ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಬ್ ಪ್ರತಿಕ್ರಿಯೆಗಳು ಚುರುಕುಮುಟ್ಟಿಸಿದ್ದರಿಂದ ನೂಪುರ್ ವಿರುದ್ಧ ಕ್ರಮ: ಓಮರ್

ನೂಪುರ್‌ ಅಮಾನತು: ಅರಬ್‌ ವಿರೋಧ ಹಿನ್ನೆಲೆಯಲ್ಲಿ ಬಿಜೆಪಿ ಕ್ರಮ– ಓಮರ್‌ ಅಬ್ದುಲ್ಲಾ
Last Updated 5 ಜೂನ್ 2022, 13:41 IST
ಅಕ್ಷರ ಗಾತ್ರ

ಶ್ರೀನಗರ: ಯಾವುದೇ ಧಾರ್ಮಿಕ ವ್ಯಕ್ತಿಗಳಿಗೆ ಅವಮಾನಿಸುವುದರ ವಿರುದ್ಧ ಬಿಜೆಪಿ 'ದಿಢೀರನೆ ಎಚ್ಚೆತ್ತು' ಬಹಿರಂಗವಾಗಿ ಖಂಡಿಸಿರುವುದರ ಹಿಂದೆ ವಿದೇಶಿಯರನ್ನು ಓಲೈಸುವ ಗುರಿಯಿದೆ ಎಂದು ನ್ಯಾಷನಲ್‌ ಕಾನ್ಫರೆನ್ಸ್‌ ಉಪಾಧ್ಯಕ್ಷ ಓಮರ್‌ ಅಬ್ದುಲ್ಲಾ ಟೀಕಿಸಿದ್ದಾರೆ.

ಬಿಜೆಪಿಯ ಈ ದಿಢೀರ್‌ ಎಚ್ಚರವು ಭಾರತದಲ್ಲಿನ ಲಕ್ಷಾಂತರ ಮುಸ್ಲೀಮರ ಭಾವನೆಗಳಿಗೆ ಧಕ್ಕೆಯುಂಟಾಗಿರುವುದರ ಕುರಿತಾಗಿ ತೆಗೆದುಕೊಂಡಿರುವ ಕ್ರಮ ಅಲ್ಲ ಎಂದು ಭಾನುವಾರ ಹೇಳಿದ್ದಾರೆ.

ಬಿಜೆಪಿ ರಾಷ್ಟ್ರೀಯ ವಕ್ತಾರೆ ನೂಪುರ್‌ ಶರ್ಮಾ ಟಿವಿ ಕಾರ್ಯಕ್ರಮವೊಂದರಲ್ಲಿ ಪ್ರವಾದಿ ಮಹಮ್ಮದ್‌ ಅವರ ವಿರುದ್ಧ ಅವಹೇಳಕಾರಿಯಾಗಿ ಮಾತನಾಡಿರುವುದು ವಿವಾದ ಸೃಷ್ಟಿಸಿದೆ. ಉತ್ತರ ಪ್ರದೇಶದ ಕಾನ್ಪುರದಲ್ಲಿ ಅದೇ ವಿಚಾರವಾಗಿ ಕೋಮು ಗಲಭೆ ಉಂಟಾಗಿತ್ತು. ಇಂದು ಪ್ರಕಟಣೆ ಹೊರಡಿಸಿರುವ ಬಿಜೆಪಿ, 'ಯಾವುದೇ ವರ್ಗ ಅಥವಾ ಧರ್ಮವನ್ನು ಅವಹೇಳನ ಮಾಡುವ ಅಥವಾ ಕೀಳಾಗಿ ಕಾಣುವ ಯಾವುದೇ ಸಿದ್ಧಾಂತಗಳಿಗೆ ಬಿಜೆಪಿಯ ಕಠಿಣ ವಿರೋಧವಿದೆ' ಎಂದಿದೆ.

ಅದರ ಬಗ್ಗೆ ಪ್ರತಿಕ್ರಿಯಿಸಿರುವ ಓಮರ್‌ ಅಬ್ದುಲ್ಲಾ, 'ಬಿಜೆಪಿಯು ಇದೀಗ ಎಚ್ಚೆತ್ತು, ಯಾವುದೇ ಧರ್ಮದ ಧಾರ್ಮಿಕ ವ್ಯಕ್ತಿಗಳಿಗೆ ಅವಮಾನ ಮಾಡುವುದನ್ನು ಖಂಡಿಸಿದೆ. ಆದರೆ, ಭಾರತದ ಲಕ್ಷಾಂತರ ಮುಸ್ಲಿಮರ ಭಾವನೆಗಳನ್ನು ನೋಯಿಸಿರುವುದಕ್ಕೂ ಇದಕ್ಕೂ ಸಂಬಂಧವಿಲ್ಲ. ಕ್ಷಮೆಯಾಚಿಸುವ ರೀತಿಯ ಈ ಪ್ರಕಟಣೆಯು ವಿದೇಶಿಗರನ್ನು ಗುರಿಯಾಗಿಸಿ ಮಾಡಿರುವುದಾಗಿದೆ' ಎಂದಿದ್ದಾರೆ.

ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಅರುಣ್‌ ಸಿಂಗ್‌ ಅವರು ಪ್ರಕಟಣೆ ಹೊರಡಿಸಿದ ಕೆಲ ಸಮಯದಲ್ಲೇ ಬಿಜೆಪಿಯು ನೂಪುರ್‌ ಶರ್ಮಾ ಅವರನ್ನು ಪಕ್ಷದಿಂದ ಅಮಾನತು ಮಾಡಿದೆ. ದೆಹಲಿ ಘಟಕದ ಮಾಧ್ಯಮ ವಿಭಾಗದ ನೇತೃತ್ವ ವಹಿಸಿದ್ದ ನವೀನ್ ಕುಮಾರ್ ಜಿಂದಾಲ್ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ.

ಬಿಜೆಪಿಯ ಈ ಕ್ರಮದ ಬಗ್ಗೆ ಮಾತನಾಡಿರುವ ಓಮರ್‌, 'ಅರಬ್‌ ಜಗತ್ತಿನಲ್ಲಿ ವ್ಯಕ್ತವಾದ ಪ್ರತಿಕ್ರಿಯೆಗಳು ನಿಜಕ್ಕೂ ಚುರುಕುಮುಟ್ಟಿಸಿದಂತೆ' ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT