂದ್ರಗಳನ್ನು ಸ್ಥಾಪಿಸಿದೆ. ಫಲಿತಾಂಶ-ಆಧಾರಿತ ವಿಶ್ಲೇಷಣೆಗಾಗಿ ಬೃಹತ್‌ ದತ್ತಾಂಶ ಸಂಗ್ರಹಿಸಿದೆ. ಮುಂದಿನ ಐದು ವರ್ಷಗಳಲ್ಲಿ, ನೈಜ ಸಮಯದ ದತ್ತಾಂಶ ಸಂಗ್ರಹ ಮತ್ತು ನಿರ್ವಹಣೆ ಸುಧಾರಿಸಲು ದೇಶದಾದ್ಯಂತ 100ಕ್ಕೂ ಹೆಚ್ಚು ಭೂಕಂಪನ ವೀಕ್ಷಣಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಅವರು ಹೇಳಿದರು.

ಭಾರತದಲ್ಲಿ ಮಾನವ ನಿರ್ಮಿತ ನೈಸರ್ಗಿಕ ವಿಕೋಪಗಳು ಕ್ಷಿಪ್ರವಾಗಿ ಏರುತ್ತಿವೆ. ಇವುಗಳನ್ನು ತಗ್ಗಿಸಲು ಸರಿಯಾದ ತಂತ್ರಗಳನ್ನು ರೂಪಿಸುವ ಅಗತ್ಯವಿದೆ. ಅಲ್ಲದೇ, ಭೂಮಿಯ ಹೊರ ಪದರ ಮತ್ತು ಕೆಳಗಿನ ಪದರಗಳ ವೈಫಲ್ಯಕ್ಕೆ ಕಾರಣವಾಗುವ ಭೌತಿಕ ಪ್ರಕ್ರಿಯೆಗಳ ಬಗ್ಗೆ ನಿರ್ಣಾಯಕ ಸಂಶೋಧನೆಯ ಅವಶ್ಯಕತೆಯೂ ಹೆಚ್ಚಿದೆ ಎಂದರು.   

ಈ ಮಧ್ಯೆ ಜೋಶಿಮಠದ ಸಂತ್ರಸ್ತರ ಪುನರ್ವಸತಿಗಾಗಿ ಗುರುತಿಸಲಾದ ಪ್ರದೇಶಗಳ ಭೌಗೋಳಿಕ ಸಮೀಕ್ಷೆ ನಡೆಸಬೇಕು ಎಂದು ಕೇಂದ್ರದ ಉನ್ನತಮಟ್ಟದ ಅಧಿಕಾರಿಗಳ ತಂಡ ಹೇಳಿದೆ.

ಜೋಶಿಮಠದ ಪರಿಸ್ಥಿತಿ ಅಂದಾಜಿಸಲು ಆಗಮಿಸಿರುವ ಕೇಂದ್ರ ಗೃಹ ಸಚಿವಾಲಯ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು ಡೆಹ್ರಾಡೂನ್‌ನಲ್ಲಿ ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರನ್ನು ಭೇಟಿಯಾಗಿ, ಭೌಗೋಳಿಕ ಸಮೀಕ್ಷೆಯ ಅವಶ್ಯಕತೆಯನ್ನು ಒತ್ತಿ ಹೇಳಿದರು.

‌‌ಜೋಶಿಮಠ ಸಾಂಸ್ಕೃತಿಕ, ಧಾರ್ಮಿಕ ಮತ್ತು ಭದ್ರತೆಯ ಕಾರ್ಯತಂತ್ರದ ದೃಷ್ಟಿಕೋನಗಳಿಂದ ಪ್ರಮುಖ ಪಟ್ಟಣವಾಗಿದೆ. ಇದರ ಪುನರ್‌ ನಿರ್ಮಾಣಕ್ಕೆ ಸಮಗ್ರ ಪ್ರಯತ್ನಗಳ ಅಗತ್ಯವನ್ನು ಕೇಂದ್ರ ತಂಡಕ್ಕೆ ಮನವರಿಕೆ ಮಾಡಿಕೊಟ್ಟ ಮುಖ್ಯಮಂತ್ರಿ ಧಾಮಿ, ಪಟ್ಟಣ ಉಳಿಸಲು ಮತ್ತು ಸಂತ್ರಸ್ತರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಯುದ್ಧೋಪಾದಿಯಲ್ಲಿ ಪ್ರಯತ್ನಿಸಲಾಗುತ್ತಿದೆ ಎಂದರು.

ಭೂಕುಸಿತವಾಗುತ್ತಿರುವ ಪ್ರದೇಶದ ನೆಲದಡಿ ನೀರು ಸಂಗ್ರಹವಾಗಿರುವುದೇ ಕುಸಿತಕ್ಕೆ ಕಾರಣವೆಂದು ಪರಿಗಣಿಸಲಾಗಿದೆ. ಆದರೆ, ಈ ನೀರಿನ ಮೂಲ ಈವರೆಗೆ ಪತ್ತೆಹಚ್ಚಲು ಆಗಿಲ್ಲ. ಇದಕ್ಕೆ ದೇಶದ ವಿಜ್ಞಾನಿಗಳ ನೆರವು ಪಡೆಯುವುದಾಗಿ ರಾಜ್ಯ ವಿಪತ್ತು ನಿರ್ವಹಣೆಯ (ಎಸ್‌ಡಿಎಂ) ಕಾರ್ಯದರ್ಶಿ ರಂಜಿತ್‌ ಸಿನ್ಹಾ  ಹೇಳಿದರು.

ಸಂತ್ರಸ್ತರಿಗೆ ಪರಿಹಾರ ಪ್ಯಾಕೇಜ್ ರೂಪಿಸಲು ರಾಜ್ಯ ಸರ್ಕಾರ ಕಾರ್ಯೋನ್ಮುಖವಾಗಿದೆ. ಇದನ್ನು ಶೀಘ್ರದಲ್ಲೇ ಕೇಂದ್ರಕ್ಕೆ ಕಳುಹಿಸಲಾಗುವುದು ಎಂದು ಅವರು ಹೇಳಿದರು. 

ಅತ್ಯಂತ ಅಪಾಯದ ಭೂಕಂಪ ವಲಯ– 5ರಲ್ಲಿ ಜೋಶಿಮಠ: ನಿರಂತರ ಭೂಕಂಪನಕ್ಕೆ ತುತ್ತಾಗುತ್ತಿರುವ ಜೋಶಿಮಠವು ಅತ್ಯಂತ ಅಪಾಯದ ಭೂಕಂಪ ವಲಯ –5ರ ವ್ಯಾಪ್ತಿಯಲ್ಲಿದೆ ಎಂದು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.  

1999ರಲ್ಲಿ ಸಂಭವಿಸಿದ ಚಮೋಲಿ ಭೂಕಂಪದ ವಲಯದಲ್ಲಿ ಜೋಶಿಮಠ ಇದ್ದು, ಇಲ್ಲಿ ಆಗಾಗ ಸಂಭವಿಸುವ ಲಘು ಕಂಪನಗಳಿಂದಾಗಿ ಭೂಮಿಯ ಒಳಪದರದ ಬಂಡೆಗಳ ಬಿಗಿಯಾದ ಬಂಧ ಸಡಿಲಗೊಂಡಿರುವ ಸಾಧ್ಯತೆ ಇದೆ. ಅಲ್ಲದೆ, ಭೂಮಿಯಲ್ಲಿ ಬಿರುಕು ಮತ್ತು ಕುಸಿತ ಹೆಚ್ಚಲು ವಿಪರೀತ ಮಳೆ ಮತ್ತು ಪರ್ವತಗಳಿಂದ ಭಾರಿ ಪ್ರಮಾಣದ ನೀರಿನ ಹರಿವು, ಪರ್ವತದ ಬಂಡೆಗಳ ಪದರಗಳಲ್ಲಿನ ಬೃಹತ್ ಬಿರುಕುಗಳಂತಹ ಅಂಶಗಳೂ ಕಾರಣವಾಗಿವೆ ಎಂದು ಅವರು ಹೇಳಿದ್ದಾರೆ.

ಜೋಶಿಮಠದಲ್ಲಿ ಸೂಕ್ಷ್ಮ ಭೂಕಂಪನ ವೀಕ್ಷಣಾ ವ್ಯವಸ್ಥೆ ಅಳವಡಿಸುವುದರಿಂದ ಈ ಪ್ರದೇಶದ ಭೂಕಂಪನ ಅಧ್ಯಯನವು, ಸುರಕ್ಷಿತ ವಾಸ ಸ್ಥಳಗಳು ಮತ್ತು ಮೂಲಸೌಕರ್ಯಗಳಿಗೆ ಎದುರಾಗುವ ಅಪಾಯ ಗುರುತಿಸಲು ನೆರವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬದರೀನಾಥ ಮತ್ತು ಹೇಮಕುಂಡ ಸಾಹಿಬ್‌ನಂತಹ ಪ್ರಸಿದ್ಧ ತೀರ್ಥಯಾತ್ರೆಯ ತಾಣಗಳಿಗೆ ಹಾಗೂ ಅಂತರರಾಷ್ಟ್ರೀಯ ಸ್ಕೀಯಿಂಗ್ ಗಮ್ಯಸ್ಥಾನ ಔಲಿಗೆ ಹೆಬ್ಬಾಗಿಲಾಗಿರುವ ಜೋಶಿಮಠ ಭೂಕುಸಿತದಂತಹ ಭಾರಿ ಸವಾಲು ಎದುರಿಸುತ್ತಿದೆ.

ಹೋಟೆಲ್‌ ನೆಲಸಮಕ್ಕೆ ಮಾಲೀಕರ ವಿರೋಧ
ಜೋಶಿಮಠ (ಉತ್ತರಾಖಂಡ) (ಪಿಟಿಐ):
ಜೋಶಿಮಠದಲ್ಲಿ ಭೂಕುಸಿತದಿಂದ ತೀವ್ರ ಹಾನಿಗೀಡಾದ ಎರಡು ಹೋಟೆಲ್‌ ಕಟ್ಟಡಗಳನ್ನು ಯಾವುದೇ ಮುನ್ಸೂಚನೆ ನೀಡದೆ, ದಿಢೀರ್‌ ನೆಲಸಮಗೊಳಿಸಲು ಮುಂದಾದ ಉತ್ತರಾಖಂಡ ಸರ್ಕಾರದ ನಡೆಗೆ ಹೋಟೆಲ್‌ ಮಾಲೀಕರು ಮಂಗಳವಾರ ತೀವ್ರ ವಿರೋಧ ವ್ಯಕ್ತಪಡಿಸಿದರು. ಕಟ್ಟಡ ನೆಲಸಮಕ್ಕೆ ಮೊದಲು ಸೂಕ್ತ ಪರಿಹಾರ ಒಂದೇ ಕಂತಿನಲ್ಲಿ ನೀಡುವಂತೆ ಆಗ್ರಹಿಸಿದರು.

‘ಮೌಂಟ್ ವ್ಯೂ’ ಮತ್ತು ‘ಮಲಾರಿ ಇನ್’ ಹೋಟೆಲ್‌ಗಳ ಕಟ್ಟಡಗಳಲ್ಲಿ ಬಾರಿ ಬಿರುಕು ಕಾಣಿಸಿ, ಎರಡೂ ಕಟ್ಟಡಗಳು ವಾಲಿದ್ದವು.  ಅಕ್ಕಪಕ್ಕದ ಜನವಸತಿ ಪ್ರದೇಶಕ್ಕೆ ಅಪಾಯಕಾರಿಯಾಗಿದ್ದ ಈ ಎರಡೂ ಹೋಟೆಲ್‌ಗಳನ್ನು ಮುಚ್ಚಲಾಗಿದ್ದು, ಕಟ್ಟಡಗಳ ನೆಲಸಮಕ್ಕೆ ರಾಜ್ಯ ಸರ್ಕಾರ ಸೋಮವಾರ ನಿರ್ಧಾರ ತೆಗೆದುಕೊಂಡಿತ್ತು. 

ಇದಕ್ಕೂ ಮೊದಲು ಜೋಶಿಮಠದ ಪರಿಸ್ಥಿತಿ ನಿಭಾಯಿಸಲು ಪ್ರತಿ ನಿಮಿಷವೂ ಮುಖ್ಯ ಎಂದಿದ್ದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ಎಸ್. ಸಂಧು ಅವರು ಹೆಚ್ಚಿನ ಅಪಾಯದ ವಲಯದ ಕಟ್ಟಡಗಳನ್ನು ಕೆಡವಲು ಮತ್ತು ಸಂತ್ರಸ್ತರನ್ನು ತ್ವರಿತವಾಗಿ ಸ್ಥಳಾಂತರಿಸಲು ಆದೇಶಿಸಿದ್ದರು.

ರಾಜ್ಯ ವಿಪತ್ತು ನಿರ್ವಹಣೆಯ (ಎಸ್‌ಡಿಎಂ) ಕಾರ್ಯದರ್ಶಿ ರಂಜಿತ್‌ ಸಿನ್ಹಾ ಅವರು, ಹೋಟೆಲ್‌ ಕಟ್ಟಡ ನೆಲಸಮಗೊಳಿಸಲು ರೂರ್ಕೀಯ ಕೇಂದ್ರ ಕಟ್ಟಡ ಸಂಶೋಧನಾ ಸಂಸ್ಥೆಗೆ (ಸಿಬಿಆರ್‌ಐ) ಹೊಣೆ ವಹಿಸಲಾಗಿದೆ. ಸಿಬಿಆರ್‌ಐ ತಜ್ಞರು ಕಟ್ಟಡಗಳ ಸ್ಥಿತಿಯ ತ್ವರಿತ ಪರಿಶೀಲನೆ ನಡೆಸಿದರು. ಕಟ್ಟಡಗಳ ಯಾಂತ್ರೀಕೃತ ತೆರವಿಗೆ ಅಗತ್ಯವಿರುವ ಸಲಕರಣೆಗಳ ಪಟ್ಟಿಯನ್ನೂ ನೀಡಿದ್ದಾರೆ ಎಂದು ಸುದ್ದಿಗಾರರಿಗೆ ತಿಳಿಸಿದರು. 

ಮಾಲೀಕರ ಅಳಲು: ‘ಹೋಟೆಲ್‌ ನೆಲಸಮಗೊಳಿಸುವ ಮಾಹಿತಿ ಬೆಳಿಗ್ಗೆಯಷ್ಟೇ ಪತ್ರಿಕೆಗಳನ್ನು ಓದಿದಾಗ ತಿಳಿಯಿತು. ನನ್ನ ಹೋಟೆಲ್ ಕಟ್ಟಡ ಅಸುರಕ್ಷಿತವೆಂದು ಗುರುತಿಸಲ್ಪಟ್ಟಿದ್ದರೆ ಅದನ್ನು ನೆಲಸಮಗೊಳಿಸುವ ಮೊದಲು ಸೂಕ್ತ ಪರಿಹಾರ ಒಂದೇ ಕಂತಿನಲ್ಲಿ ಕೊಡಬೇಕು’ ಎಂದು ‘ಮಲಾರಿ ಇನ್’ ಹೋಟೆಲ್‌ ಮಾಲೀಕ ಠಾಕೂರ್ ಸಿಂಗ್ ಮಂಗಳವಾರ ಒತ್ತಾಯಿಸಿದರು.

‘ಬೆವರು ಮತ್ತು ರಕ್ತ ಬಸಿದು ಈ ಹೋಟೆಲ್‌ ಕಟ್ಟಿದ್ದೇನೆ. ಏಕಾಏಕಿ ನನ್ನ ಕಣ್ಣೆದುರೇ, ಪರಿಹಾರ ನೀಡದೆ ಹೋಟೆಲ್‌ ಕೆಡವಿದರೆ ನನ್ನ ಪರಿಸ್ಥಿತಿ ಏನಾಗಬೇಕು?’ ಎಂದು ಭೋಟಿಯಾ ಬುಡಕಟ್ಟು ಸಮುದಾಯದ ಸಿಂಗ್‌ ಅಳಲು ತೋಡಿಕೊಂಡರು.

ಇದೇ ಭಾವನೆ ವ್ಯಕ್ತಪಡಿಸಿದ ‘ಮೌಂಟ್‌ ವ್ಯೂ’ ಹೋಟೆಲ್‌ ಮಾಲೀಕ ಲಾಲ್‌ಮಣಿ ಸೆಮ್ವಾಲ್‌ ‘ಕಟ್ಟಡ ಕೆಡವುತ್ತಿರುವುದು, ಪರಿಶ್ರಮದಿಂದ ಬೆಳೆಸಿದ ಮಗುವನ್ನು ಹೆತ್ತವರ ಎದುರೇ ಕೊಲ್ಲುತ್ತಿರುವಂತಿದೆ’ ಎಂದರು.

ಕಟ್ಟಡಗಳ ನೆಲಸಮಕ್ಕಾಗಿ ಸುತ್ತಮುತ್ತಲಿನ ಪ್ರದೇಶಗಳಿಗೆ ವಿದ್ಯುತ್‌ ಪೂರೈಕೆ ಸ್ಥಗಿತಗೊಳಿಸಲಾಗಿತ್ತು. ಇದರಿಂದ ಸುಮಾರು 500 ಮನೆಗಳಿಗೆ ವಿದ್ಯುತ್‌ ಅಡಚಣೆಯಾಯಿತು.  

ಮನೆಗಳು, ರಸ್ತೆಗಳು ಮತ್ತು ಜಮೀನುಗಳಲ್ಲಿ ದೊಡ್ಡ ಬಿರುಕುಗಳು ದಿನೇ ದಿನೇ ಹೆಚ್ಚುತ್ತಿದ್ದು, ಅನೇಕ ಮನೆಗಳು ವಾಲಿವೆ. ಮತ್ತಷ್ಟು ಮನೆಗಳು ಭೂಕುಸಿತದಲ್ಲಿ ಮುಳುಗಿವೆ. ಪಟ್ಟಣ ಕ್ರಮೇಣ ಮುಳುಗುತ್ತಿದೆ ಎಂದು ಸ್ಥಳೀಯರು ಹೇಳಿದರು.

ತುರ್ತು ವಿಚಾರಣೆಗೆ ನಿರಾಕರಣೆ; ಜ.16ರಂದು ವಿಚಾರಣೆಗೆ ‘ಸುಪ್ರೀಂ’ ಒಪ್ಪಿಗೆ
ಜೋಶಿಮಠದಲ್ಲಿ ಉದ್ಭವಿಸಿರುವ ಪ್ರಾಕೃತಿಕ ವಿಪತ್ತನ್ನು ‘ರಾಷ್ಟ್ರೀಯ ದುರಂತ’ವೆಂದು ಘೋಷಿಸಲು ನ್ಯಾಯಾಂಗ ಮಧ್ಯಪ್ರವೇಶಿಸುವಂತೆ ಕೋರಿರುವ ಮೇಲ್ಮನವಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ಮಂಗಳವಾರ ನಿರಾಕರಿಸಿತು.

‘ಇಂತಹ ಪರಿಸ್ಥಿತಿ ನಿಭಾಯಿಸಲು ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಸರ್ಕಾರಗಳು ಇವೆ. ಎಲ್ಲಾ ಪ್ರಮುಖ ವಿಷಯಗಳನ್ನು ನಮ್ಮ ಬಳಿಗೆ ತರಬಾರದು. ಈ ಅರ್ಜಿಯನ್ನು ಜ.16 ರಂದು ವಿಚಾರಣೆಗೆ ಪಟ್ಟಿ ಮಾಡಲಾಗುವುದು’ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ಮತ್ತು ನ್ಯಾಯಮೂರ್ತಿ ಪಿ.ಎಸ್. ನರಸಿಂಹ ಅವರಿದ್ದ ಪೀಠ ಹೇಳಿತು.

ಇದಕ್ಕೂ ಮೊದಲು, ಸ್ವಾಮಿ ಅವಿಮುಕ್ತೇಶ್ವರನಂದ್ ಸರಸ್ವತಿ ಪರ ವಕೀಲ ಪರಮೇಶ್ವರ್‌ ನಾಥ್‌ ಮಿಶ್ರಾ ಅವರು ಅರ್ಜಿಯ ತುರ್ತು ವಿಚಾರಣೆಗೆ ಪಟ್ಟಿ ಮಾಡಿಸಲು ಸೋಮವಾರ ಕೋರಿದ್ದನ್ನು ಪ್ರಸ್ತಾಪಿಸಿ, ಬುಧವಾರ ತುರ್ತು ವಿಚಾರಣೆ ನಡೆಸುವಂತೆ ಪೀಠಕ್ಕೆ ಮನವಿ ಮಾಡಿದರು.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು