ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾತಂತ್ರ್ಯೋತ್ಸವ: ಮೋದಿಗೆ ಫೋನ್ ಮಾಡಿ ಶುಭ ಕೋರಿದ ಒಲಿ

ನೇಪಾಳ ಗಡಿ ವಿವಾದದ ಬಳಿಕ ಮೊದಲ ಬಾರಿಗೆ ದೂರವಾಣಿ ಸಂಭಾಷಣೆ
Last Updated 15 ಆಗಸ್ಟ್ 2020, 12:04 IST
ಅಕ್ಷರ ಗಾತ್ರ

ನವದೆಹಲಿ: ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ನೇಪಾಳದ ನಡುವಿನ ಸಂಬಂಧ ಕಹಿಯಾದ ಬಳಿಕ ಇದೇ ಮೊದಲ ಬಾರಿಗೆ ನೇಪಾಳದ ಪ್ರಧಾನಿ ಕೆ.ಪಿ.ಶರ್ಮ ಒಲಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ದೂರುವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ.

‘ಭಾರತದ 74ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ನೇಪಾಳದ ಸರ್ಕಾರ ಹಾಗೂ ಜನತೆಯ ಪ‍ರವಾಗಿ ಶುಭಾಶಯ ತಿಳಿಸಲು ಕರೆ ಮಾಡಿದ್ದ ಒಲಿ, ಇದೇ ವೇಳೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಎರಡು ವರ್ಷ ಕಾಲ ಸದಸ್ಯ ರಾಷ್ಟ್ರವಾಗಿ ಭಾರತ ಆಯ್ಕೆ ಆಗಿರುವುದಕ್ಕೆ ಅಭಿನಂದನೆ ಸಲ್ಲಿಸಿದರು. ಇದಕ್ಕೆ ಪ್ರತಿಯಾಗಿ ಧನ್ಯವಾದ ತಿಳಿಸಿದ ಮೋದಿ ಅವರು, ನೇಪಾಳ ಹಾಗೂ ಭಾರತದ ನಡುವಿನ ನಾಗರಿಕ ಹಾಗೂ ಸಾಂಸ್ಕೃತಿಕ ಸಂಬಂಧವನ್ನು ಸ್ಮರಿಸಿದರು’ ಎಂದು ವಿದೇಶಾಂಗ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

‘ಕೋವಿಡ್‌–19 ಪಿಡುಗಿನ ಪರಿಸ್ಥಿತಿ ನಿಭಾಯಿಸಲು ಭಾರತದ ಬೆಂಬಲವಾಗಿ ನಿಲ್ಲಲಿದೆ ಎಂದು ನೇಪಾಳಕ್ಕೆ ಮೋದಿ ಅವರು ಭರವಸೆ ನೀಡಿದರು’ ಎಂದು ಸಚಿವಾಲಯದ ವಕ್ತಾರರೊಬ್ಬರು ತಿಳಿಸಿದರು. ಇದಕ್ಕೂ ಮೊದಲು ಏ.10ರಂದು ಇಬ್ಬರೂ ನಾಯಕರು ದೂರವಾಣಿ ಮೂಲಕ ಮಾತನಾಡಿದ್ದರು.

ಭಾರತ–ನೇಪಾಳ ಹಾಗೂ ಚೀನಾದ ಗಡಿಯಾಗಿರುವ ಲಿಪುಲೇಖ್‌ ಪಾಸ್‌ಗೆ ಉತ್ತರಾಖಂಡ ದಾರ್ಚುಲದಿಂದ ಭಾರತವು 80 ಕಿ.ಮೀ. ರಸ್ತೆ ನಿರ್ಮಾಣ ಮಾಡಿರುವುದನ್ನು ಮೂರು ತಿಂಗಳ ಹಿಂದೆ ನೇಪಾಳ ವಿರೋಧಿಸಿತ್ತು. ಇದಾದ ಬಳಿಕ ಕಾಲಾಪಾನಿ, ಲಿಪುಲೇಖ್‌ ಪಾಸ್‌, ಲಿಂಪಿಯಂಧುರಾ ಸೇರಿದಂತೆ ಭಾರತಕ್ಕೆ ಸೇರಿರುವ 400 ಚದರ ಕಿ.ಮೀ. ಭೂಪ್ರದೇಶವನ್ನು ತನ್ನದೆಂದು ಹೇಳಿಕೊಂಡು ನೇಪಾಳದ ಪರಿಷ್ಕೃತ ಭೂಪಟ ಸಿದ್ಧಪಡಿಸಿದೆ. ಇದಕ್ಕೆ ನೇಪಾಳ ಸಂಸತ್ತಿನ ಅನುಮೋದನೆಯನ್ನೂ ಪಡೆದಿದೆ.

ಲಡಾಖ್‌ನಲ್ಲಿ ಚೀನಾ ಗಡಿ ತಗಾದೆ ತೆಗೆದ ಸಂದರ್ಭದಲ್ಲೇ ನೇಪಾಳವೂ ಗಡಿ ವಿವಾದಕ್ಕೆ ಮುಂದಾಗಿರುವ ಕಾರಣ,ನೇಪಾಳದ ಈ ನಡೆಯ ಹಿಂದೆ ಚೀನಾದ ಕೈವಾಡವಿದೆ ಎಂದು ಭಾರತವು ಸಂಶಯಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT